
ಕುರಿ ಕೊಟ್ಟು ಮಾಂಸ ಕೊಳ್ಳುವ ಕರ್ನಾಟಕ?
ಕರ್ನಾಟಕದ ಕುರಿಗಳ ತಳಿ ಹಾಗೂ ಮಾಂಸದ ಗುಣಮಟ್ಟದ ಕಾರಣಕ್ಕೆ ಇಲ್ಲಿ ಬೆಲೆ ಹೆಚ್ಚು ಇದೆ. ರಾಜಸ್ಥಾನ ಮತ್ತು ಉತ್ತರ ಭಾರತದ ಹಲವೆಡೆ ಕುರಿ ಮಾಂಸದ ಬೆಲೆ ತುಂಬಾ ಕಡಿಮೆ.
ಕುರಿ ಉತ್ಪಾದನೆ ಸಮೃದ್ಧವಾಗಿರುವ ನಾಡಿಗೆ ದೂರದ ರಾಜಸ್ಥಾನದಿಂದ ಮಾಂಸ ಆಮದು ಮಾಡುವ ಸ್ಥಿತಿ ಏಕೆ ಬಂತು? ಈ ಚಿಂತೆ ನಾಡಿನ ಮಾಂಸಪ್ರಿಯರು ಮತ್ತು ಪ್ರಾಮಾಣಿಕ ಕುರಿ ಸಾಕಾಣಿಕೆದಾರರನ್ನು ಕಾಡುತ್ತಿದೆ.
ಕುರಿ ಮಾಂಸದ ಹೆಸರಿನಲ್ಲಿ ನಾಯಿ ಮಾಂಸ ತಂದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿ ಹೊರರಾಜ್ಯದಿಂದ ಮಾಂಸ ಆಮದು ಮಾಡಬೇಕಿತ್ತೇ ಎಂಬ ಹೊಸ ಚರ್ಚೆಯೊಂದು ಶುರುವಾಗಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ರಾಜ್ಯದಲ್ಲಿ ವಿಭಾಗವಾರು ಕುರಿ ಮಾಂಸ ಸಂಸ್ಕರಣಾ ಕೇಂದ್ರದ ಸ್ಥಾಪನೆಗೆ ಚಿಂತನೆ ನಡೆದಿದೆ.
ಕುರಿ ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 2019-2020ರ ಜಾನುವಾರು ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಅಂದಾಜು 111,00,000 ಕುರಿಗಳಿದ್ದವು. ರಾಜ್ಯದಲ್ಲಿ ಪ್ರಮುಖವೆನಿಸಿರುವ ಐದು ತಳಿಗಳು ಬಳ್ಳಾರಿ, ದಖ್ಖನಿ, ಕೆಂಗುರಿ, ಹಾಸನ ಮತ್ತು ಮಂಡ್ಯ (ಬನ್ನೂರು) ತಳಿ ಇವು ರಾಜ್ಯದ ಒಟ್ಟಾರೆ ಕುರಿ ಸಂಖ್ಯೆಯ ಶೇ 48.6ರಷ್ಟು ಪ್ರಮಾಣದಲ್ಲಿ ಇವೆ.
ರಾಜ್ಯದ ಆರು ಸ್ಥಳಗಳಲ್ಲಿ ಕುರಿ ಸಂವರ್ಧನಾ ಕೇಂದ್ರಗಳಿವೆ. ಚಳ್ಳಕೆರೆ, ವಿಳ್ಳೆವರ್ತಿ, ಸುತ್ತಟ್ಟಿ, ಗುತ್ತೇಲು ಮತ್ತು ಧನಗೂರಿನಲ್ಲಿ ಈ ಕೇಂದ್ರಗಳಿವೆ. ಸಕ್ರಿಯವಾಗಿರುವ ಕೆಲವೇ ಕೇಂದ್ರಗಳ ಪೈಕಿ ಒಂದೊಂದು ಕೇಂದ್ರವೂ ಒಂದೊಂದು ತಳಿಯ ಸಂವರ್ಧನೆಗೆ ಹೆಸರುವಾಸಿ. ಯಾವುದೇ ತಳಿ, ಗಾತ್ರ, ಮಾದರಿಯ ಕುರಿಗಳು ಕರ್ನಾಟಕದಲ್ಲಿ ಸಮೃದ್ಧವಾಗಿ ಲಭ್ಯ ಇವೆ ಎಂಬುದು ಈ ಕ್ಷೇತ್ರದ ಪರಿಣತರ ಮಾತು.
ಕುರಿ ಸಾಕಣೆ ಹೆಚ್ಚು ಗುರುತಿಸಿಕೊಂಡಿರುವುದು ಹಾಸನ - ಮಂಡ್ಯ ಭಾಗದಲ್ಲಿ. ಆದರೆ, ವಾಸ್ತವ ಮಾರುಕಟ್ಟೆ ಇರುವುದು ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ. ಇಲ್ಲಿ ಕುರುಬರ ಜನಸಂಖ್ಯೆ ಮತ್ತು ಕುರಿ ಸಾಕಣೆದಾರರ ಸಂಖ್ಯೆಯೂ ಹೆಚ್ಚು ಇದೆ. ಸಾವಿರಾರು ಜನರಿಗೆ ಇದೇ ಮೂಲ ಕಸುಬು. ಕೆಲವರು ಕುರಿ- ಮೇಕೆ ಫಾರ್ಮ್‌ಮಾಡಿ ಅತ್ಯಾಧುನಿಕ ರೀತಿಯಲ್ಲಿ ಬೆಳೆಸುತ್ತಾರೆ. ಬಹುತೇಕರು ಅಲೆಮಾರಿ ಕುರಿಗಾಹಿಗಳಾಗಿ ಬೆಟ್ಟ- ಗುಡ್ಡಗಳಾಚೆ ಕುರಿಗಳನ್ನು ಮೇಯಿಸಿಕೊಂಡು ರೊಪ್ಪದಲ್ಲಿ ಇರಿಸಿ ಸಾಕುತ್ತಾರೆ.
ಅಗ್ಗದ ಹೆಸರಲ್ಲಿ ಕಲಬೆರಕೆ?
ಸಮಸ್ಯೆಯ ಮೂಲಕ್ಕೆ ಬರುವುದಾದರೆ ಇಡೀ ವ್ಯವಸ್ಥೆಯನ್ನು ಹಿಡಿದಿಟ್ಟುಕೊಂಡಿರುವುದು ವ್ಯಾಪಾರಿಗಳು ಮತ್ತು ಮಧ್ಯವರ್ತಿ ಜಾಲ. ಕರ್ನಾಟಕದ ಕುರಿಗಳ ತಳಿ ಹಾಗೂ ಮಾಂಸದ ಗುಣಮಟ್ಟದ ಕಾರಣಕ್ಕೆ ಇಲ್ಲಿ ಬೆಲೆ ಹೆಚ್ಚು ಇದೆ. ರಾಜಸ್ಥಾನ ಮತ್ತು ಉತ್ತರ ಭಾರತದ ಹಲವೆಡೆ ಕುರಿ ಮಾಂಸದ ಬೆಲೆ ತುಂಬಾ ಕಡಿಮೆ. ಆದರೆ, ಗುಣಮಟ್ಟ, ಮಾಂಸದ ನೈಜತೆ ಬಗ್ಗೆ ಇನ್ನೂ ಸಾಕಷ್ಟು ಅನುಮಾನಗಳಿವೆ ಎನ್ನುತ್ತಾರೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರ ವರ್ತೂರು.
ಇದೇ ಮಾತನ್ನು ಕನಕಪುರ ಕುರಿ ಮತ್ತು ಮೇಕೆ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಡಾ.ಪುಟ್ಟರಾಜು ಅವರೂ ಕೂಡಾ ಅನುಮೋದಿಸುತ್ತಾರೆ.
ಬೆಂಗಳೂರಿಗರ ಬಾಯಿ ರುಚಿ ಬದಲು?
ಮಾಂಸ ಪ್ರಿಯರ ಬಾಯಿ ರುಚಿ ಬದಲಾಗಿದೆ. ಬೆಂಗಳೂರಿನಲ್ಲಿ ಈ ಟ್ರೆಂಡ್‌ಜೋರಾಗಿದೆ. ಮಾಂಸ ಖರೀದಿಗೆ ಬೆಂಗಳೂರಿನಿಂದ ಬರುವ ಮಂದಿ ಇಲ್ಲಿ ಫಾರ್ಮ್‌ಹೌಸ್‌ಗಳಲ್ಲಿ ಬೆಳೆಸಿದ ಕುರಿಯ ಮಾಂಸವನ್ನು ಬಯಸುವುದಿಲ್ಲ. ಬದಲಿಗೆ ಗುಡ್ಡಗಾಡಿನಲ್ಲಿ ಮೇಯುತ್ತಾ ಬೆಳೆದ ಕುರಿಯ ಮಾಂಸವನ್ನೇ ಬಯಸುತ್ತಾರೆ. ಅದಕ್ಕಾಗಿ ನಾವು ರೈತರಿಗೆ ಕುರಿಗಳನ್ನು ಸಾಕಲು ಕೊಟ್ಟು, ಗುಡ್ಡಗಾಡಿನಲ್ಲಿ ಮೇಯಲು ಬಿಡುತ್ತೇವೆ. ಗುಣಮಟ್ಟದ ನಂಬಿಕೆಯ ಮೇಲೆ ಇಲ್ಲಿ ಕುರಿ ಮಾಂಸ ಮಾರಾಟವಾಗುತ್ತದೆ. ಆದರೆ, ಇತ್ತೀಚೆಗೆ ಗೋಮಾಳವೂ ಕಡಿಮೆಯಾಗಿ ಕುರಿ ಮೇಯಿಸಲು ಜಾಗವಿಲ್ಲದಂತಾಗಿದೆ. ಇದು ಕುರಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಸಹಜವಾಗಿ ಬೆಲೆ ಏರಿದೆ. ಬೆಲೆ ಏರಿದ ಹೊತ್ತಿನಲ್ಲಿ ಅಗ್ಗದ ಬೆಲೆಯ ಮಾರುಕಟ್ಟೆಯತ್ತ ವ್ಯಾಪಾರಿಗಳು, ಮಧ್ಯವರ್ತಿಗಳು ಮುಖಮಾಡಿದ್ದಾರೆ. ಬದಲಾದ ಬಾಯಿರುಚಿ ವ್ಯಾಪಾರಿಗಳ ಬಂಡವಾಳವಾಗಿಬಿಟ್ಟಿದೆ ಎಂದು ಈ ಜಾಲ ತೆರೆದಿಟ್ಟರು ಪುಟ್ಟರಾಜು.
ವ್ಯಾಪಾರಿಗೆ ಲಾಭ, ಗ್ರಾಹಕರಿಗೆ ಮೋಸ
ʼವ್ಯಾಪಾರಿ ಸಹಜವಾಗಿ ತನ್ನ ಲಾಭಕ್ಕೆ ಆದ್ಯತೆ ಕೊಡುತ್ತಾನೆ. ಅಗ್ಗದ ಬೆಲೆಗೆ ಎಲ್ಲೇ ಸಿಕ್ಕರೂ ಖರೀದಿಸಿ ಮಾರುತ್ತಾನೆ. ಇಲ್ಲಿ ಮೋಸ ಹೋಗುವುದು ಸಾಮಾನ್ಯ ಗ್ರಾಹಕರು. ಜನಾರೋಗ್ಯದ ಕಾಳಜಿಯಿಂದಲಾದರೂ ಈ ಮಾರುಕಟ್ಟೆ ವ್ಯವಸ್ಥೆ ಮೇಲೆ ಆಡಳಿತವು ಕಣ್ಣಿಟ್ಟಿರಬೇಕುʼ ಎಂದು ಒತ್ತಾಯಿಸಿದರು ಕೊಪ್ಪಳ ಜಿಲ್ಲೆ ಅಳವಂಡಿಯ ರೈತ ಏಳು ಕೋಟೇಶ ಕೋಮಲಾಪುರ.
ಆಧುನಿಕ ಮತ್ತು ಸಾಂಪ್ರದಾಯಿಕ ಪದ್ಧತಿಯಲ್ಲಿ ಕುರಿ ಸಾಕುವವರು ಎದುರಿಸುತ್ತಿರುವುದು ವ್ಯವಸ್ಥಿತ ಮಾರಾಟದ ಕೊರತೆ. ಉದಾಹರಣೆಗೆ ಕರ್ನಾಟಕದಲ್ಲಿ ಕುರಿ ವ್ಯಾಪಾರ ಅತಿ ದೊಡ್ಡ ಪ್ರಮಾಣದಲ್ಲಿ ನಡೆಯುವುದು ಕೊಪ್ಪಳ ಜಿಲ್ಲೆಯ ಕೂಕನಪಳ್ಳಿಯಲ್ಲಿ. ರಾಷ್ಟ್ರೀಯ ಹೆದ್ದಾರಿ ೫೦ರ ಬದಿಯಲ್ಲಿರುವ ಇದು, ಏಷ್ಯಾದ ಅತಿ ದೊಡ್ಡ ಕುರಿ ಸಂತೆ. ಇಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರು ಕುರಿ ಮಾರಾಟಕ್ಕೆ ಬರುತ್ತಾರೆ. ಪ್ರತಿ ಶುಕ್ರವಾರ ಇಲ್ಲಿ ಅತಿದೊಡ್ಡ ಕುರಿ ಜಾತ್ರೆಯೇ ನಡೆಯುತ್ತದೆ. ಉಳಿದಂತೆ ಅಮೀನಗಡ, ಬಾಗಲಕೋಟೆ ಭಾಗಗಳಲ್ಲಿಯೂ ಕುರಿ ಸಂತೆ ನಡೆಯುತ್ತದೆ.
ಕರ್ನಾಟಕದ ಕುರಿ ನಾರ್ತ್‌ಇಂಡಿಯನ್‌ಮಟನ್!!
ಆದರೆ ಕೂಕನಪಳ್ಳಿಗೆ ಬರುವ ಖರೀದಿದಾರರು ಗೋವಾ, ಮಹಾರಾಷ್ಟ್ರ ಹೊರತುಪಡಿಸಿದರೆ ಹೆಚ್ಚು ಮಂದಿ ಉತ್ತರ ಭಾರತದವರು. ಇವರಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನದವರೇ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಇವರು ಇಲ್ಲಿಂದ ಸಾವಿರಾರು ಕುರಿಗಳನ್ನು ಖರೀದಿಸಿ ಬೃಹತ್‌ಗಾತ್ರದ, ಸುಸಜ್ಜಿತ ಟ್ರಕ್‌ಗಳಲ್ಲಿ ತುಂಬಿಕೊಂಡು ಹತ್ತಾರು ದಿನಗಳ ಕಾಲ ಪ್ರಯಾಣಿಸುತ್ತಾರೆ. ಈ ಕುರಿಗಳು ಎಲ್ಲಿಗೆ ಹೋಗುತ್ತವೆ? ಏನಾದವು ಎಂಬುದು ಆಯಾ ಮಾರಾಟ ಜಾಲದ ಪ್ರಮುಖರಿಗಷ್ಟೇ ಗೊತ್ತಿರುತ್ತದೆ.
ಕರ್ನಾಟಕದ ರೈತರ ದೌರ್ಬಲ್ಯವನ್ನು ಚೆನ್ನಾಗಿ ಬಲ್ಲ ಉತ್ತರ ಭಾರತದ ವ್ಯಾಪಾರಿಗಳು ಮತ್ತು ಸ್ಥಳೀಯ ಮಧ್ಯವರ್ತಿಗಳು ಇಂದಿಗೂ ಕುರಿಯನ್ನು ಕೈಯಳತೆಯಲ್ಲಿ, ಹಲ್ಲುಗಳ ಎಣಿಕೆಯಲ್ಲೇ ನೋಡಿ ಬೆಲೆ ನಿಗದಿ ಮಾಡಿಬಿಡುತ್ತಾರೆ. ಗರಿಷ್ಠ ಚೌಕಾಸಿ ಬೆಲೆಗೆ ಕುರಿಗಳು ಮಾರಾಟವಾಗಿಬಿಡುತ್ತವೆ. ಇಲ್ಲಿ ಬರುವ ಕುರಿ ಸಾಕಣೆದಾರರಲ್ಲಿ ಬಹುತೇಕರು ಸಣ್ಣ ಮತ್ತು ಅತಿ ಸಣ್ಣ ರೈತರು. ತಮ್ಮ ಖರ್ಚಿಗೆ ತಕ್ಕಷ್ಟು ಸಿಕ್ಕಿದರೆ ಸಾಕು ಎಂಬ ಮನೋಭಾವದಿಂದ ಸಿಕ್ಕಿದ ಬೆಲೆಗೆ ಕುರಿಯನ್ನು ಮಾರುವವರೇ ಹೆಚ್ಚು. ಹಬ್ಬದ ದಿನಗಳಲ್ಲಿ ಮಾತ್ರ ಒಂದಿಷ್ಟು ಉತ್ತಮ ಬೆಲೆ ಸಿಗುತ್ತದೆ.
ವಿಭಾಗಕ್ಕೊಂದು ಕುರಿ ಮಾಂಸ ಸಂಸ್ಕರಣಾ ಕೇಂದ್ರ
ʼಅಗ್ಗದ ಮಾಂಸ ಎಂಬ ಕಾರಣಕ್ಕೆ ಜನರನ್ನು ಮೋಸಗೊಳಿಸಬಾರದು. ಇದರಿಂದಾಗಿ ಕುರಿ ಮಾಂಸದ ಮೇಲಿನ ವಿಶ್ವಾಸಾರ್ಹತೆ ಇಲ್ಲವಾಗುತ್ತದೆ. ಅದಕ್ಕಾಗಿ ಸದ್ಯ ಶಿರಸಿಯಲ್ಲಿರುವ ಕುರಿ ಮಾಂಸ ಸಂಸ್ಕರಣೆ ಮತ್ತು ಮಾರಾಟ ಕೇಂದ್ರವನ್ನು ಪುನಶ್ಚೇತನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆʼ ಎಂದರು ದೇವೇಂದ್ರಪ್ಪ ವರ್ತೂರು.
ಇಂಥಹ ಸಂಸ್ಕರಣಾ ಕೇಂದ್ರ ರಾಜ್ಯದ ನಾಲ್ಕೂ ಆಡಳಿತಾತ್ಮಕ ವಿಭಾಗಗಳಿಗೆ ತಲಾ ಒಂದೊಂದರಂತೆ ಬರಬೇಕು. ಅಲ್ಲಿಂದಲೇ ಮಾಂಸ ಪೂರೈಕೆಯ ವ್ಯವಸ್ಥೆ ಆಗಬೇಕು. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ನನ್ನ ಅಧಿಕಾರವಧಿಯಲ್ಲಿ ಈ ನಾಲ್ಕೂ ಸಂಸ್ಕರಣಾ ಕೇಂದ್ರಗಳನ್ನು ತೆರೆದು ಚಾಲನೆಗೊಳಿಸುವ ಗುರಿ ಇದೆ ಎಂದರು ವರ್ತೂರು.