ಜು.15 ರಿಂದ ವಿಧಾನಮಂಡಲ ಅಧಿವೇಶನ ಆರಂಭ: ಶಾಸಕರ ಹಾಜರಾತಿ ಅವಧಿ ದಾಖಲೆಗೆ ʻಎಐʼ ಅಳವಡಿಕೆ
x

ಜು.15 ರಿಂದ ವಿಧಾನಮಂಡಲ ಅಧಿವೇಶನ ಆರಂಭ: ಶಾಸಕರ ಹಾಜರಾತಿ ಅವಧಿ ದಾಖಲೆಗೆ ʻಎಐʼ ಅಳವಡಿಕೆ


ಜುಲೈ 15ರಿಂದ ರಾಜ್ಯ ವಿಧಾನಮಂಡಲದ ಅಧಿವೇಶನ ಪ್ರಾರಂಭಗೊಳ್ಳಲಿದ್ದು, ಈ ಬಾರಿ ಶಾಸಕರ ಹಾಜರಾತಿ ಅವಧಿಯನ್ನು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧರಿಸಿ ಲೆಕ್ಕ ಹಾಕಲಾಗುವುದು ಎಂದು ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಶುಕ್ರವಾರ ಸಭಾಪತಿ ಬಸವರಾಜ ಹೊರಟ್ಟಿ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಾದರ್‌ ಅವರು, ʻʻಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದ್ದು ಜುಲೈ 15ರಂದು ಬೆಳಗ್ಗೆ 11ಕ್ಕೆ ಪ್ರಾರಂಭವಾಗುತ್ತದೆ. ಕಳೆದ ಅಧಿವೇಶನದಲ್ಲಿ ಕಲಾಪಕ್ಕೆ ಬೇಗ ಹಾಜರಾಗುವ ಸದಸ್ಯರಿಗೆ ಬಹುಮಾನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಯಾರು ಎಷ್ಟು ಸಮಯ ಇದ್ದಾರೆ? ಎಷ್ಟು ಬಾರಿ ಎದ್ದು ಹೋದರು? ಅಧಿವೇಶನ ಪೂರ್ತಿ ಇದ್ದವರು ಯಾರು? ಎಂಬುದನ್ನೂ ಗಣನೆಗೆ ತೆಗೆದುಕೊಳ್ಳುತ್ತೇವೆ. ಕೃತಕ ಬುದ್ಧಿಮತ್ತೆ ತಂತ್ರಜ್ಣಾನ ಆಧರಿಸಿ ಈ ಅವಧಿ ಯನ್ನು ಲೆಕ್ಕ ಹಾಕುತ್ತೇವೆʼʼ ಎಂದು ಹೇಳಿದ್ದಾರೆ.

ಅತ್ಯುತ್ತಮ ಶಾಸಕರ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಕ್ಷೇತ್ರದ ಜನರು ಅಧಿವೇಶನ ಸಂದರ್ಭದಲ್ಲಿ ಶಾಸಕರು ಕಲಾಪದಲ್ಲಿ ಕುಳಿತು ಚರ್ಚಿಸುವುದಕ್ಕೆ ಅವಕಾಶ ಮಾಡಿಕೊಡಲಿ. ಆಮೇಲೆ ಸಾಕಷ್ಟು ಸಮಯ ಇರುತ್ತದೆ. ಆ ಸಂದರ್ಭದಲ್ಲಿ ಬೇಕಾದರೆ ನಿಮ್ಮ ನಿಮ್ಮ ಕೆಲಸ ಮಾಡಿಸಿಕೊಳ್ಳಿ. ಸಚಿವರು ವಿಧಾನಸೌಧದಲ್ಲಿ ಯಾವ ಸಂದರ್ಭದಲ್ಲಿ ಇರುತ್ತಾರೆ, ಸಾರ್ವಜನಿಕರ ಭೇಟಿ ಸಮಯ ಯಾವಾಗ ಎಂಬಿತ್ಯಾದಿ ಮಾಹಿತಿಗಳು ಲಭಿಸುವಂಥ ಆ್ಯಪ್‌ನ್ನು ಸದ್ಯದಲ್ಲೇ ರಚಿಸಲಾಗುವುದು ಎಂದರು.

ಈ ವೇಳೆ ಬಸವರಾಜ್‌ ಹೊರಟ್ಟಿ ಮಾತನಾಡಿ, ʻʻವರ್ಷದಲ್ಲಿ ಕನಿಷ್ಠ 60 ದಿನ ಕಲಾಪ ನಡೆಯಬೇಕೆಂಬುದು ನಮ್ಮ ನಿರೀಕ್ಷೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಅಧಿವೇಶನದ ಅವಧಿ ವಿಸ್ತರಿಸುವ ಬಗ್ಗೆ ಜಂಟಿ ಕಲಾಪ ಸಮಿತಿ ಸಭೆಯಲ್ಲಿ ನಿರ್ಣಯಿಸುತ್ತೇವೆ. ವಿಧಾನ ಪರಿಷತ್ತಿನ ಅತ್ಯುತ್ತಮ ಸದಸ್ಯರ ಆಯ್ಕೆ ಬಹುಪಾಲು ಅಂತ್ಯಗೊಂಡಿದೆ. ಸದ್ಯದಲ್ಲೇ ಪ್ರಕಟ ಮಾಡುತ್ತೇವೆʼʼ ಎಂದು ತಿಳಿಸಿದರು.

ವಿಧಾನಸೌಧ ಸೌಂದರ್ಯೀಕರಣದ ವಿಚಾರದಲ್ಲಿ ಸ್ಪೀಕರ್‌ ಖಾದರ್‌ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಭಿನ್ನಧ್ವನಿ ಪ್ರಕಟಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಘಟನೆ ನಡೆದಿದೆ. ಮೊದಲು ಖಾದರ್‌ ಮಾತನಾಡಿ, ʻʻ70 ವರ್ಷದ ಬಳಿಕ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ದ್ವಾರವನ್ನು ಬದಲಾವಣೆ ಮಾಡಲಾಗುತ್ತಿದೆ. ಇಲ್ಲಿ ಮೊದಲು ಕಬ್ಬಿಣದ ಗ್ರಿಲ್‌ ಇತ್ತು. ದೇಶ-ವಿದೇಶದ ಗಣ್ಯರು ಭೇಟಿ ನೀಡಲು ಬಂದಾಗ ಇದು ಸೊಗಸಾಗಿ ಕಾಣುತ್ತಿರಲಿಲ್ಲ. ಹೀಗಾಗಿ ದ್ವಾರವನ್ನು ಸುಂದರವಾಗಿ ರೂಪಿಸಲಾಗಿದ್ದು ಜುಲೈ 15ರಂದು 10.30ಕ್ಕೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಭವಿಷ್ಯದಲ್ಲಿ ಸಂಪೂರ್ಣ ವಿಧಾನಸೌಧವನ್ನು ಪರಂಪರೆಗೆ ಧಕ್ಕೆಯಾಗದಂತೆ ಸೌಂದರ್ಯೀಕರಣದ ಎಂದು ಹೇಳಿದರು.

ವಾಸ್ತು ಪ್ರಕಾರ ಬೇಡ

ಹೊರಟ್ಟಿ, ಅವರು ಮಾತನಾಡಿ ʻʻವಿಧಾನಸೌಧದ ಕೊಠಡಿಗಳ ಮೂಲೆಯನ್ನು ಬದಲಾಯಿಸಬಾರದು ಎಂಬ ನಿಯಮವೇ ಇದೆ. ಈ ಹಿಂದೆ ಸಚಿವರೊಬ್ಬರು ಗೋಡೆ ಒಡೆದು ವಿವಾದಕ್ಕೆ ಕಾರಣವಾಗಿದ್ದರು. ಸಣ್ಣಪುಟ್ಟ ಬದಲಾವಣೆ ಬೇಕಾದರೆ ಮಾಡಿಕೊಳ್ಳಬಹುದು. ಆದರೆ ಸಂಪೂರ್ಣವಾಗಿ ಗೋಡೆ ಒಡೆಯುವುದಕ್ಕೆ ಅವಕಾಶವೇ ಇಲ್ಲ. ಇತಿಹಾಸವನ್ನು ಸ್ವಲ್ಪ ಓದಿದರೆ ಗೊತ್ತಾಗುತ್ತದೆ, ವಿಧಾನಸೌಧದಲ್ಲಿ ವಾಸ್ತು ಪ್ರಕಾರ ನವೀಕರಣ ಮಾಡುವ ಅಗತ್ಯವೇ ಇಲ್ಲ. ಏಕೆಂದರೆ ಇಡೀ ವಿಧಾನಸೌಧ ವಾಸ್ತು ಪ್ರಕಾರ ನಿರ್ಮಾಣಗೊಂಡಿದೆʼʼ ಎಂದು ಹೊರಟ್ಟಿ ಅವರು ಹೇಳಿದರು.

Read More
Next Story