ಪ್ರತ್ಯೇಕ ರಾಜ್ಯ ಬೇಡಿಕೆ | ಕಲಬುರಗಿಯಲ್ಲಿ ಕೆಂಪು ಬಾವುಟ ಹಾರಿಸಲು ಯತ್ನ; ಪ್ರತಿಭಟನಾಕಾರರ ಬಂಧನ
x

ಪ್ರತ್ಯೇಕ ರಾಜ್ಯ ಬೇಡಿಕೆ | ಕಲಬುರಗಿಯಲ್ಲಿ ಕೆಂಪು ಬಾವುಟ ಹಾರಿಸಲು ಯತ್ನ; ಪ್ರತಿಭಟನಾಕಾರರ ಬಂಧನ

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಧರಣಿ ನಡೆಸಿ, ಕೆಂಪು ಬಾಪುಟ ಹಾರಿಸಲು ಯತ್ನಿಸಿದ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ, ಲಕ್ಷ್ಮಿಕಾಂತ್‌ ಸಾದ್ವಿ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು.


ರಾಜ್ಯದಾದ್ಯಂತ ನವೆಂಬರ್‌ 1ರ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ಸ್ಥಾಪನೆಗೆ ಒತ್ತಾಯಿಸಿ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಪ್ರತಿಭಟನೆ ನಡೆಸಿದೆ.

ನಮ್ಮದು ಕಲ್ಯಾಣ ಕರ್ನಾಟಕ ರಾಜ್ಯ ಎಂಬ ಘೋಷಣೆಗಳೊಂದಿಗೆ ಸಮಿತಿಯ ಪದಾಧಿಕಾರಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು. ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಧರಣಿ ನಡೆಸಿ, ಕೆಂಪು ಬಾಪುಟ ಹಾರಿಸಲು ಯತ್ನಿಸಿದ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ, ಲಕ್ಷ್ಮಿಕಾಂತ್‌ ಸಾದ್ವಿ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು.

ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಕಳೆದ ವರ್ಷ ಕೂಡ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತ್ತು. ಅಲ್ಲದೇ ಪ್ರತ್ಯೇಕ ಧ್ವಜಾರೋಹಣ ನಡೆಸುವುದಕ್ಕೂ ಪ್ರಯತ್ನಿಸಿತ್ತು. ಪರಿಶಿಷ್ಟ ಜಾತಿಗಳ ಮೀಸಲು ನಿಯಮಾವಳಿಯಂತೆ ಕಲಂ 371 (ಜೆ) ಅಡಿ ನೇಮಕಾತಿ, ಮುಂಬಡ್ತಿಗೆ ಅವಕಾಶ ಮಾಡಿಕೊಟ್ಟಿದ್ದರೂ ರಾಜ್ಯ ಸರ್ಕಾರ ನಿರಾಸಕ್ತಿ ತೋರಿಸಿದೆ. ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗು ಮತ್ತೊಮ್ಮೆ ಮೊಳಗಲಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಈಚೆಗೆ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರಕ್ಕೆ ಎಚ್ಚರಿಸಿದ್ದರು.

Read More
Next Story