ನಕಲಿ ಲೈಂಗಿಕ  ಉದ್ದೀಪನ ಮದ್ದಿಗೆ ಶರಣಾಗುವುದು ಏಕೆ? ಕಿಡ್ನಿ, ‌ಹಣ  ಕಳೆದುಕೊಂಡೀರಿ ಜೋಕೆ!
x

ನಕಲಿ ಲೈಂಗಿಕ ಉದ್ದೀಪನ ಮದ್ದಿಗೆ ಶರಣಾಗುವುದು ಏಕೆ? ಕಿಡ್ನಿ, ‌ಹಣ ಕಳೆದುಕೊಂಡೀರಿ ಜೋಕೆ!

ಟೆಕ್ಕಿಯೊಬ್ಬ ತನ್ನ ಲೈಂಗಿಕ‌ ಸಮಸ್ಯೆ ಪರಿಹಾರಕ್ಕಾಗಿ ಟೆಂಟ್ ವೈದ್ಯನ '"ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರ" ಎಂಬ ಆಕರ್ಷಕ ಬೋರ್ಡ್ ನೋಡಿ ಮೋಸಹೋಗಿದ್ದಾನೆ.‌ ಜತೆಗೆ 45 ಲಕ್ಷ, ಕಿಡ್ನಿ ಕಲೆದುಕೊಂಡಿದ್ದಾನೆ!


"ಕಾಯಿಲೆಗಿಂತ ಚಿಕಿತ್ಸೆಯೇ ಭಯಾನಕ" ಎಂಬ ಮಾತಿಗೆ ಅನ್ವರ್ಥವಾಗುವಂತಹ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಲೈಂಗಿಕ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಟೆಂಟ್‌ವೊಂದರಲ್ಲಿ ಜಾಹೀರಾತು ನೋಡಿ ಅವರ ಬಳಿ ಹೋದ ಪ್ರತಿಷ್ಠಿತ ಕಂಪನಿಯ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು, ಬರೋಬ್ಬರಿ 48 ಲಕ್ಷ ರೂಪಾಯಿ ಕಳೆದುಕೊಂಡಿದ್ದಲ್ಲದೆ, ತಮ್ಮ ಎರಡೂ ಮೂತ್ರಪಿಂಡಗಳನ್ನು ಹಾಳುಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ವಿದ್ಯಾವಂತರು, ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವವರೇ ಇಂತಹ ಮೋಸದ ಜಾಲಕ್ಕೆ ಸಿಲುಕಿರುವುದು ವೈದ್ಯಕೀಯ ವಂಚನೆಯ ಗಂಭೀರತೆಯನ್ನು ಎತ್ತಿ ತೋರಿಸಿದೆ. ಹಣ ಹೋದರೆ ದುಡಿಯಬಹುದು, ಆದರೆ ಹೋದ ಆರೋಗ್ಯ ಮರಳಿ ಪಡೆಯುವುದು ಹೇಗೆ ಎಂಬ ಚಿಂತೆಯಲ್ಲಿ ನೊಂದ ಟೆಕ್ಕಿ ಮತ್ತು ಅವರ ಕುಟುಂಬ ಕಂಗಾಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ 38 ವರ್ಷದ ಟೆಕ್ಕಿಯೊಬ್ಬರು ಕಳೆದ ಕೆಲವು ತಿಂಗಳುಗಳಿಂದ ವೈಯಕ್ತಿಕ ಲೈಂಗಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲಸದ ಒತ್ತಡ ಮತ್ತು ಜೀವನಶೈಲಿಯ ಬದಲಾವಣೆಯಿಂದ ಉಂಟಾದ ಈ ಸಮಸ್ಯೆಯನ್ನು ಸ್ನೇಹಿತರೊಂದಿಗಾಗಲಿ ಅಥವಾ ಮನೆಯವರೊಂದಿಗಾಗಲಿ ಹಂಚಿಕೊಳ್ಳಲು ಮುಜುಗರಪಟ್ಟುಕೊಂಡಿದ್ದರು. ಹೀಗಾಗಿ, ಅವರು ಪರಿಹಾರಕ್ಕಾಗಿ ಟೆಂಟ್‌ಗಳಲ್ಲಿ ನೀಡುವ ಔಷಧಿಗೆ ಮೊರೆ ಹೋಗಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ಶಿವಮೊಗ್ಗ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ವ್ಯಕ್ತಿ 2023 ರಲ್ಲಿ ಮದುವೆಯಾಗಿದ್ದರು. ಸಂಸಾರ ಜೀವನ ಸುಗಮವಾಗಿ ಸಾಗುತ್ತಿದ್ದಾಗ, ಟೆಕ್ಕಿಗೆ ಲೈಂಗಿಕ ಸಮಸ್ಯೆ ಕಾಣಿಸಿಕೊಂಡಿದೆ. ಆರಂಭದಲ್ಲಿ ಅವರು ಕೆಂಗೇರಿಯಲ್ಲಿರುವ ಸನೈರಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತೆರಳಿ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿದ್ದರು. ಅಲ್ಲಿ ವೈದ್ಯರು ಸೂಕ್ತ ಸಲಹೆ ಮತ್ತು ಔಷಧಿಯನ್ನು ನೀಡಿದ್ದರು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಮೇ.3 ರಂದು ಕೆ.ಎಲ್.ಇ ಲಾ ಕಾಲೇಜು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ, ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಒಂದು ಆಯುರ್ವೇದಿಕ್ ಟೆಂಟ್ ಅವರ ಕಣ್ಣಿಗೆ ಬಿದ್ದಿದೆ. ಟೆಂಟ್ ಹೊರಗೆ "ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರ" ಎಂಬ ಆಕರ್ಷಕ ಬೋರ್ಡ್ ಹಾಕಲಾಗಿತ್ತು. ಸಮಸ್ಯೆಯಿಂದ ನೊಂದಿದ್ದ ಟೆಕ್ಕಿ, ಕುತೂಹಲದಿಂದ ಮತ್ತು ಪರಿಹಾರ ಸಿಗಬಹುದೆಂಬ ಆಸೆಯಿಂದ ಟೆಂಟ್ ಒಳಗೆ ಪ್ರವೇಶಿಸಿದರು. ಅಲ್ಲಿಯೇ ಅವರ ಜೀವನದ ದುರಂತ ಅಧ್ಯಾಯ ಆರಂಭವಾಯಿತು. ಈ ಬಗ್ಗೆ ಟೆಕ್ಕಿ ಜ್ಞಾನಭಾರತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟೆಂಟ್‌ನಲ್ಲಿದ್ದ ವ್ಯಕ್ತಿಯ ಬಳಿ ತಮ್ಮ ಅಳಲನ್ನು ತೋಡಿಕೊಂಡಾಗ, ಆತ ನಮ್ಮ ವಿಜಯ್ ಗುರೂಜಿ ಎಂಬುವರು ಇದ್ದಾರೆ. ಅವರನ್ನು ಇಲ್ಲಿಗೆ ಕರೆಸುತ್ತೇನೆ. ಅವರು ನಿಮಗೆ ಖಂಡಿತವಾಗಿಯೂ ಶೀಘ್ರ ಪರಿಹಾರ ನೀಡುತ್ತಾರೆ ಎಂದು ನಂಬಿಸಿದನು. ಬಳಿಕ ವಿಜಯ್ ಗುರೂಜಿ ಎಂಬಾತ ಅಲ್ಲಿಗೆ ಬಂದು ಚಿಕಿತ್ಸೆ ಕುರಿತು ಚರ್ಚೆ ನಡೆಸಿದ್ದಾರೆ. ವಿಜಯ್ ಗುರೂಜಿ ಟೆಕ್ಕಿಯನ್ನು ಪರಿಶೀಲಿಸುವ ನಾಟಕವಾಡಿ, ಸಮಸ್ಯೆಗೆ 'ಅಪರೂಪದ ಔಷಧಿ'ಗಳ ಅಗತ್ಯವಿದೆ ಎಂದು ನಂಬಿಸಿದನು. ಅಲ್ಲಿಂದ ಹಂತ ಹಂತವಾಗಿ ಹಣ ಸುಲಿಗೆಯ ತಂತ್ರ ಆರಂಭವಾಯಿತು ಎಂದು ಹೇಳಲಾಗಿದೆ.

1 ಗ್ರಾಂ ಔಷಧಿಗೆ 1,60,000 ಲಕ್ಷ ರೂ...!

ಗುರೂಜಿ ಮೊದಲಿಗೆ 'ದೇವರಾಜ್ ಬೂಟಿ' ಎಂಬ ಔಷಧಿಯನ್ನು ಶಿಫಾರಸು ಮಾಡಿದ್ದಾನೆ. ಈ ಔಷಧಿ ಯಶವಂತಪುರದಲ್ಲಿರುವ ವಿಜಯಲಕ್ಷ್ಮಿ ಆಯುರ್ವೇದಿಕ್ ಶಾಪ್ ನಲ್ಲಿ ಮಾತ್ರ ಸಿಗುತ್ತದೆ. ಬೇರೆಲ್ಲೂ ಸಿಗುವುದಿಲ್ಲ ಎಂದು ಹೇಳಿದನು. 1 ಗ್ರಾಂ ಔಷಧಿಯ ಬೆಲೆ ಬರೋಬ್ಬರಿ 1.60 ಲಕ್ಷ ರೂ. ರೂಪಾಯಿ..! ಇದನ್ನು ನಾನು ಹರಿದ್ವಾರದಿಂದ ತರಿಸಿದ್ದೇನೆ ಎಂದು ಹೇಳಿ ನಂಬಿಸಿದ್ದನು. ಟೆಕ್ಕಿ ಎಲ್ಲಿಯಾದರೂ ಆನ್‌ಲೈನ್ ಪೇಮೆಂಟ್ ಮಾಡಿದರೆ ಸಾಕ್ಷಿ ಉಳಿಯುತ್ತದೆ ಎಂಬ ಭಯದಿಂದಲೋ ಅಥವಾ ಜನರನ್ನು ಯಾಮಾರಿಸಲೋ, ಗುರೂಜಿ ವಿಚಿತ್ರ ಷರತ್ತುಗಳನ್ನು ವಿಧಿಸಿದನು. ಔಷಧಿ ತರಲು ಹೋಗುವಾಗ ನಗದು ಹಣವನ್ನೇ ತೆಗೆದುಕೊಂಡು ಹೋಗಬೇಕು. ಆನ್‌ಲೈನ್ ಪೇಮೆಂಟ್ ಮಾಡಬಾರದು. ಮುಖ್ಯವಾಗಿ, ಅಂಗಡಿಗೆ ಹೋಗುವಾಗ ಯಾರನ್ನೂ ಜೊತೆಗೆ ಕರೆದುಕೊಂಡು ಹೋಗಬಾರದು. ಒಬ್ಬರೇ ಹೋದರೆ ಮಾತ್ರ ಔಷಧಿಗೆ ಶಕ್ತಿ ಬರುತ್ತದೆ, ಇಲ್ಲದಿದ್ದರೆ ಅದು ಕೆಲಸ ಮಾಡುವುದಿಲ್ಲ ಎಂದು ಮೂಢನಂಬಿಕೆ ಬಿತ್ತಿದನು.

48 ಲಕ್ಷ ರೂಪಾಯಿ ಲೂಟಿ: ಸಾಲದ ಸುಳಿಯಲ್ಲಿ ಟೆಕ್ಕಿ

ಗುರೂಜಿಯ ಮಾತುಗಳನ್ನು ನಂಬಿದ ಟೆಕ್ಕಿ, ಯಶವಂತಪುರದ ವಿಜಯಲಕ್ಷ್ಮಿ ಆಯುರ್ವೇದಿಕ್ ಅಂಗಡಿಗೆ ತೆರಳಿ, ನಗದು ಹಣ ಕೊಟ್ಟು ಔಷಧಿ ಖರೀದಿಸಿದರು. ಆದರೆ ಸುಲಿಗೆ ಅಲ್ಲಿಗೆ ನಿಲ್ಲಲಿಲ್ಲ. ನಂತರ 'ಭವನ ಬೂಟಿ ತೈಲ' ಎಂಬ ಎಣ್ಣೆಯನ್ನು ನೀಡಲಾಯಿತು. ಇದರ ಬೆಲೆ 1 ಗ್ರಾಂಗೆ 76ಸಾವಿರ ರೂ..! ಟೆಕ್ಕಿ ತನ್ನ ಪತ್ನಿ ಮತ್ತು ಪೋಷಕರಿಂದ ಹಣ ಪಡೆದು, ಒಟ್ಟು 15 ಗ್ರಾಂ ತೈಲಕ್ಕಾಗಿ ಸುಮಾರು 17 ಲಕ್ಷ ರೂ. ಖರ್ಚು ಮಾಡಿದರು. ಬಳಿಕ, ಮತ್ತೆ 3 ಬಾರಿ 'ದೇವರಾಜ್ ಬೂಟಿ' ಪೌಡರ್ ಅನ್ನು (ಗ್ರಾಂಗೆ 1.60 ಲಕ್ಷದಂತೆ) ಖರೀದಿಸುವಂತೆ ಒತ್ತಡ ಹೇರಲಾಗಿದೆ. ಹಣವಿಲ್ಲ ಎಂದಾಗ, ಈಗ ನಿಲ್ಲಿಸಿದರೆ ಹಳೆಯ ಚಿಕಿತ್ಸೆ ಫಲ ನೀಡುವುದಿಲ್ಲ ಎಂದು ಬೆದರಿಕೆ ಹಾಕಲಾಯಿತು. ಅನಿವಾರ್ಯವಾಗಿ ಟೆಕ್ಕಿ ತಮ್ಮ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ 20 ಲಕ್ಷ ರೂಪಾಯಿ ವೈಯಕ್ತಿಕ ಸಾಲ ಪಡೆದು 18 ಗ್ರಾಂ ಔಷಧಿ ಖರೀದಿಸಿದರು. 'ದೇವರಾಜ್ ರಸಬೂಟಿ' ಎಂಬ ಔಷಧಿಯನ್ನು ಪರಿಚಯಿಸಿ, ಅದರ ಬೆಲೆ 1 ಗ್ರಾಂಗೆ 2.60 ಲಕ್ಷ ಎಂದು ಹೇಳಲಾಯಿತು. ಇದಕ್ಕಾಗಿ ಟೆಕ್ಕಿ ತಮ್ಮ ಸ್ನೇಹಿತರೊಬ್ಬರಿಂದ ಸಾಲ ಪಡೆದು 10 ಲಕ್ಷ ರೂ. ನೀಡಿ 4 ಗ್ರಾಂ ಖರೀದಿಸಿದರು. ಹೀಗೆ ಒಟ್ಟಾರೆಯಾಗಿ, ವಿಜಯ್ ಗುರೂಜಿ ಮತ್ತು ವಿಜಯಲಕ್ಷ್ಮಿ ಆಯುರ್ವೇದಿಕ್ ಅಂಗಡಿಯ ಮಾಲೀಕ ಸೇರಿಕೊಂಡು, ಬರೋಬ್ಬರಿ 48 ಲಕ್ಷ ರೂ. ನಗದು ರೂಪದಲ್ಲಿ ಪಡೆದು ವಂಚಿಸಿದ್ದಾರೆ.

ಆರೋಗ್ಯದ ಮೇಲೆ ಗಂಭೀರ ಪರಿಣಾಮ: ಕಿಡ್ನಿಗೆ ಹಾನಿ

ಇಷ್ಟೆಲ್ಲಾ ಹಣ ವೆಚ್ಚ ಮಾಡಿ ಪೌಡರ್ ಮತ್ತು ತೈಲಗಳನ್ನು ನಿಯಮಿತವಾಗಿ ಸೇವಿಸಿದರೂ ಟೆಕ್ಕಿಯ ಲೈಂಗಿಕ ಸಮಸ್ಯೆಗೆ ಎಳ್ಳಷ್ಟೂ ಪರಿಹಾರ ಸಿಗಲಿಲ್ಲ. ಬದಲಿಗೆ, ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸತೊಡಗಿತು. ಆತಂಕಗೊಂಡು ಬೇರೆ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ ಮಾಡಿಸಿದಾಗ ಆಘಾತಕಾರಿ ಸಂಗತಿ ಬಯಲಾಗಿದೆ. ನಕಲಿ ಗುರೂಜಿ ನೀಡಿದ ಔಷಧಿಯಲ್ಲಿನ ಹಾನಿಕಾರಕ ರಾಸಾಯನಿಕಗಳು ಅಥವಾ ಲೋಹದ ಅಂಶಗಳಿಂದಾಗಿ ಟೆಕ್ಕಿಯ ಮೂತ್ರಪಿಂಡಗಳಿಗೆ ಹಾನಿಯಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಆರೋಪಿಗಳು

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಜ್ಞಾನಭಾರತಿ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ರಸ್ತೆ ಬದಿಯಲ್ಲಿ ಟೆಂಟ್‌ ಹಾಕಿಕೊಂಡು ಆರ್ಯುವೇದ ಚಿಕಿತ್ಸೆ ನೀಡುವವರು ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲಾ ಟೆಂಟ್‌ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಇಂತಹ ಔಷಧಿಗಳ ತೆಗೆದುಕೊಳ್ಳುವ ಮುನ್ನ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಆರೋಪಿಗಳ ನಾಪತ್ತೆಯಾಗಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ನೈಋತ್ಯ ವಲಯದ ಡಿಸಿಪಿ ಅನಿತಾ ಬಿ. ಹದ್ದಣ್ಣನವರ್‌ ತಿಳಿಸಿದ್ದಾರೆ.

ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವೈದ್ಯರ ತಪ್ಪಿದೆ

ಲೈಂಗಿಕ ಚಿಕಿತ್ಸೆ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಲೈಂಗಿಕ ಚಿಕಿತ್ಸಕ ಡಾ.ವಿನೋದ್‌ ಛಬ್ಬಿ, ಲೈಂಗಿಕ ಸಮಸ್ಯೆಗಳ ಪರಿಹಾರಕ್ಕಾಗಿ ರಸ್ತೆ ಬದಿಯಲ್ಲಿನ ಟೆಂಟ್‌ಗಳಿಗೆ ಹೋಗುತ್ತಾರೆ ಎಂದರೆ ಏನು ಹೇಳಬೇಕು. ಬಹುಶಃ ಅವರು ಲೈಂಗಿಕ ಅಜ್ಞಾನ ಇದೆ ಎಂಬುದನ್ನು ತಿಳಿದುಕೊಳ್ಳಬಹುದು. ಆತನ ಆಯ್ಕೆಯಲ್ಲಿ ತಪ್ಪಿದೆ. ವಿದ್ಯಾವಂತರೇ ಈ ರೀತಿಯಾದರೆ ಹೇಗೆ ಎಂಬುದನ್ನು ಯೋಚನೆ ಮಾಡಬೇಕು. ಮಾಧ್ಯಮದ ಮೂಲಕ ಈ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದು. ನಂತರ ಟೆಂಟ್‌ಗೆ ಹೋಗಿದ್ದರು. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿಯೂ ತಪ್ಪಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ವೈದ್ಯರು ಲೈಂಗಿಕ ಕಾಯಿಲೆ ಎಂದು ಭಾವಿಸುತ್ತಾರೆ. ಅದು ತಪ್ಪು ಭಾವನೆಯಾಗಿದೆ. ಅದು ಲೈಂಗಿಕ ಕಾಯಿಲೆ ಅಲ್ಲ, ಬದಲಿಗೆ ಲೈಂಗಿಕ ಸಮಸ್ಯೆ, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕಾಗಿರುತ್ತದೆ. ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗದಿದ್ದಾಗ ನಿರಾಶೆರಾಗಿ ಅಲ್ಲಿಗೆ ಹೋಗಿರಬಹುದು. ವೈದ್ಯರು ತಮ್ಮ ಬಳಿಕ ಬರುವ ರೋಗಿಗಳಿಗೆ ಯಾವ ರೀತಿಯಲ್ಲಿ ಸ್ಪಂದಿಸಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಟೆಂಟ್‌ನಲ್ಲಿ ನೀಡಿದ ಚಿಕಿತ್ಸೆಯಿಂದ ಕಿಡ್ನಿ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಏನೆಂದರೆ ಅವರು ನೀಡಿರುವ ಔಷಧಿಯಲ್ಲಿ ಮರ್ಕೂರಿ, ಆರ್ಸೆನಿಕ್‌ ಅಂಶ ಇರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಸೇವಿಸಿದಾಗ ಕಿಡ್ನಿ ಹಾಳಾಗುತ್ತದೆ. ಅತ್ಯಂತ ವಿಷಪೂರಿತ ಲವಣಗಳನ್ನು ಬಳಕೆ ಮಾಡುವುದು ಅಪಾಯಕಾರಿಯಾಗಿರುತ್ತದೆ. ಹೀಗಾಗಿ ರಸ್ತೆ ಬದಿಯಲ್ಲಿರುವ ಟೆಂಟ್‌ಗಳ ಚಿಕಿತ್ಸೆಗೆ ಯಾರೂ ಸಹ ಹೋಗಬಾರದು. ಲೈಂಗಿಕ ಚಿಕಿತ್ಸಕರು ಸಾಕಾಷ್ಟು ಮಂದಿ ಇದ್ದಾರೆ. ಅವರ ಬಳಿ ಹೋಗಿ ಮುಕ್ತವಾಗಿ ಚರ್ಚಿಸಿದಾಗ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ. ಯಾವಾಗಲೂ ಪತಿ-ಪತ್ನಿ ನಡುವೆ ಲೈಂಗಿಕ ಬಾಂಧವ್ಯ ಇರಬೇಕು. ಇದು ಇಲ್ಲದಿದ್ದರೆ ಕಷ್ಟವಾಗಲಿದೆ. ಸಾಮರಸ್ಯ ಬಹಳ ಮುಖ್ಯವಾಗಿರುತ್ತದೆ ಎಂದರು.

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಆರ್ಯುವೇದ ವೈದ್ಯರಾದ ಡಾ.ಶಾಂತಗಿರಿ, ಟೆಂಟ್‌ ಅಲ್ಲಿ ಇಟ್ಟು ಮಾರಾಟ ಮಾಡುವ ಚಿಕಿತ್ಸೆಯು ಯಾವ ರೀತಿಯಲ್ಲಿರುತ್ತದೆ ಎಂಬುದು ಹೇಳಲು ಕಷ್ಟ. ಅವರು ಕೊಟ್ಟಿರುವ ಔಷಧಿಯಲ್ಲಿ ಕೆಮಿಕಲ್‌ ಇರಬಹುದು. ಆರ್ಯುವೇದ ಚಿಕಿತ್ಸೆಯಿಂದ ಸಾಮಾನ್ಯವಾಗಿ ಇಂತಹ ಸಮಸ್ಯೆಯಾಗುವುದಿಲ್ಲ. ಅಧಿಕೃತ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ರಸ್ತೆ ಬದಿಯಲ್ಲಿ ಟೆಂಟ್‌ ಹಾಕಿಕೊಂಡವರನ್ನು ನಂಬಬಾರದು. ಅವರು ಅಧಿಕೃತ ವೈದ್ಯರಾಗುವುದಿಲ್ಲ. ಯಾರೇ ಆಗಲಿ ಇಂತಹ ಚಿಕಿತ್ಸೆಯ ಮೊರೆ ಹೋಗಬಾರದು. ಅಲೋಪತಿ ಅಥವಾ ಆರ್ಯವೇದ ವೈದ್ಯರನ್ನು ಸಂಪರ್ಕಿಸುವಾಗ ಅವರು ಅಧಿಕೃತ ವೈದ್ಯರಾಗಿರಬೇಕು. ಅಂತಹವರನ್ನು ಮಾತ್ರ ಚಿಕಿತ್ಸೆ ಪಡೆದುಕೊಳ್ಳಬೇಕು. ನಕಲಿ ವೈದ್ಯರನ್ನು ಸಂಪರ್ಕಿಸಿದರೆ ಜೀವಕ್ಕೆ ಹಾನಿಯಾಗುವ ಎಲ್ಲಾ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಎಂದು ಹೇಳಿದರು.

ಡಿಜಿಟಲ್‌ನಲ್ಲಿ ಲೈಂಗಿಕ ಔಷಧಿ ಜಾಲದ ಕರಾಳ ಮುಖ!

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಯೂಟ್ಯೂಬ್ ನೋಡುತ್ತಿರುವಾಗ ಲೈಂಗಿಕ ಸಮಸ್ಯೆ ನಿವಾರಣೆಗೆ ಆರ್ಯುವೇದ ಔಷಧಿಗಳ ಪರಿಹಾರ ಎಂಬ ಜಾಹೀರಾತುಗಳು ಕಂಡು ಬರುತ್ತವೆ. ಇವುಗಳ ಸಹ ವಂಚನೆಯ ಮತ್ತೊಂದು ಮುಖವಾಗಿರುತ್ತದೆ. ಆಕರ್ಷಕ ಜಾಹೀರಾತುಗಳ ಹಿಂದೆ ಒಂದು ದೊಡ್ಡ ವಂಚನೆಯ ಜಾಲವೇ ಅಡಗಿರುತ್ತದೆ. ಗೂಗಲ್‌ನಲ್ಲಿ ಒಮ್ಮೆ ಲೈಂಗಿಕ ಆರೋಗ್ಯದ ಬಗ್ಗೆ ಹುಡುಕಾಟ ಮಾಡಿದರೆ ಸಾಕು, ಮರುಕ್ಷಣದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಲೈಂಗಿಕ ಔಷಧಿಗಳ ಜಾಹೀರಾತುಗಳು ಪ್ರತ್ಯಕ್ಷವಾಗುತ್ತವೆ. ಕೆಲವರು ಆಯುರ್ವೇದ ಔಷಧಗಳನ್ನು ತೋರಿಸಿ, ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಸುಳ್ಳು ಹೇಳುತ್ತಾರೆ. ಅಲ್ಲದೇ, ಕೆಲವು ಗ್ರಾಹಕರು ತಮಗೆ ಒಳ್ಳೆಯದಾಗಿದೆ ಎಂದು ಹೇಳಿ ಜನರನ್ನು ಮೋಡಿ ಮಾಡುತ್ತಾರೆ. ಅದರಲ್ಲಿಯೂ ಸಿನಿಮಾ ನಟ-ನಟಿಯರು ಇಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ದುರಾದುಷ್ಟಕರ ಸಂಗತಿಯಾಗಿದೆ. ಲೈಂಗಿಕ ಸಮಸ್ಯೆಗಳ ಬಗ್ಗೆ ಯಾರ ಬಳಿಯೂ ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿಯುವವರು, ಆಸ್ಪತ್ರೆಗೆ ಹೋಗಲು ಮುಜುಗರಕ್ಕೊಳಗಾಗುವವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಇಂತಹ ಬಲೆಗೆ ಬೀಳುತ್ತಾರೆ.

ಪತ್ರಿಕೆಗಳಲ್ಲಿಯೂ 'ಗುಪ್ತ ರೋಗ' ಜಾಹೀರಾತುಗಳ ಜಾಲ

ಪತ್ರಿಕೆಗಳಲ್ಲಿಯೂ ಸಂತಾನಪ್ರಾಪ್ತಿಯಾಗದವರಿಗೆ ಔಷಧಿ ನೀಡಲಾಗುತ್ತದೆ ಎಂಬ ಜಾಹೀರಾತುಗಳು ಕಾಣಸಿಗುತ್ತವೆ. ಪತ್ರಿಕೆಗಳಲ್ಲಿನ ಜಾಹೀರಾತುಗಳ ಅಕ್ಷರ ಹಿಂದೆ ಅಡಗಿರುವುದು ಬರೀ ಬಣ್ಣದ ಮಾತುಗಳಲ್ಲ, ಅದೊಂದು ಸುಸಜ್ಜಿತವಾದ ವಂಚನೆಯ ಜಾಲವಾಗಿರುತ್ತದೆ. ಜಾಹೀರಾತುಗಳಲ್ಲಿ ಬಳಸುವ ಭಾಷೆಯೇ ವಿಚಿತ್ರವಾಗಿರುತ್ತದೆ. ಲೈಂಗಿಕ ಸಮಸ್ಯೆಯನ್ನು ಒಂದು ಮಹಾನ್ ಕಾಯಿಲೆ ಎಂಬಂತೆ ಬಿಂಬಿಸಿ, ಓದುಗರಲ್ಲಿ ಭಯ ಹುಟ್ಟಿಸುವುದು ತಂತ್ರಗಾರಿಕೆಯಾಗಿರುತ್ತದೆ. ಜಾಹೀರಾತಿನಲ್ಲಿ ಸಮಾಲೋಚನೆ ಉಚಿತ ಎಂದು ಹಾಕಿರುತ್ತಾರೆ. ಇದನ್ನು ನಂಬಿ ಹೋಗುವ ರೋಗಿಗಳನ್ನು ಕೂರಿಸಿಕೊಂಡು, ನಾಡಿ ಪರೀಕ್ಷಿಸುವ ನಾಟಕವಾಡಿ, ಔಷಧಿ ನೀಡುವ ನೆಪದಲ್ಲಿ ವಂಚನೆ ಮಾಡಲಾಗುತ್ತದೆ. ಹೆಚ್ಚಾಗಿ ಮಧ್ಯವಯಸ್ಕರು, ಆಸ್ಪತ್ರೆಗಳಿಗೆ ಹೋಗಿ ಮುಕ್ತವಾಗಿ ಹೇಳಿಕೊಂಡು ಚಿಕಿತ್ಸೆ ಪಡೆಯಲು ಮುಜುಗರ ಪಡುವ ಯುವಕರು ಇವರ ಗುರಿಯಾಗಿರುತ್ತಾರೆ. ಪತ್ರಿಕೆಯಲ್ಲಿ ಬಂದಿದೆ ಎಂದರೆ ಅದು ಅಧಿಕೃತ ವೈದ್ಯರೇ ಇರಬೇಕು ಎಂಬ ತಪ್ಪು ಕಲ್ಪನೆಯೇ ಇದಕ್ಕೆ ಕಾರಣವಾಗಿರುತ್ತದೆ.


Read More
Next Story