
ಹಾಸನದಲ್ಲಿ ಸರಣಿ ಹೃದಯಾಘಾತ ; ಅಧ್ಯಯನ ನಡೆಸಲು ಕೇಂದ್ರಕ್ಕೆ ಶ್ರೇಯಸ್ ಪಾಟೇಲ್ ಮನವಿ
ಕರ್ನಾಟಕ ಹಾಗೂ ವಿಶೇಷವಾಗಿ ಹಾಸನ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಉದ್ಯೋಗ ಸ್ಥಳಗಳಲ್ಲಿ 40 ವರ್ಷ ವಯೋಮಿತಿಯ ಎಲ್ಲರಿಗೆ ಹೃದಯ ತಪಾಸಣೆ ಕಡ್ಡಾಯ ಮಾಡಬೇಕು ಎಂದು ಶ್ರೇಯಸ್ ಪಾಟೀಲ್ ಕೋರಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಹೃದಯಾಘಾತಗಳ ಸಂಬಂಧ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವಿಶೇಷ ಅಧ್ಯಯನ ನಡೆಸಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಮಿಷನ್ ಆರಂಭಿಸಬೇಕು ಎಂದು ಒತ್ತಾಯಿಸಿ ಹಾಸನ ಸಂಸದ ಶ್ರೇಯಸ್ ಪಟೇಲ್ ಅವರು ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಮಾಡಿದರು.
ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಕ್ಷೇತ್ರದ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಮನವಿ ಸಲ್ಲಿಸಿದರು.
ಇತ್ತೀಚೆಗೆ ಹಾಸನದಲ್ಲಿ ಯುವಕರೇ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದು, ಆತಂಕ ಹುಟ್ಟಿಸಿದೆ. ಹೃದಯ ಸಂಬಂಧಿ ತೊಂದರೆಗಳಿಂದ ಅಕಾಲಿಕ ಮರಣ ಹೊಂದುತ್ತಿರುವುದು ಕುಟುಂಬ ಮತ್ತು ಸಮುದಾಯದ ಮೇಲೆ ಆಘಾತಕಾರಿ ಪರಿಣಾಮ ಬೀರಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಹಾಗೂ ವಿಶೇಷವಾಗಿ ಹಾಸನ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕಾ ಉದ್ಯೋಗ ಸ್ಥಳಗಳಲ್ಲಿ 40 ವರ್ಷ ವಯೋಮಿತಿಯ ಎಲ್ಲರಿಗೆ ಕಡ್ಡಾಯ ಹೃದಯ ತಪಾಸಣೆಯನ್ನು ನಡೆಸಬೇಕು.ಆಕಸ್ಮಿಕ ಹೃದಯ ಸ್ತಂಭನ ತಡೆಗೆ ರಾಷ್ಟ್ರೀಯ ಡಿಜಿಟಲ್ ರಿಜಿಸ್ಟರ್ ಸ್ಥಾಪನೆ ಮಾಡಬೇಕು. ಸಂಗ್ರಹಿತ ಮಾಹಿತಿಯಿಂದ ಸಂಶೋಧನೆ ಮತ್ತು ತಡೆಗಟ್ಟುವ ಕಾರ್ಯತಂತ್ರಗಳು ರೂಪಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ಹೃದಯ ತಪಾಸಣಾ ವಾಹನಗಳನ್ನು ಮಂಜೂರು ಮಾಡಬೇಕು. ಹಾಸನ ಸೇರಿದಂತೆ ಆಯ್ದ ಪೈಲಟ್ ಜಿಲ್ಲೆಗಳಲ್ಲಿ ಈ ಯೋಜನೆ ಪ್ರಾರಂಭಿಸುವ ಮೂಲಕ ತ್ವರಿತ ಚಿಕಿತ್ಸೆಗೆ ನೆರವಾಗಬೇಕು ಎಂದು ಆಗ್ರಹಿಸಿದರು.
ಕ್ರೀಡಾ ಕ್ಷೇತ್ರ ಹಾಗೂ ಹೆಚ್ಚಿನ ಒತ್ತಡದ ಉದ್ಯೋಗಗಳಲ್ಲಿ ಭಾಗವಹಿಸುವ ಮೊದಲು ಕಡ್ಡಾಯ ಹೃದಯ ತಪಾಸಣೆಗೆ ರಾಷ್ಟ್ರೀಯ ಮಾರ್ಗಸೂಚಿ ಹೊರಡಿಸಬೇಕು ಎಂದರು.
ಯುವಕರಲ್ಲಿ ಉಲ್ಬಣಗೊಳ್ಳುತ್ತಿರುವ ಅಧಿಕ ರಕ್ತದೊತ್ತಡ ಮಧುಮೇಹ ಜೀವನಶೈಲಿ ಹಾಗೂ ಆನುವಂಶಿಕ ಕಾರಣಗಳಿಂದಾಗಿ ಹೃದಯ ಸಮಸ್ಯೆ ಹೆಚ್ಚಾಗುತ್ತಿದ್ದು ರಾಷ್ಟ್ರೀಯ ಮಟ್ಟದಲ್ಲಿ ಕ್ರಮದ ಅಗತ್ಯವಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ಅರಸೀಕೆರೆ, ಕಡೂರಿನಲ್ಲಿ ಎಂಸಿಎಚ್ ಆಸ್ಪತ್ರೆಗೆ ಬೇಡಿಕೆ
ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಪ್ರತ್ಯೇಕ 100 ಹಾಸಿಗೆಗಳ ಮೆಟರನಲ್ ಅಂಡ್ ಚೈಲ್ಡ್ ಹೆಲ್ತ್ (ಎಂಸಿಎಚ್) ಆಸ್ಪತ್ರೆ ತೆರೆಯುವ ಅವಶ್ಯಕತೆ ಇದೆ ಎಂದು ಸಂಸದ ಶ್ರೇಯಸ್ ಅವರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಅರಸೀಕೆರೆ ತಾಲ್ಲೂಕು ಅಧಿಕ ಜನಸಂಖ್ಯೆ ಹೊಂದಿದ್ದು ಸರ್ಕಾರದ ಆರೋಗ್ಯ ಸೇವೆಗಳ ಮೇಲೆ ಅವಲಂಬಿತವಾಗಿದೆ. ನಗರದಲ್ಲಿ ಎಂಸಿಎಚ್ ಆಸ್ಪತ್ರೆ ಇಲ್ಲ. ಗರ್ಭಿಣಿಯರು ಹಾಗೂ ಬಾಣಂತಿಯರು ಅಗತ್ಯ ಚಿಕಿತ್ಸೆಗಾಗಿ ಹಾಸನ ಅಥವಾ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ ಎಂದು ತಿಳಿಸಿದರು.
ಕಡೂರು ತಾಲ್ಲೂಕಿನ ಸ್ಥಿತಿಯೂ ಇದೇ ರೀತಿಯಾಗಿದೆ. ತಾಲ್ಲೂಕು ದೊಡ್ಡದಾಗಿದ್ದು ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ಸಮರ್ಪಕ ತಾಯಿ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ ಇಲ್ಲ. ಮಹಿಳೆಯರು ಸುರಕ್ಷಿತ ಹೆರಿಗೆಯಾಗಿ ತುರ್ತು ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ಪಡೆಯಲು ದೂರದ ಊರಿಗೆ ಪ್ರಯಾಣಿಸಬೇಕಾಗಿದೆ. ಹೀಗಾಗಿ ಅರಸೀಕೆರೆ ಮತ್ತು ಕಡೂರಿನಲ್ಲಿ 100 ಹಾಸಿಗೆಗಳ ಎಂಸಿಎಚ್ ಆಸ್ಪತ್ರೆಗಳನ್ನು ಶೀಘ್ರ ಅನುಮೋದಿಸಬೇಕು ಎಂದು ಕೋರಿದರು.