ಶರಾವತಿ ಸಂತ್ರಸ್ತರ ಬಿಕ್ಕಟ್ಟು | ಅರಣ್ಯ ಹಕ್ಕು: ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆಗೆ ಖಂಡ್ರೆ ಸೂಚನೆ
x

ಶರಾವತಿ ಸಂತ್ರಸ್ತರ ಬಿಕ್ಕಟ್ಟು | ಅರಣ್ಯ ಹಕ್ಕು: ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆಗೆ ಖಂಡ್ರೆ ಸೂಚನೆ

ರಾಜ್ಯಕ್ಕೆ ಬೆಳಕು ನೀಡಿದ ಶರಾವತಿ ಸಂತ್ರಸ್ತರಿಗೆ ಹಕ್ಕು ಕೊಡಿಸಲು 6 ದಶಕಗಳಿಂದ ಸಾಧ್ಯವಾಗಿಲ್ಲ. ಹೀಗಾಗಿ ಅವರಿಗೆ ಸಲ್ಲಬೇಕಾದ ನೈಜ ಹಕ್ಕು ಕೊಡಿಸಲು ಎದುರಾಗಿರುವ ತೊಡಕು ನಿವಾರಿಸಲು ಸುಪ್ರೀಂಕೋರ್ಟ್ ನಲ್ಲಿ ನಿರ್ದೇಶನ ಕೋರಿ ಮಧ್ಯಂತರ ಅರ್ಜಿ(ಐ.ಎ) ಹಾಕಲಾಗಿದೆ. ಈ ಬಾರಿ ಸಂತ್ರಸ್ತರಿಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.


ಅರಣ್ಯ ಹಕ್ಕು ಕಾಯ್ದೆ ಅಡಿ ರಾಜ್ಯದಾದ್ಯಂತ ಸಲ್ಲಿಸಲಾಗಿರುವ ಬಹುತೇಕ ಅರ್ಜಿಗಳು ತಿರಸ್ಕೃತವಾಗಿದ್ದು, ಈ ಎಲ್ಲ ಅರ್ಜಿಗಗಳ ಪುನರ್ ಪರಿಶೀಲನೆ ಮಾಡಿ, ಅರ್ಜಿದಾರರಿಗೆ ಸಹಜ ನ್ಯಾಯದ ಅಡಿಯಲ್ಲಿ ತಮ್ಮ ಹಕ್ಕು ಪ್ರತಿಪಾದಿಸಲು ಅವಕಾಶ ನೀಡಬೇಕು, ಈ ಪ್ರಕ್ರಿಯೆ ಪೂರ್ಣವಾಗುವತನಕ ಯಾರನ್ನೂ ಒಕ್ಕಲೆಬ್ಬಿಸಬಾರದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಗುರುವಾರ ಶಿವಮೊಗ್ಗ ವೃತ್ತದ ಅರಣ್ಯಾಧಿಕಾರಿಗಳೊಂದಿಗಿನ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2005ರ ಡಿಸೆಂಬರ್ 13ಕ್ಕೆ ಮುನ್ನ ಅರಣ್ಯವಾಸಿಗಳಾಗಿದ್ದ ಎಲ್ಲ ಬುಡಕಟ್ಟು ಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಪರಿಹಾರ ಸಿಗಲೇಬೇಕು. ಅದೇ ರೀತಿ ಇತರ ಹಿಂದುಳಿದವರು ಈ ದಿನಾಂಕಕ್ಕೆ ಮುನ್ನ ಅರಣ್ಯದಲ್ಲಿ ಜೀವನೋಪಾಯಕ್ಕಾಗಿಯೇ ನೆಲೆಸಿದ್ದಲ್ಲಿ ನಿಯಮಾನುಸಾರ ಅವರಿಗೆ ಹಕ್ಕು ನೀಡಬೇಕಾಗುತ್ತದೆ. ಪ್ರಸ್ತುತ 3 ತಲೆಮಾರು ಅಂದರೆ; 75 ವರ್ಷ ಅವರು ಅಲ್ಲಿದ್ದರು ಎಂದು ಸಾಬೀತುಪಡಿಸುವುದು ಕಷ್ಟಸಾಧ್ಯವಾಗಿದ್ದು, ಈ ನಿಯಮಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಶರಾವತಿ ಸಂತ್ರಸ್ತರ ಸಮಸ್ಯೆ ಚರ್ಚೆ

ರಾಜ್ಯಕ್ಕೆ ಬೆಳಕು ನೀಡಿದ ಶರಾವತಿ ಸಂತ್ರಸ್ತರಿಗೆ ಹಕ್ಕು ಕೊಡಿಸಲು 6 ದಶಕಗಳಿಂದ ಸಾಧ್ಯವಾಗಿಲ್ಲ. ಹೀಗಾಗಿ ಅವರಿಗೆ ಸಲ್ಲಬೇಕಾದ ನೈಜ ಹಕ್ಕು ಕೊಡಿಸಲು ಎದುರಾಗಿರುವ ತೊಡಕು ನಿವಾರಿಸಲು ಸುಪ್ರೀಂಕೋರ್ಟ್ ನಲ್ಲಿ ನಿರ್ದೇಶನ ಕೋರಿ ಮಧ್ಯಂತರ ಅರ್ಜಿ(ಐ.ಎ) ಹಾಕಲಾಗಿದೆ. ಈ ಬಾರಿ ಸಂತ್ರಸ್ತರಿಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.

ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಭೂಮಿಯನ್ನು ಮಾನ್ಯ ಮಾಡಿ, ಸಂತ್ರಸ್ತರ ಸಮಸ್ಯೆ ಶೀಘ್ರ ಬಗೆಹರಿಸಲು ಉತ್ತಮ ವಕೀಲರನ್ನು ವಿಶೇಷ ಅಭಿಯೋಜಕರಾಗಿ ನೇಮಕ ಮಾಡುವಂತೆ ಸೂಚಿಸಿದರು.

2015ರ ನಂತರದ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ

1978ರ ಪೂರ್ವದಲ್ಲಿ ಅರಣ್ಯ ಒತ್ತುವರಿ ಮಾಡಿರುವ ಪ್ರಕರಣಗಳ ಪೈಕಿ ಪಟ್ಟಾ ಭೂಮಿ ಮತ್ತು ಒತ್ತುವರಿ ಎರಡೂ ಸೇರಿ 3 ಎಕರೆ ಮೀರದವರ ಮತ್ತು ಇದೇ ಭೂಮಿಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿರುವವರ ವಿರುದ್ಧ ಕ್ರಮ ಕೈಗೊಳ್ಳದಂತೆ ಸರ್ಕಾರ ಈ ಹಿಂದೆಯೇ ನಿರ್ಧಾರ ಮಾಡಿದೆ. ಬಡ ಜನರಿಗೆ ತೊಂದರೆ ನೀಡದೆ, 3 ಎಕರೆಗಿಂತ ಹೆಚ್ಚಿನ ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸಚಿವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.

ಪ್ರಕೃತಿ ಪರಿಸರ, ಅರಣ್ಯ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಪರಿಸರವೂ ಉಳಿಯಬೇಕು, ಜೀವನೋಪಾಯವೂ ಇರಬೇಕು. ಹೀಗಾಗಿ ಹೊಸದಾಗಿ ಯಾರೇ ಅರಣ್ಯದಲ್ಲಿ ಅಕ್ರಮವಾಗಿ ಮರ ಕಡಿದು, ಒತ್ತುವರಿ ಮಾಡಿದರೆ, ನಿಯಮಾನುಸಾರ ಅನುಮತಿ ಪಡೆದು ಕ್ರಿಮಿನಲ್ ಮೊಕದ್ದಮೆ ಹೂಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂಡೀಕರಣ ಮಾಡಿಸಲು ಸೂಚನೆ

ಕಂದಾಯ ಇಲಾಖೆಯಿಂದ ಅರಣ್ಯಕ್ಕಾಗಿ ಮತ್ತು ನೆಡುತೋಪಿಗಾಗಿ ಹಲವು ದಶಕಗಳ ಹಿಂದೆಯೇ ಭೂಮಿ ಮಂಜೂರಾಗಿದ್ದರೂ, ಹಲವು ಪ್ರಕರಣಗಳಲ್ಲಿ ಇನ್ನೂ ಇಂಡೀಕರಣ ಆಗಿಲ್ಲ. ಅದೇ ರೀತಿ ಮೀಸಲು ಅರಣ್ಯ ಪ್ರದೇಶವೂ ಇಂಡೀಕರಣ ಆಗಿಲ್ಲ. ಅಲ್ಲದೆ ಒಂದೇ ಸರ್ವೆ ನಂಬರ್ ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಇರುವ ಕಡೆಯೂ ಅಕ್ರಮ ಮಂಜೂರಾತಿ ಆಗುತ್ತಿದೆ. ಹೀಗಾಗಿ ಕೂಡಲೇ ಅಂತಹ ಭೂಮಿಯನ್ನು ಅರಣ್ಯ ಎಂದು ಮ್ಯುಟೇಷನ್ ಮಾಡಿಸುವಂತೆ ಸೂಚಿಸಿದರು.

ಹೆದ್ದಾರಿಗಾಗಿ ಅರಣ್ಯ ನಾಶ: ವರದಿ ನೀಡಲು ಸೂಚನೆ

ರಾಷ್ಟ್ರೀಯ ಹೆದ್ದಾರಿಯ ಆನಂದಪುರಂ- ಕೋಣೆಹೊಸೂರು ಭಾಗದಲ್ಲಿ ಪಥ ಬದಲಾವಣೆಯಿಂದಾಗಿ ಕರಡಿಬೆಟ್ಟ, ಕೊಲ್ಲಿಬಚ್ಚಲು ಅರಣ್ಯಗಳು ನಾಶವಾಗುತ್ತವೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದು, ಹಾಲಿ ಇರುವ ರಸ್ತೆ ಅಗಲೀಕರಣ ಮಾಡುವ ಮೂಲಕ ಅರಣ್ಯ ನಾಶ ತಪ್ಪಿಸಬಹುದೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮತ್ತು ಅರಣ್ಯಾಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದರು.

Read More
Next Story