
ರಾಜ್ಯದ 25 ಜಿಲ್ಲೆಗಳಲ್ಲಿ ಬಿಸಿ ಗಾಳಿ: ಹವಾಮಾನ ಇಲಾಖೆ ಎಚ್ಚರಿಕೆ
ಮೈಸೂರು, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಕೊಡಗು, ಹಾಗೂ ತುಮಕೂರು ಜಿಲ್ಲೆಯ ಕೆಲವೆಡೆ ಬುಧವಾರ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.
ರಾಜ್ಯದ 25 ಜಿಲ್ಲೆಗಳಲ್ಲಿ ಇನ್ನೂ ಕೆಲವು ದಿನಗಳವರೆಗೆ ಬಿಸಿ ಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಈಗಾಗಲೇ, ಬಿಸಿಲಾಘಾತದಿಂದ ಜನರು ತತ್ತರಿಸಿದ್ದು, ನೀರಿಗೆ ತತ್ವಾರ ಎದುರಾಗಿದೆ. ರಾಜ್ಯದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಎರಡು- ಮೂರು ದಿನ ಅಲ್ಲಲ್ಲಿ ಮಳೆಯಾಗಿದ್ದನ್ನು ಹೊರತುಪಡಿಸಿದರೆ ಈ ಬಾರಿಯ ಬೇಸಿಗೆ ಬೆಂಕಿಯುಗುಳುವ ಬಿಸಿಲು ಮತ್ತು ಬಿಸಿಗಾಳಿಯ ಹಂಗಾಮವಾಗಿದೆ. ಜನ, ಜಾನುವಾರು, ಪಶುಪಕ್ಷಿಗಳು ಕುಡಿಯುವ ನೀರು, ನೆರಳು ಇಲ್ಲದೆ ಬಸವಳಿಯುತ್ತಿದ್ದಾರೆ. ಭಾರೀ ಬಿಸಿಲಿನಿಂದಾಗಿ ಪಕ್ಷಿಗಳ ಸಾವು ಕೂಡ ಅಲ್ಲಲ್ಲಿ ವರದಿಯಾಗಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಸಿಗಾಳಿಯ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಮೇ 5ರವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.
ಮಳೆ ಮುನ್ಸೂಚನೆ
ಮೈಸೂರು, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಕೊಡಗು, ಹಾಗೂ ತುಮಕೂರು ಜಿಲ್ಲೆಯ ಕೆಲವೆಡೆ ಬುಧವಾರ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.
ಮೇ 6ರಿಂದ ಕೊಡಗು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮಾತ್ರವಲ್ಲದೆ, ಒಡಿಶಾ, ಪಶ್ಚಿಮ ಬಂಗಾಳದ, ಆಂಧ್ರಪ್ರದೇಶ, ಜಾರ್ಖಂಡ್ ಹಾಗೂ ಬಿಹಾರದ ಬಹುತೇಕ ಪ್ರದೇಶಗಳಲ್ಲಿ ತೀವ್ರತರವಾದ ಶಾಖದ ಅಲೆ ಎದುರಿಸುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಹೇಳಿದೆ.