
ಇಂದು ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ
ಶಾಮನೂರು ಶಿವಶಂಕರಪ್ಪಅವರ ಅಂತ್ಯಕ್ರಿಯೆ ಇಂದು ದಾವಣಗೆರೆಯ ಕಲ್ಲೇಶ್ವರ ಮಿಲ್‌ನಲ್ಲಿ ನಡೆಯಲಿದೆ.
ನಿನ್ನೆ ರಾತ್ರಿ ಕೊನೆಯುಸಿರೆಳೆದ ಹಿರಿಯ ರಾಜಕಾರಣಿ, ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರ ಅಂತ್ಯಕ್ರಿಯೆ ಇಂದು ದಾವಣಗೆರೆಯಲ್ಲಿ ನಡೆಯಲಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ94 ವರ್ಷದ ಶಾಮನೂರು ಶಿವಶಂಕರಪ್ಪ ಚಿಕಿತ್ಸೆ ಫಲಿಸದೇ ನಿನ್ನೆ (ಡಿ.14) ಬೆಂಗಳೂರಿನ (Bengaluru) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊನೆಯುಸಿರೆಳೆದಿದ್ದಾರೆ.
ಪಾರ್ಥೀವ ಶರೀರ ದಾವಣಗೆರೆಗೆ ರವಾನೆ
ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರರವನ್ನು ಬೆಂಗಳೂರಿಂದ ದಾವಣಗೆರೆಯ ನಿವಾಸಕ್ಕೆ ರವಾನೆ ಮಾಡಲಾಗಿದೆ. ಮೊದಲು ಹಿರಿಯ ಪುತ್ರ ಎಸ್.ಎಸ್. ಬಕ್ಕೇಶ್ ಮನೆಯಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಅವರಗೊಳ್ಳದ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಣವಕೊಪ್ಪ ಸ್ವಾಮೀಜಿ ನೇತೃತ್ವದಲ್ಲಿ ವಿಧಿವಿಧಾನ ನಡೆಯಲಿದ್ದಾರೆ ಎನ್ನಲಾಗಿದೆ. ಇದಾದ ನಂತರ ದ್ವಿತೀಯ ಪುತ್ರ ಎಸ್.ಎಸ್.ಗಣೇಶ್ ನಿವಾಸದಲ್ಲಿ ಪೂಜೆ ನಡೆಯಲಿದೆ. ನಂತರ ಮತ್ತೊರ್ವ ಪುತ್ರ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನಿವಾಸದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಇಷ್ಟೇಲ್ಲಾ ವಿಧಿ-ವಿಧಾನ ನಂತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
3 ಗಂಟೆವರೆಗೂ ಅಂತಿಮ ದರ್ಶನ
ಮಧ್ಯಾಹ್ನ 12 ಗಂಟೆಗೆ ಪಿ.ಜೆ.ಬಡಾವಣೆಯಲ್ಲಿರುವ ಹೈಸ್ಕೂಲ್ ಮೈದಾನಕ್ಕೆ ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರ ತರಲಾಗುತ್ತದೆ. ಬಳಿಕ ಮಧ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಂಜೆ 5 ಗಂಟೆಗೆ ಅಂತ್ಯಕ್ರಿಯೆ
ಅಂತಿಮ ದರ್ಶನದ ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಯ ಸುಮಾರಿಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಕಲ್ಲೇಶ್ವರ ಮಿಲ್‌ನಲ್ಲಿ ಧರ್ಮಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲಿ ಶಾಮನೂರು ಅಂತ್ಯಕ್ರಿಯೆ ನಡೆಯಲಿದೆ.
ಅಂತಿಮ ದರ್ಶನ ಪಡೆಯಲಿದ್ದಾರೆ ಗಣ್ಯರು
ಇನ್ನು ಕಲ್ಲೇಶ್ವರ ಮಿಲ್‌ನಲ್ಲಿ ನಡೆಯಲಿರುವ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಲಿದ್ದಾರೆ. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಶಾಮನೂರು ಶಿವಶಂಕರಪ್ಪ ಮನೆಗೆ ಡಿಸಿ ಗಂಗಾಧರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ರಜೆ
ಶಾಮನೂರು ಶಿವಶಂಕರಪ್ಪನವರು ನಿಧನರಾದ ಪ್ರಯುಕ್ತ ಅವರ ಗೌರವಾರ್ಥವಾಗಿ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಡಿಸೆಂಬರ್ 15 ರಂದು ದಾವಣಗೆರೆ ನಗರದ ವ್ಯಾಪ್ತಿಯ ಎಲ್ಲಾ ಸರ್ಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ರಜೆಯನ್ನು ಮುಂದಿನ ಶನಿವಾರ ಡಿಸೆಂಬರ್ 27 ರಂದು ಪೂರ್ತಿ ದಿನ ಶಾಲೆಯನ್ನು ನಡೆಸಿ ಸರಿದೂಗಿಸಲು ಸೂಚಿಸಲಾಗಿದೆ.
ವಿಶ್ವವಿದ್ಯಾನಿಲಯ ಶಿವಗಂಗೋತ್ರಿ, ಸ್ನಾತಕೋತ್ತರ ಕೇಂದ್ರ ಜಿ. ಆರ್. ಹಳ್ಳಿ, ಚಿತ್ರದುರ್ಗ ಹಾಗೂ ಎಲ್ಲಾ ಘಟಕ ಕಾಲೇಜುಗಳಿಗೆ 15- 12-2025 ರಂದು ರಜೆ ಘೋಷಿಸಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರು ಎಸ್ ಎ ಘಂಟಿ ತಿಳಿಸಿದ್ದಾರೆ.

