Serial Temple Thieves Nabbed in Bengaluru: Gold and Silver Worth ₹14 Lakh Seized
x

ಪೊಲೀಸರು ವಶಪಡಿಸಿಕೊಂಡಿರುವ ದೇವರ ಬೆಳ್ಳಿ ಆಭರಣಗಳು

ಬೆಂಗಳೂರಿನ ಸರಣಿ ದೇಗುಲ ಕಳ್ಳರ ಬಂಧನ: 14 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ವಶ

ದೂರು ದಾಖಲಾದ ದಿನವೇ ಕಾರ್ಯಪ್ರವೃತ್ತರಾದ ಪೊಲೀಸರು, ಅಂದೇ ರಾತ್ರಿ ಗೊಟ್ಟಿಗೆರೆ ಬಳಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದರು.


Click the Play button to hear this message in audio format

ನಗರದ ವಿವಿಧೆಡೆ ದೇವಾಲಯಗಳ ಬೀಗ ಮುರಿದು, ದೇವರ ಆಭರಣ ಹಾಗೂ ಹುಂಡಿ ಹಣವನ್ನು ಕದಿಯುತ್ತಿದ್ದ ಇಬ್ಬರು ಖದೀಮರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 14 ಲಕ್ಷ ರೂಪಾಯಿ ಮೌಲ್ಯದ 5 ಕೆ.ಜಿ. ಬೆಳ್ಳಿ, 67 ಗ್ರಾಂ ಚಿನ್ನಾಭರಣ ಹಾಗೂ ಇತರ ಪೂಜಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳ ಬಂಧನದಿಂದಾಗಿ ಬರೋಬ್ಬರಿ 11 ಪೊಲೀಸ್ ಠಾಣೆಗಳ ವ್ಯಾಪ್ತಿಯ 13 ದೇಗುಲ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಸೆಪ್ಟೆಂಬರ್ 3ರಂದು ಬನಶಂಕರಿ ಠಾಣಾ ವ್ಯಾಪ್ತಿಯ ಸಿದ್ಧಿ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರು ದೂರು ನೀಡಿದ್ದರು. ಅರ್ಚಕನ ಸೋಗಿನಲ್ಲಿ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಿದ್ದ ವ್ಯಕ್ತಿಯೊಬ್ಬ, ದೇವರ ವಿಗ್ರಹಕ್ಕೆ ತೊಡಿಸಲಾಗಿದ್ದ ಬೆಳ್ಳಿಯ ಛತ್ರಿ ಹಾಗೂ ದೀಪಾಲ ಸ್ತಂಭಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಪೊಲೀಸರು, ತನಿಖೆ ಚುರುಕುಗೊಳಿಸಿದ್ದರು.

ಪೊಲೀಸರ ಕಾರ್ಯಾಚರಣೆ

ದೂರು ದಾಖಲಾದ ದಿನವೇ ಕಾರ್ಯಪ್ರವೃತ್ತರಾದ ಪೊಲೀಸರು, ಅಂದೇ ರಾತ್ರಿ ಗೊಟ್ಟಿಗೆರೆ ಬಳಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು, ವಿಚಾರಣೆ ವೇಳೆ, ಆರೋಪಿಗಳು ಸಿದ್ಧಿ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ವಿಲಾಸಿ ಜೀವನಕ್ಕಾಗಿ ಕಳ್ಳತನ

ಆರೋಪಿಗಳನ್ನು 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ, ಅವರು ತಮ್ಮ ವಿಲಾಸಿ ಜೀವನಕ್ಕಾಗಿ ಬೆಂಗಳೂರಿನಾದ್ಯಂತ ಹಲವು ದೇವಾಲಯಗಳಲ್ಲಿ ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಬನಶಂಕರಿ, ಜಯನಗರ, ಕುಮಾರಸ್ವಾಮಿ ಲೇಔಟ್, ಗಿರಿನಗರ, ರಾಜರಾಜೇಶ್ವರಿನಗರ, ಸುಬ್ರಹ್ಮಣ್ಯಪುರ, ತಲಘಟ್ಟಪುರ, ಕೆ.ಜಿ.ಹಳ್ಳಿ, ಸಂಪಿಗೆಹಳ್ಳಿ, ಕೆಂಗೇರಿ, ಯಲಹಂಕ ಸೇರಿದಂತೆ ಹಲವು ಕಡೆ ದೇವಾಲಯಗಳ ಬೀಗ ಮುರಿದು ದೇವರ ಚಿನ್ನ-ಬೆಳ್ಳಿ ಆಭರಣ ಹಾಗೂ ಹುಂಡಿ ಹಣವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಇಬ್ಬರ ಬಂಧನದಿಂದ ಬನಶಂಕರಿ (2 ಪ್ರಕರಣ), ಜಯನಗರ, ಸುಬ್ರಹ್ಮಣ್ಯಪುರ, ಕುಮಾರಸ್ವಾಮಿ ಲೇಔಟ್, ಗಿರಿನಗರ (2 ಪ್ರಕರಣ), ರಾಜರಾಜೇಶ್ವರಿನಗರ, ಕೆ.ಜಿ.ಹಳ್ಳಿ, ಕೆಂಗೇರಿ, ಸಂಪಿಗೆಹಳ್ಳಿ, ತಲಘಟ್ಟಪುರ ಮತ್ತು ಜಿಗಣಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 13 ಕಳ್ಳತನ ಪ್ರಕರಣಗಳು ಪತ್ತೆಯಾದಂತಾಗಿದೆ.

ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಅವರ ಮಾರ್ಗದರ್ಶನದಲ್ಲಿ, ಜಯನಗರ ಉಪವಿಭಾಗದ ಎಸಿಪಿ ವಿ. ನಾರಾಯಣಸ್ವಾಮಿ ಅವರ ಉಸ್ತುವಾರಿಯಲ್ಲಿ, ಬನಶಂಕರಿ ಠಾಣೆ ಇನ್ಸ್‌ಪೆಕ್ಟರ್ ಕೋಟ್ರೇಶಿ ಬಿ.ಎಂ. ನೇತೃತ್ವದ ತಂಡವು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story