
'ನವೆಂಬರ್ ಕ್ರಾಂತಿ' ಚರ್ಚೆ ಬೆನ್ನಲ್ಲೆ ಸರಣಿ ಸಭೆ; ಸಿಎಂ ಆಪ್ತ ಸಚಿವರಿಂದ ತಡರಾತ್ರಿ ಸಭೆ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿಯ ನಂತರ ಸಿದ್ದರಾಮಯ್ಯ ಬಣ ಹೆಚ್ಚು ಸಕ್ರಿಯವಾಗಿರುವುದು ನೋಡಿದರೆ ಮುಖ್ಯಮಂತ್ರಿ ಬದಲಾವಣೆ ಊಹಾಪೋಹಗಳು ಹೆಚ್ಚು ಪುಷ್ಠಿ ಪಡೆದಂತಿವೆ.
ರಾಜ್ಯ ರಾಜಕಾರಣದಲ್ಲಿ ʼನವೆಂಬರ್ ಕ್ರಾಂತಿʼ ಬಿಸಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಿರಿಯ ಸಚಿವರು ಬುಧವಾರ ತಡರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ರಹಸ್ಯ ಸಭೆ ನಡೆಸಿರುವ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿಯ ನಂತರ ಸಿದ್ದರಾಮಯ್ಯ ಬಣ ಹೆಚ್ಚು ಸಕ್ರಿಯವಾಗಿರುವುದು ನೋಡಿದರೆ ಮುಖ್ಯಮಂತ್ರಿ ಬದಲಾವಣೆ ಊಹಾಪೋಹಗಳು ಹೆಚ್ಚು ಪುಷ್ಠಿ ಪಡೆದಂತಿವೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ರಹಸ್ಯ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಭಾಗವಹಿಸಿದ್ದರು. ಮಧ್ಯರಾತ್ರಿ 12 ಗಂಟೆಗೆ ಆರಂಭವಾದ ಸಭೆಯು ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು.
ನಾಯಕತ್ವ, ದಲಿತ ಸಿಎಂ ಕುರಿತು ಚರ್ಚೆ
ಸಭೆಯಲ್ಲಿ ನಾಯಕತ್ವ ಬದಲಾವಣೆ ಪ್ರಸ್ತಾಪ, ದಲಿತ ಸಿಎಂ ವಿಚಾರದ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಅಲ್ಲದೇ ನಾಯಕತ್ವ ಬದಲಾವಣೆಯಿಂದ ಎದುರಾಗುವ ರಾಜಕೀಯ ಪರಿಣಾಮ, ಸಿಎಂ ಮುಂದುವರಿಕೆಗೆ ಲಿಂಗಾಯತ ಸಮುದಾಯದ ಬೆಂಬಲ ಪಡೆಯುವುದು ಹಾಗೂ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣಗಳ ಮಧ್ಯೆ ಸಾಮರಸ್ಯ ಮೂಡಿಸುವ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ನವೆಂಬರ್ 20 ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳಿಸಲಿದೆ. ಸರ್ಕಾರ ರಚನೆ ವೇಳೆ ನಡೆದಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದದಂತೆ ನಾಯಕತ್ವದ ಬದಲಾವಣೆ ಮಾಡಬೇಕು ಎಂದು ಹೇಳಿಕೆಗಳ ಹಿನ್ನೆಲೆಯಲ್ಲಿ ʼನವೆಂಬರ್ ಕ್ರಾಂತಿʼ ಖಚಿತವಾಗಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಸಕ್ರಿಯವಾದ ಸಿಎಂ ಬಣ
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿ ಭೇಟಿ ಮುಗಿಸಿ ಮರಳುತ್ತಿದ್ದಂತೆ ಸಿದ್ದರಾಮಯ್ಯ ಬಣದ ಸಚಿವರು ಹಾಗೂ ಶಾಸಕರು ಸಕ್ರಿಯವಾಗಿದ್ದಾರೆ. ಬ್ರೇಕ್‌ಫಾಸ್ಟ್ ಮೀಟಿಂಗ್, ಔತಣಕೂಟ ಹೆಸರಿನಲ್ಲಿ ಈಗಾಗಲೇ ಸಭೆಗಳನ್ನು ನಡೆಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಸಿಎಂ ನೇತೃತ್ವದಲ್ಲಿ ದಲಿತ ಸಚಿವರು ವಿಧಾನಸೌಧದ ಮೂರನೇ ಮಹಡಿಯಲ್ಲಿ ರಹಸ್ಯ ಸಭೆ ನಡೆಸಿದ್ದರು. ಒಂದು ವೇಳೆ ಸಿಎಂ ಸ್ಥಾನ ಬದಲಾವಣೆ ಮಾಡಿದರೆ ದಲಿತರಿಗೆ ಅಧಿಕಾರ ಕೊಡಬೇಕೆಂಬ ಬೇಡಿಕೆಯನ್ನು ಹೈಕಮಾಂಡ್ ಮುಂದಿಡಲು ನಿರ್ಧರಿಸಲಾಗಿತ್ತು.

