ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಡುಗೆ ನೀಡಿದ ನಟಿ ಶಿಲ್ಪಾ ಶೆಟ್ಟಿ
x
ರೋಬೋಟಿಕ್ ಆನೆ

ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಡುಗೆ ನೀಡಿದ ನಟಿ ಶಿಲ್ಪಾ ಶೆಟ್ಟಿ

ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದ ಶಿಲ್ಪಾಶೆಟ್ಟಿ ಜೀವಂತ ಆನೆ ನೀಡುವುದಾಗಿ ಸಂಕಲ್ಪ ಮಾಡಿಕೊಂಡಿದ್ದರಂತೆ. ಆದರೆ ಕಾನೂನು ನಿರ್ಬಂಧಗಳು ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಕಾರಣದಿಂದಾಗಿ, ರೋಬೋಟಿಕ್ ಆನೆಯನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿ ಈ ಆನೆಯನ್ನು ನೀಡಿದ್ದಾರೆ.


ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ರೇಣುಕಾಚಾರ್ಯ ದೇವಾಲಯಕ್ಕೆ 10 ಲಕ್ಷ ರೂಪಾಯಿ ಮೌಲ್ಯದ ರೋಬೋಟಿಕ್ ಆನೆಯನ್ನು ಪೇಟಾ ಮೂಲಕ ಕೊಡುಗೆಯಾಗಿ ನೀಡಿದ್ದಾರೆ.

ಭದ್ರಾ ತೀರದಲ್ಲಿರುವ ರಂಭಾಪುರಿ ಮಠವು ಐದು ಪಂಚ ಪೀಠಗಳಲ್ಲಿ ಅಗ್ರಗಣ್ಯವಾಗಿದ್ದು, ಈ ರೊಬೊಟಿಕ್ ಆನೆಯನ್ನು ಉಡುಗೊರೆಯಾಗಿ ಸ್ವೀಕರಿಸಿದೆ. ರಂಭಾಪುರಿ ಮಠದ ಪೀಠಾಧಿಪತಿ ವೀರ ಸೋಮೇಶ್ವರ ಸ್ವಾಮೀಜಿ ರೋಬೋಟಿಕ್ ಆನೆಯನ್ನು ಮಠದ ಆವರಣಕ್ಕೆ ಸ್ವಾಗತಿಸಿದರು.

ನೈಜ ಆನೆಯನ್ನು ಹೋಲುವ ರೋಬೋಟಿಕ್ ಆನೆಯು ಮಠದ ಆವರಣದಲ್ಲಿ ಉಳಿದು ಭಕ್ತರನ್ನು ಆಶೀರ್ವದಿಸಲಿದೆ. ಮಿಟುಕಿಸುವ ಕಣ್ಣುಗಳು, ತೂಗಾಡುವ ಕಿವಿಗಳು, ತಲೆ, ಸೊಂಡಿಲು ಮತ್ತು ಬಾಲವನ್ನು ಒಳಗೊಂಡಂತೆ ಅದರ ನೈಜ ಆನೆಯ ಚಲನವಲನಗಳನ್ನು ಈ ರೋಬೋಟಿಕ್ ಆನೆ ಹೊಂದಿದೆ.

ಆಗಾಗ್ಗೆ ರಂಭಾಪುರಿ ಮಠಕ್ಕೆ ಭೇಟಿ ನೀಡುವ ಶಿಲ್ಪಾಶೆಟ್ಟಿ ಜೀವಂತ ಆನೆ ನೀಡುವುದಾಗಿ ಸಂಕಲ್ಪ ಮಾಡಿಕೊಂಡಿದ್ದರಂತೆ. ಆದರೆ ಕಾನೂನು ನಿರ್ಬಂಧಗಳು ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಕಾರಣದಿಂದಾಗಿ, ರೋಬೋಟಿಕ್ ಆನೆಯನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿ ಈ ಆನೆಯನ್ನು ನೀಡಿದ್ದಾರೆ.

ಆನೆಯನ್ನು ಅನಾವರಣಗೊಳಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ರಂಭಾಪುರಿ ಮಠದ ನಿರ್ಧಾರವನ್ನು ಶ್ಲಾಘಿಸಿದರು. ಆನೆಯನ್ನು ನೀಡುವಂತೆ ಅನೇಕ ದೇವಾಲಯಗಳು ಮತ್ತು ಮಠಗಳು ಕೇಳಿವೆ. ಆದರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ, ಯಾವುದೇ ದೇವಾಲಯಕ್ಕೂ ಆನೆಗಳನ್ನು ಕೊಡುಗೆಯಾಗಿ ನೀಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ರೋಬೋಟಿಕ್ ನಂತಹ ತಂತ್ರಜ್ಞಾನ ಬಂದಿದ್ದು, ಶಿಲ್ಪಾಶೆಟ್ಟಿ ಅವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಇಂಧನ ಸಚಿವ ಕೆಜೆ ಜಾರ್ಜ್, ಶಾಸಕ ಟಿ.ಡಿ. ರಾಜೇಗೌಡ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮತ್ತಷ್ಟು ದೇವಾಲಯ ಹಾಗೂ ಮಠಗಳಲ್ಲಿ ರೋಬೋಟಿಕ್ ಆನೆಗಳನ್ನು ಇಡಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ರಂಭಾಪುರಿ ಸ್ವಾಮೀಜಿ ಹೇಳಿದರು.

Read More
Next Story