
ಒಳಚರಂಡಿ ಶುಚಿಗೊಳಿಸಲು ಇಳಿದಿದ್ದ ಕಾರ್ಮಿಕ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ
ಘಟನಾ ಸ್ಥಳಕ್ಕೆ ಆರ್‌ಎಂಸಿ ಯಾರ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಇನ್ನೂ ಯಾರೂ ದೂರು ನೀಡಿಲ್ಲವಾದರೂ, ದೂರು ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ
ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯ ಆಶ್ರಯನಗರದಲ್ಲಿ ಒಳಚರಂಡಿ ಶುಚಿಗೊಳಿಸಲು ಇಳಿದಿದ್ದ ಕಾರ್ಮಿಕರೊಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪುಟ್ಟ (32) ಮೃತಪಟ್ಟ ಕಾರ್ಮಿಕ. ಅವರ ಸಹೋದ್ಯೋಗಿ ಅಂಥೋಣಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ
ಭಾನುವಾರ ಸಂಜೆ ಆಶ್ರಯನಗರದ ಇಂದಿರಾ ಕ್ಯಾಂಟೀನ್ ಬಳಿ ಇರುವ ಒಳಚರಂಡಿಯನ್ನು ಶುಚಿಗೊಳಿಸಲು ಪುಟ್ಟ ಹಾಗೂ ಅಂಥೋಣಿ ಇಳಿದಿದ್ದರು. ಶುಚಿಗೊಳಿಸುವಾಗ ಇಬ್ಬರೂ ಉಸಿರುಗಟ್ಟಿ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಹೊರತೆಗೆದು, ನೀರು ಮತ್ತು ಮಜ್ಜಿಗೆ ಕುಡಿಸಿ ಮನೆಗೆ ಕಳುಹಿಸಲಾಗಿತ್ತು. ಆದರೆ, ರಾತ್ರಿ ಮನೆಯಲ್ಲಿ ಮಲಗಿದ್ದ ಸ್ಥಳದಲ್ಲೇ ಪುಟ್ಟ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ಆರ್‌ಎಂಸಿ ಯಾರ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಇನ್ನೂ ಯಾರೂ ದೂರು ನೀಡಿಲ್ಲವಾದರೂ, ದೂರು ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. "ಮನುಷ್ಯರನ್ನು ಬಳಸಿ ಒಳಚರಂಡಿ ಸ್ವಚ್ಛಗೊಳಿಸುವುದು ನಿಷೇಧಿತವಾಗಿದೆ. ಈ ನಿಯಮ ಉಲ್ಲಂಘಿಸಿ, ಹಣದ ಆಮಿಷವೊಡ್ಡಿ ಇಬ್ಬರನ್ನೂ ಒಳಚರಂಡಿಗೆ ಇಳಿಸಿರುವ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಹೇಳಿದ್ದಾರೆ. ಪುಟ್ಟ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.