
ಪತ್ನಿ ಇಲ್ಲದ ವೇಳೆ ಅಪ್ರಾಪ್ತ ನಾದಿನಿ ಮೇಲೆ ಲೈಂಗಿಕ ದೌರ್ಜನ್ಯ; 4 ತಿಂಗಳ ಗರ್ಭಿಣಿಯಾದ ಬಾಲಕಿ
ಕಳೆದ ಮಂಗಳವಾರ ಬಾಲಕಿ ತೀವ್ರ ಹೊಟ್ಟೆ ನೋವಿನಿಂದ ಬಳಲಿ, ಋತುಚಕ್ರ ತಪ್ಪಿರುವುದನ್ನು ಗಮನಿಸಿ ಪೋಷಕರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ನಾಲ್ಕು ತಿಂಗಳ ಗರ್ಭಿಣಿ ಎಂದು ದೃಢಪಟ್ಟಿದೆ.
16 ವರ್ಷದ ಅಪ್ರಾಪ್ತ ನಾದಿನಿ(ಪತ್ನಿಯ ತಂಗಿ) ಮೇಲೆ ನಿರಂತರ ಅತ್ಯಾಚಾರ ಎಸಗಿದ ಪರಿಣಾಮ ಬಾಲಕಿ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಪ್ರಕರಣ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೊಹಮ್ಮದ್ ಸಾಬ್ ಕೃತ್ಯ ಎಸಗಿದ ಆರೋಪಿ. ಈತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.
ಆರೋಪಿ ಮೊಹಮ್ಮದ್ ಸಾಬ್ ತನ್ನ ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ಈ ಕೃತ್ಯ ಎಸಗಿದ್ದಾನೆ. ಜುಲೈ 21 ರಂದು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದಾದ ಬಳಿಕ ಎರಡು ತಿಂಗಳ ಕಾಲ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭ ಬಳಸಿಕೊಂಡು ಆಕೆಯ ಮೇಲೆ ಪದೇ ಪದೇ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಜೀವ ಬೆದರಿಕೆ ಹಾಕಿದ್ದರಿಂದ ಈ ವಿಷಯವನ್ನು ಹೇಳದೇ ಸುಮ್ಮನಿದ್ದಳು ಎನ್ನಲಾಗಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಗರ್ಭಿಣಿ ಎಂದು ದೃಢ
ಕಳೆದ ಮಂಗಳವಾರ ಬಾಲಕಿ ತೀವ್ರ ಹೊಟ್ಟೆ ನೋವಿನಿಂದ ಬಳಲಿ, ಋತುಚಕ್ರ ತಪ್ಪಿರುವುದನ್ನು ಗಮನಿಸಿದ ಪೋಷಕರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ನಾಲ್ಕು ತಿಂಗಳ ಗರ್ಭಿಣಿ ಎಂದು ದೃಢಪಟ್ಟಿತು.
ಸಂತ್ರಸ್ತೆಯು ಅಪ್ರಾಪ್ತಳಾಗಿರುವುದರಿಂದ ಆಸ್ಪತ್ರೆಯವರು ತಕ್ಷಣವೇ ಪ್ರಕರಣವನ್ನು ಮೆಡಿಕೋ-ಲೀಗಲ್ ಕೇಸ್ (MLC) ಎಂದು ಪರಿಗಣಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯ ಹೇಳಿಕೆ ಮತ್ತು ಆಕೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮೊಹಮ್ಮದ್ ಸಾಬ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯಡಿ ಅತ್ಯಾಚಾರ, ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕ್ರಿಮಿನಲ್ ಬೆದರಿಕೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

