Sharavathy Project | ಜಲವಿದ್ಯುತ್ ಯೋಜನೆಗೆ ಅಸ್ತು: ಸಿಂಗಳೀಕ, ದಾಸಮಂಗಟ್ಟೆ ಜೊತೆ ಮಲೆನಾಡನ್ನೇ ಬಲಿ ಕೊಡುವುದೇ ಸರ್ಕಾರ?
ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲವಿದ್ಯುತ್ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿದೆ. ಮಲೆನಾಡಿನ ಪರಿಸರ ಮತ್ತು ಜನಜೀವನವನ್ನು ಬಲಿಕೊಟ್ಟು ಭಾರೀ ಪರಿಸರ ನಾಶಕ ಬೃಹತ್ ಯೋಜನೆಗಳನ್ನು ಜಾರಿ ಮಾಡುವ ಸರ್ಕಾರಗಳ ಏಕಪಕ್ಷೀಯ ಧೋರಣೆ ವಿರುದ್ಧ ಈಗ ಕೂಗೆದ್ದಿದೆ
ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲವಿದ್ಯುತ್ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿದೆ. ಆ ಮೂಲಕ ಮಲೆನಾಡಿನ ಅಪರೂಪದ ಜೀವವೈವಿಧ್ಯದ ಸೂಕ್ಷ್ಮ ಪರಿಸರ ತಾಣವಾದ ಶರಾವತಿ ಕಣಿವೆ(Shavarathy Valley)ಗೆ ಆತಂಕ ಎದುರಾಗಿದೆ.
ಪರಿಸರ ಹಾನಿಯನ್ನು ಗಣನೀಯವಾಗಿ ತಗ್ಗಿಸುವ ಮತ್ತು ಅಭಯಾರಣ್ಯದ ಸಿಂಗಳೀಕ(LTM)ಗಳಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂಬ ಷರತ್ತಿನೊಂದಿಗೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅನುಮತಿ ನೀಡಲು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿಅನುಮೋದನೆ ನೀಡಲಾಗಿದೆ.
ವಿದ್ಯುತ್ ಉತ್ಪಾದನೆಗೆ ಒತ್ತು ನೀಡುವ ದೃಷ್ಟಿಯಿಂದ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿರುವ ಯೋಜನೆ ಕೈಗೆತ್ತಿಕೊಳ್ಳುವುದು ಸೂಕ್ತ. ಆದರೆ, ಯೋಜನೆಗಾಗಿ ಶರಾವತಿ ಕಣಿವೆಯಲ್ಲಿ ಮರ ಕಡಿಯುವ ಪ್ರಮಾಣವನ್ನು ಕಡಿಮೆ ಮಾಡಬೇಕು. ಕಣಿವೆಯ ಸಿಂಗಳೀಕ ಸೇರಿದಂತೆ ಅಪರೂಪದ ವನ್ಯ ಮೃಗಗಳು ಮತ್ತು ಸಸ್ಯ ಪ್ರಭೇದಗಳಿಗೆ ಹಾನಿಯಾಗದಂತೆ ಯೋಜನೆ ಜಾರಿಗೊಳಿಸಬೇಕು ಎಂಬ ಷರತ್ತು ವಿಧಿಸಲು ಮಂಡಳಿ ನಿರ್ಧರಿಸಿದೆ.
ಹೇಳುವುದು ಒಂದು, ಮಾಡುವುದು ಇನ್ನೊಂದು!
ಆದರೆ, ರಾಜ್ಯದಲ್ಲೇ ಅತ್ಯಂತ ದಟ್ಟ ಅರಣ್ಯವನ್ನು ಹೊಂದಿರುವ, ಅಪರೂಪದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಹೊಂದಿರುವ ಅತಿ ಸೂಕ್ಷ್ಮ ಕಣಿವೆಯನ್ನು ಒಳಗೊಂಡಿರುವ ಶರಾವತಿ ಸಿಂಗಳೀಕ ಅಭಯಾರಣ್ಯ(LTM Sanctuary)ದ ನಟ್ಟನಡುವಿನಲ್ಲಿ 125 ಎಕರೆ ಅಭಯಾರಣ್ಯವನ್ನು ಬುಡಮೇಲು ಮಾಡಿ, ಅಲ್ಲಿನ ಪ್ರಾಣಿ- ಸಸ್ಯವನ್ನು ಒಳಗೊಂಡ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಹೇಗೆ? ಎಂಬುದು ಈಗ ಪರಿಸರವಾದಿಗಳು ಮತ್ತು ಮಲೆನಾಡಿಗರು ಎತ್ತುತ್ತಿರುವ ಪ್ರಶ್ನೆ.
ಅದರಲ್ಲೂ ರಾಜ್ಯದ ಅರಣ್ಯ ಪ್ರದೇಶವನ್ನು ಈಗಿರುವ ಶೇ.22 ಪ್ರಮಾಣದಿಂದ ಶೇ.30ಕ್ಕೆ ಹೆಚ್ಚಿಸುವ ಬಗ್ಗೆ ಪದೇಪದೆ ಕರೆಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಮಲೆನಾಡು ರೈತರ ಚಿಕ್ಕಪುಟ್ಟ ಅರಣ್ಯ ಒತ್ತುವರಿಯನ್ನೂ ನಿರ್ದಾಕ್ಷಿಣ್ಯವಾಗಿ ತೆರವು ಮಾಡುವ ಮೂಲಕ ರಾಜ್ಯದ ಅರಣ್ಯ ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿಗೆ ತಾವು ಸಿದ್ಧರಿಲ್ಲ ಎಂದು ಹೇಳುತ್ತಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೇ ಸೂಕ್ಷ್ಮ ಕಣಿವೆಯ ಅಭಯಾರಣ್ಯದಲ್ಲೇ ಪರಿಸರ ಮಾರಣಹೋಮಕ್ಕೆ ಅನುಮೋದನೆ ನೀಡಿವುದು ಹೇಗೆ? ಎಂದು ಮಲೆನಾಡಿಗರು ಹುಬ್ಬೇರಿಸಿದ್ದಾರೆ.
ಅಲ್ಲದೆ, ಅರಣ್ಯ ಇಲಾಖೆ ಈ ಯೋಜನೆಯ ಪರಿಸರ ಪರಿಣಾಮಗಳ ಕುರಿತು ಸಲ್ಲಿಸಿರುವ ವರದಿಯಲ್ಲಿ ಯೋಜನೆಯಿಂದ ಭಾರೀ ಪ್ರಮಾಣದಲ್ಲಿ ಕಣಿವೆಯ ಸೂಕ್ಷ್ಮ ಪರಿಸರಕ್ಕೆ ಹಾನಿಯಾಗಲಿದೆ. ಕಣಿವೆಗೆ ಸೀಮಿತವಾಗಿರುವ, ಜಗತ್ತಿನ ಇನ್ನೆಲ್ಲೂ ಕಂಡುಬರದ ಅಪರೂಪದ ಮಿಸ್ಟಿರಿಕಾ ಇಂಡಿಕಾ ಜವುಗು ಸಸ್ಯಪ್ರಭೇದ, ಸಿಂಗಳೀಕ(Lion-Tailed Macaque-LTM), ದಾಸಮಂಗಟ್ಟೆ (Great Indian Hornbill), ಕಾಳಿಂಗ ಸರ್ಪ, ಕಪ್ಪು ಚಿರತೆ ಮುಂತಾದ ಜೀವಿಗಳಿರುವ ಕಣಿವೆಯಲ್ಲಿ ಯೋಜನೆಯಿಂದ ಭಾರೀ ಪ್ರಮಾಣದ ಜೀವಪರಿಸರ ಹಾನಿ (Ecological Loss) ಆಗಲಿದೆ ಎಂದು ಯೋಜನೆ ಕುರಿತು ಅರಣ್ಯ ಸಂರಕ್ಷಣಾಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ. ಅರಣ್ಯ ಇಲಾಖೆಯೇ ಯೋಜನೆಯ ಅಪಾಯಗಳ ಕುರಿತು ಎಚ್ಚರಿಸಿದ್ದರೂ ಸ್ವತಃ ಅರಣ್ಯ ಸಚಿವರೇ ಯೋಜನೆಯ ಪರ ವಕಾಲತು ವಹಿಸಿರುವ ಹಿಂದಿನ ಕಾರಣಗಳೇನು? ಎಂಬುದು ಈಗ ಚರ್ಚೆಯಾಗುತ್ತಿರುವ ಸಂಗತಿ.
ಪರಿಸರ ಹಾನಿ ಮಾಡಿಯೇ ವಿದ್ಯುತ್ ಪಡೆಯಬೇಕೆ?
ಆ ಹಿನ್ನೆಲೆಯಲ್ಲಿಯೇ ʼದ ಫೆಡರಲ್ ಕರ್ನಾಟಕʼ ವನ್ಯಜೀವಿ ಸಂರಕ್ಷಕ ಹಾಗೂ ಹಿರಿಯ ಪತ್ರಕರ್ತ ಜೋಸೆಫ್ ಹೂವರ್ ಅವರನ್ನು ಮಾತನಾಡಿಸಿದಾಗ, ಅವರು “ಈಗಾಗಲೇ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ನಾವು ಅನುಭವಿಸುತ್ತಿದ್ದೇವೆ. ಭೂ ಕುಸಿತ, ಪ್ರವಾಹ, ಬರ, ಅತಿಯಾದ ಚಳಿ ಮನುಷ್ಯನ ಅಸ್ತಿತ್ವಕ್ಕೆ ಸವಾಲಾಗಿದೆ. ಹೀಗಿರುವಾಗ ಭೂಕಂಪ ಮತ್ತು ಭೂಕುಸಿತ ಅಪಾಯವಿರುವ ಪ್ರದೇಶ ಎಂದು ಗುರುತಿಸಲಾಗಿರುವ ಸೂಕ್ಷ್ಮ ಕಣಿವೆಯಲ್ಲಿ ಯೋಜನೆ ಜಾರಿ ಮಾಡುವುದು ಆತ್ಮಹತ್ಯಾತ್ಮಕ ಹೆಜ್ಜೆಯಾಗಲಿದೆ. ಅಷ್ಟಕ್ಕೂ ಜಲವಿದ್ಯುತ್ಗಿಂತ ಅಗ್ಗದ ಪರ್ಯಾಯ ಕ್ಲೀನ್ ಎನರ್ಜಿ ಮೂಲಗಳಿಂದ ವಿದ್ಯುತ್ ಪಡೆಯುವುದು ಸುಲಭವಿರುವಾಗ ಸರ್ಕಾರ ಯಾಕೆ ಪರಿಸರ ಹಾನಿ ಮಾಡಿಯೇ ವಿದ್ಯುತ್ ಉತ್ಪಾದಿಸಬೇಕು ಎಂದು ಹಠ ಹಿಡಿದಿದೆ ಎಂಬುದು ಅರ್ಥವಾಗುತ್ತಿಲ್ಲ” ಎಂದರು.
ಶರಾವತಿ ಕಣಿವೆಯಲ್ಲಿ ಈಗಾಗಲೇ ಇರುವ ತಲಕಳಲೆ ಮತ್ತು ಗೇರುಸೊಪ್ಪಾ ಜಲಾಶಯಗಳ ನಡುವಿನ ಜಾಗದಲ್ಲಿ ನಿರ್ಮಾಣವಾಗುವ ಭೂಗತ ಜಲವಿದ್ಯುದಾಗರಕ್ಕೆ ತಲಕಳಲೆ ಜಲಾಶಯದಿಂದ ನೀರು ಹಾಯಿಸುವ ಈ ಯೋಜನೆಗೆ ಒಟ್ಟು ಒಟ್ಟು 378 ಎಕರೆ ಭೂಮಿ ಬೇಕಾಗಿದ್ದು, ಆ ಪೈಕಿ 126 ಎಕರೆ ಅರಣ್ಯ ಭೂಮಿಯನ್ನು ನೀಡುವಂತೆ ಯೋಜನೆಯನ್ನು ಜಾರಿಗೊಳಿಸುತ್ತಿರುವ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿಎಲ್) ಪ್ರಸ್ತಾವನೆ ಸಲ್ಲಿಸಿತ್ತು. ಹೊನ್ನಾವರ ಮತ್ತು ಸಾಗರ ವನ್ಯಜೀವಿ ವಲಯಕ್ಕೆ ಸೇರಿರುವ 126 ಎಕರೆ ಅರಣ್ಯ ಭೂಮಿಯ ಪೈಕಿ 97 ಎಕರೆ ಎಲ್ಟಿಎಂ ಅಭಯಾರಣ್ಯಕ್ಕೆ ಸೇರಿದ ಜಾಗ ಎಂದು ಯೋಜನೆಯ ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ಇದೀಗ ರಾಜ್ಯ ವನ್ಯಜೀವಿ ಮಂಡಳಿ(State Wildlife Board) ವನ್ಯಜೀವಿ ವಲಯದ ಭೂಮಿ ನೀಡಲು ಒಪ್ಪಿಗೆ ನೀಡಿದೆ.
ಆದರೆ, “ಯೋಜನೆಗೆ 97 ಎಕರೆಯಲ್ಲ; ಒಂದಿಂಚೂ ಕೊಡುವುದು ಶರಾವತಿ ಕಣಿವೆಯ ಅಪಾರ ಜೀವವೈವಿಧ್ಯಕ್ಕೆ, ನಮ್ಮ ಮುಂದಿನ ತಲೆಮಾರುಗಳಿಗೆ ಮಾಡುವ ಮಹಾದ್ರೋಹವಾಗುತ್ತದೆ. ಅದರಲ್ಲೂ ಹವಾಮಾನ್ಯ ವೈಪರೀತ್ಯದ ತುರ್ತು ಇರುವಾಗ ಮತ್ತು ಬದಲಿ ಇಂಧನ(ವಿದ್ಯುತ್)ವನ್ನು ಇದಕ್ಕಿಂತ ಕಡಿಮೆ ವೆಚ್ಚದಲ್ಲಿ, ಪರಿಸರ ಹಾನಿ ಇಲ್ಲದೆ ಪಡೆಯಲು ಆಯ್ಕೆಗಳು ಇರುವಾಗ ಸರ್ಕಾರ ಶರಾವತಿ ಕಣಿವೆಯನ್ನು ನಾಶಮಾಡಿ ಯೋಜನೆ ಜಾರಿ ಮಾಡುವುದು ಅವಿವೇಕದ ಕ್ರಮ. ಈ ಬಗ್ಗೆ ನಮ್ಮ ಹೋರಾಟ ಮುಂದುವರಿಸುತ್ತೇವೆ” ಎಂದು ಯುನೈಟೆಡ್ ಕನ್ಸರ್ವೇಷನ್ ಮೂಮೆಂಟ್(ಯುಸಿಎಂ) ಸಂಸ್ಥಾಪಕರೂ ಆದ ಹೂವರ್ ಅವರು ಹೇಳಿದರು.
ಮಲೆನಾಡಿನ ಹಿತ ಬಲಿಕೊಡುವ ಏಕಪಕ್ಷೀಯ ಧೋರಣೆ
ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲವಿದ್ಯುತ್ ಯೋಜನೆಯೂ ಸೇರಿದಂತೆ ಆಗುಂಬೆ ಸುರಂಗ ಮಾರ್ಗ, ಕೊಡಚಾದ್ರಿ ಕೇಬಲ್ ಕಾರ್, ಸುಮಾರು 60 ಸಾವಿರ ಎಕರೆ ಅಕೇಶಿಯಾ ನೆಡುತೋಪು ಭೂಮಿಯನ್ನು ಎಂಪಿಎಂಗೆ ಮತ್ತೆ ನೀಡಿರುವುದು ಸೇರಿದಂತೆ ಮಲೆನಾಡಿನ ಪರಿಸರ ಮತ್ತು ಜನಜೀವನದ ಮೇಲೆ ಅಗಾಧ ಪರಿಣಾಮಗಳನ್ನು ಬೀರುವ ಯೋಜನೆಗಳ ವಿಷಯದಲ್ಲಿ ಸರ್ಕಾರ ಮಲೆನಾಡಿಗರ ಹಿತಾಸಕ್ತಿಯನ್ನು ಬಲಿಕೊಡುತ್ತಿದೆ. ಮಲೆನಾಡಿನ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಏಕಪಕ್ಷೀಯ ನಿರ್ಧಾರಗಳ ಮೂಲಕ ಮಲೆನಾಡನ್ನು ತನ್ನ ಆಡುಂಬೊಲ ಮಾಡಿಕೊಂಡಿದೆ ಎಂಬ ಆಕ್ರೋಶ ಕೂಡ ಮಲೆನಾಡು ಭಾಗದಲ್ಲಿ ತೀವ್ರಗೊಳ್ಳುತ್ತಿದೆ. ಆ ಹಿನ್ನೆಲೆಯಲ್ಲಿಯೇ ಪ್ರತ್ಯೇಕ ಮಲೆನಾಡು ಕೂಗು ಕೂಡ ಎದ್ದಿದೆ.
ಆ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಮಲೆನಾಡು ಪರ ಹೋರಾಟಗಾರ ರಾಮಸ್ವಾಮಿ ಹುಲ್ಕೋಡ್, “ಮಲೆನಾಡಿಗರು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ, ಅಂದಾದುಂದಿ ಯೋಜನೆಗಳನ್ನು ಪರಿಸರ ಮತ್ತು ಜನ ಹಿತದ ದೃಷ್ಟಿಯಿಂದ ವಿರೋಧಿಸುತ್ತಿದ್ದೇವೆ. ಶರಾವತಿ ಭೂಗತ ವಿದ್ಯುತ್ ಯೋಜನೆಯನ್ನೇ ತೆಗೆದುಕೊಂಡರೂ ಇದು ದುಂದುವೆಚ್ಚ ಮತ್ತು ಪರಿಸರ ಹಾನಿಯ ಯೋಜನೆ ಎನ್ನದೇ ವಿಧಿಯಿಲ್ಲ. ಏಕೆಂದರೆ ಪರಿಸರ ಹಾನಿ ಇಲ್ಲದೆ ಶರಾವತಿ ಕಣಿವೆಯ ಈಗಿನ ಜಲಾಶಯಗಳನ್ನೇ ಬಳಸಿಕೊಂಡು ಇನ್ನಷ್ಟು ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಆದರೆ, ಆ ಅವಕಾಶ ಬಿಟ್ಟು ಸರ್ಕಾರ ತೀರಾ ಅವೈಜ್ಞಾನಿಕವಾದ, ಭಾರೀ ಪರಿಸರ ಹಾನಿಯ ಯೋಜನೆಗಾಗಿ ಪಟ್ಟು ಹಿಡಿದು ಜಾರಿಗೆ ತರುತ್ತಿದೆ. ಇದು ಖಂಡಿತವಾಗಿಯೂ ಮಲೆನಾಡು ಹಿತಾಸಕ್ತಿಗೆ ವಿರುದ್ಧವಾದ, ಅಲ್ಲಿನ ಜನ ಮತ್ತು ಜೀವಚರಗಳಿಗೆ ಅಪಾಯ ತಂದೊಡ್ಡುವ ಯೋಜನೆ” ಎಂದು ಅಭಿಪ್ರಾಯಪಟ್ಟರು.
ಅಲ್ಲದೆ, “ಮಲೆನಾಡಿನ ಹಿತಾಸಕ್ತಿ ನಿರ್ಲಕ್ಷಿಸಿ ಯೋಜನೆ ಜಾರಿ ಮಾಡಲಾಗುತ್ತಿರುವುದು ದುರಂತ. ಮಲೆನಾಡಿನ ಕುಗ್ರಾಮಗಳಲ್ಲಿ ಕನಿಷ್ಟ ಸಂಪರ್ಕ ಕಚ್ಚಾ ರಸ್ತೆ, ವಿದ್ಯುತ್ ನೀಡಲು ನೂರಾರು ಕಾಯ್ದೆ, ಕಾನೂನು ಅಡ್ಡಿಯ ನೆಪ ಹೇಳುವ ಸರ್ಕಾರಕ್ಕೆ, ಅಪರೂಪದ ಜೀವವೈವಿಧ್ಯದ ಅಭಯಾರಣ್ಯದ ನಟ್ಟನಡುವೆ ಇಂತಹ ಬೃಹತ್ ಯೋಜನೆ ಜಾರಿಗೆ ಮಾತ್ರ ಯಾವ ಕಾನೂನು ಅಡ್ಡಿ ಬರುವುದಿಲ್ಲ ಹೇಗೆ? ಅದು ಶರಾವತಿ ಕಣಿವೆ ಯೋಜನೆ ಇರಬಹುದು, ಆಗುಂಬೆ ಘಾಟಿ ಸುರಂಗ ಮಾರ್ಗ ಇರಬಹುದು, ಕೊಡಚಾಡ್ರಿ ಕೇಬಲ್ ಕಾರ್ ಇರಬಹುದು, ಅಕೇಶಿಯಾ ಪ್ಲಾಂಟೇಷನ್ ಗುತ್ತಿಗೆ ಇರಬಹುದು, ಈ ಯಾವುದೂ ಮಲೆನಾಡಿನ ಜನರ ಬೇಡಿಕೆಯಾಗಿರಲಿಲ್ಲ. ಆದರೂ ಸರ್ಕಾರಗಳು ಪಟ್ಟು ಬಿಡದೆ ಅವುಗಳನ್ನು ಜಾರಿಗೊಳಿಸಿ ಮಲೆನಾಡಿನ ಪರಿಸರ ಮತ್ತು ಜನಜೀವನದ ಮೇಲೆ ಚಪ್ಪಡಿ ಎಳೆಯುತ್ತಿವೆ. ಈಗಾಗಲೇ ಮಾನವ- ವನ್ಯಜೀವಿ ಸಂಘರ್ಷ, ಹವಾಮಾನ್ಯ ವೈಪರೀತ್ಯದಿಂದಾದ ಭೂ ಕುಸಿತ ಮುಂತಾದ ಕಾರಣಗಳಿಂದಾಗಿ ಮಲೆನಾಡಿನ ಜನ ಗುಳೇ ಹೋಗುತ್ತಿದ್ದಾರೆ. ಹಾಗಾಗಿ ಸರ್ಕಾರಗಳ ಏಕಪಕ್ಷೀಯ ಧೋರಣೆಯ ವಿರುದ್ಧ ಮಲೆನಾಡು ಒಗ್ಗಟ್ಟಾಗಿ ದನಿ ಎತ್ತಬೇಕಾಗಿದೆ” ಎಂದು ಅವರು ಹೇಳಿದರು.
ಒಟ್ಟಾರೆ, ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲವಿದ್ಯುತ್ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿರುವುದು ಪರಿಸರವಾದಿಗಳು ಮತ್ತು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಮಲೆನಾಡಿನ ಪರಿಸರ ಮತ್ತು ಜನಜೀವನವನ್ನು ಬಲಿಕೊಟ್ಟು ಭಾರೀ ಪರಿಸರ ನಾಶಕ ಬೃಹತ್ ಯೋಜನೆಗಳನ್ನು ಜಾರಿ ಮಾಡುವ ಸರ್ಕಾರಗಳ ಏಕಪಕ್ಷೀಯ ಧೋರಣೆ ವಿರುದ್ಧ ಹೋರಾಟ ಸಂಘಟಿಸುವ ಮಾತುಗಳು ಕೇಳಿಬರುತ್ತಿವೆ.