ಸಲಿಂಗ ದೌರ್ಜನ್ಯ: ಸೂರಜ್‌ ರೇವಣ್ಣ ಮೇಲೆ  ಆಪ್ತನಿಂದಲೇ ಎಫ್‌ಐಆರ್ ದಾಖಲು
x

ಸಲಿಂಗ ದೌರ್ಜನ್ಯ: ಸೂರಜ್‌ ರೇವಣ್ಣ ಮೇಲೆ ಆಪ್ತನಿಂದಲೇ ಎಫ್‌ಐಆರ್ ದಾಖಲು


ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲಾಗಿದೆ. ಸೂರಜ್ ಪರವಾಗಿ ಸಂತ್ರಸ್ತನ ವಿರುದ್ಧ ದೂರು ಕೊಟ್ಟಿದ್ದ ಹೊಳೆನರಸೀಪುರ ಮೂಲದ ಯುವಕನೇ ಈದೀಗ ಸೂರಜ್ ವಿರುದ್ಧ ದೂರು ನೀಡಿದ್ದಾನೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಜೆಡಿಎಸ್ ಎಂಎಲ್ ಸಿ ಸೂರಜ್ ರೇವಣ್ಣ ವಿರುದ್ಧ ಎರಡನೇ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಮೂರು ವರ್ಷಗಳಿಂದ ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಮಂಗಳವಾರ ದೂರು ನೀಡಿದ್ದಾನೆ. ಸಂತ್ರಸ್ತನ ದೂರನ್ನು ಆಧಾರಿಸಿ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506 ಅಡಿ ಎಫ್ಐಆರ್ ದಾಖಲಾಗಿದೆ. ಅರಕಲಗೂಡು ಮೂಲದ ಯುವಕನ ವಿರುದ್ಧ ದೂರು ನೀಡಲು ಸೂರಜ್ ಒತ್ತಡ ಹಾಕಿದ್ದರು. ಕೊರೊನಾ ಸಮಯದಲ್ಲಿ ತನ್ನ ಮೇಲೆ ಕೂಡ ಇದೇ ರೀತಿಯ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯವನ್ನು ಸೂರಜ್ ಎಸಗಿದ್ದರು ಎಂದು ಸಂತ್ರಸ್ತ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಶನಿವಾರ ರಾತ್ರಿ ಸೂರಜ್ ರೇವಣ್ಣ ವಿರುದ್ಧ ಮೊದಲ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಮರುದಿನವೇ ಸೂರಜ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು. ಸೂರಜ್ ರೇವಣ್ಣರನ್ನು ನ್ಯಾಯಾಂಗ ಬಂಧನ ನೀಡಲಾಗಿತ್ತು. ಸೋಮವಾರ ನ್ಯಾಯಾಲಯ ಅವರನ್ನು ಎಂಟು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ರೇವಣ್ಣ ಕುಟುಂಬದಲ್ಲಿ ಕೋಲಾಹಲ ಎಬ್ಬಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣ

ವೈದ್ಯರಾಗಿರುವ ಸೂರಜ್ ರೇವಣ್ಣ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಮೊಮ್ಮಗರಾಗಿದ್ದು, ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಅವರ ಹಿರಿಯ ಪುತ್ರರಾಗಿದ್ದಾರೆ. ಜೆಡಿಎಸ್ ಪಕ್ಷದ ಎಂಎಲ್‌ಸಿ ಕೂಡ ಆಗಿರುವ ಸೂರಜ್ ರೇವಣ್ಣ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹಿರಿಯ ಸಹೋದರರಾಗಿದ್ದಾರೆ.

ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರನ್ನು ಚಿತ್ರೀಕರಿಸಿದ ಆರೋಪದ ಮೇಲೆ ಪೊಲೀಸ್ ವಶದಲ್ಲಿದ್ದಾರೆ. ಮಾತ್ರವಲ್ಲದೇ ಸೂರಜ್ ಮತ್ತು ಪ್ರಜ್ವಲ್ ಅವರ ಪೋಷಕರಾದ ರೇವಣ್ಣ ಮತ್ತು ಭವಾನಿ ಅವರು ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಜಾಮೀನಿನ ಮೇಲೆ ಹೊರಗಿದ್ದಾರೆ. ರೇವಣ್ಣ ವಿರುದ್ಧವೂ ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವಿದೆ.

Read More
Next Story