
ಹಿರಿಯ ಮುತ್ಸದ್ಧಿ, ಮಾಜಿ ಸಚಿವ ಕೆ.ಹೆಚ್. ಶ್ರೀನಿವಾಸ್ ನಿಧನ
ಶಿವಮೊಗ್ಗ ಹಾಗೂ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆಎಚ್‌ಶ್ರೀನಿವಾಸ್ ನಿಧನಹೊಂದಿದ್ದಾರೆ.
ಶಿವಮೊಗ್ಗ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆ ಎಚ್ ಶ್ರೀನಿವಾಸ್ ನಿಧನಹೊಂದಿದ್ದಾರೆ.
ಇವರಿಗೆ 85 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಬೆಂಗಳೂರನಲ್ಲಿಯೇ ನೆಲೆಸಿದ್ದರು. ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಅವರ ಪುತ್ರಿ ವೈಶಾಲಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. “ಅಪಾರ ದುಃಖದಿಂದ ನಾನು ನಿಮಗೆ ನನಗಾದ ದೊಡ್ಡ ನಷ್ಟದ ಬಗ್ಗೆ ತಿಳಿಸುತ್ತೇನೆ. ನನ್ನ ತಂದೆ ಕೆ.ಎಚ್. ಶ್ರೀನಿವಾಸ್ ಅವರು ಇನ್ನಿಲ್ಲ. ಅವರು ಇಂದು ಬೆಳಿಗ್ಗೆ 11 ಗಂಟೆಗೆ ನಮ್ಮ ನಿವಾಸದಲ್ಲಿ ನಿಧನರಾದರು” ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾನುಗೋಡು ಗ್ರಾಮದಲ್ಲಿ1939ರ ಫೆಬ್ರವರಿ 5ರಂದು ಜನಿಸಿದ ಕೆ.ಎಚ್. ಶ್ರೀನಿವಾಸ್ ಇಂಗ್ಲೀಷ್ ಎಂಎ ಜೊತೆಗೆ ಕಾನೂನು ಪದವಿ ಪಡೆದಿದ್ದರು. ಶ್ರೀನಿವಾಸ್ ಮೊದಲು ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಆನಂತರ ಕಾಂಗ್ರೆಸ್‌ನಲ್ಲೂ ಇದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಶ್ರೀನಿವಾಸ್, ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ವಕೀಲರಾಗಿ, ಕೃಷಿಕರೂ ಆಗಿದ್ದರು. ಕವಿಯಾಗಿ, ಲೇಖಕರಾಗಿ ಹಲವು ಮಹತ್ವದ ಕೃತಿಗಳನ್ನು ನೀಡಿದ್ದ ಅವರು, ಸಿನೆಮಾದಲ್ಲೂ ಅಭಿನಯಿಸಿದ್ದರು.
ಕೆಲವು ದಿನಗಳ ಕಾಲ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಹೈಕೋರ್ಟ್‌ನಲ್ಲಿ ಮತ್ತು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. ಹಲವಾರು ಸಾಮಾಜಿಕ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿ ನೇಮಕಗೊಂಡು ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು. ಸಾಗರ ತಾಲೂಕು ಮತ್ತು ಸುತ್ತಮುತ್ತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಲ್ಲಿ ಅಧ್ಯಕ್ಷರಾಗಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕುವೆಂಪು- ಶಾಂತವೇರಿ ಗೋಪಾಲಗೌಡರ ಪ್ರಭಾವಕ್ಕೆ ಒಳಗಾಗಿ, ಅನಂತಮೂರ್ತಿ-ಲಂಕೇಶರ ಒಡನಾಟ ಹೊಂದಿದ್ದ ಶ್ರೀನಿವಾಸ್ ಅವರು ಸಮಾಜವಾದಿ ಚಿಂತಕರೂ ಆಗಿದ್ದು, ಕವಿ ಹೃದಯದ, ಸೌಮ್ಯಸ್ವಭಾವದ ವ್ಯಕ್ತಿ ಎಂದೇ ಹೆಸರಾಗಿದ್ದರು.
ಡಿ ದೇವರಾಜ ಅರಸು ಅವರ ಸರ್ಕಾರದಲ್ಲಿ ಸಚಿವರಾಗಿ ಇಂಧನ, ವಾರ್ತಾ, ಯುವಜನ ಸೇವೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯೋಜನಾ ಖಾತೆಗಳನ್ನು ನಿರ್ವಹಿಸಿದ್ದ ಕೆ.ಎಚ್. ಶ್ರೀನಿವಾಸ್ ಅವರು ಮೂರು ಬಾರಿ ಶಾಸಕರಾಗಿ ಗೆದ್ದು, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡಿದ್ದರು.
ಸಿಎಂ ಸಿದ್ದರಾಮಯ್ಯ ಸಂತಾಪ
ಶ್ರೀನಿವಾಸ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, "ಮಾಜಿ ಸಚಿವರು, ಜನತಾ ಪರಿವಾರದ ಹಿರಿಯ ನಾಯಕರು ಆದ ಕೆ.ಎಚ್. ಶ್ರೀನಿವಾಸ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ರಾಜಕೀಯದ ಜೊತೆಗೆ ಕಲೆ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಬಹುಮುಖಿ ವ್ಯಕ್ತಿತ್ವದ ಶ್ರೀನಿವಾಸ್ ಅವರು ಹಳೆಯ ಮತ್ತು ಹೊಸ ತಲೆಮಾರಿನ ರಾಜಕಾರಣದ ಕೊಂಡಿಯಾಗಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಜಿ ಸಚಿವರು, ಜನತಾ ಪರಿವಾರದ ಹಿರಿಯ ನಾಯಕರು ಆದ ಕೆ.ಹೆಚ್.ಶ್ರೀನಿವಾಸ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ರಾಜಕೀಯದ ಜೊತೆಗೆ ಕಲೆ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಬಹುಮುಖಿ ವ್ಯಕ್ತಿ ಶ್ರೀನಿವಾಸ್ ಅವರು ಹಳೆಯ ಮತ್ತು ಹೊಸ ತಲೆಮಾರಿನ ರಾಜಕಾರಣದ ಕೊಂಡಿಯಾಗಿದ್ದರು.ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ… pic.twitter.com/ntXb1WHLwD
— CM of Karnataka (@CMofKarnataka) August 30, 2024
ಶ್ರೀನಿವಾಸ್ ಅವರು ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಿಂದ ದೂರವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ನೆಲೆಸಿದ್ದರು. ಮೂವರು ಪುತ್ರಿಯರೂ ಶ್ರೀನಿವಾಸ್ ಅವರಿಗೆ ಇದ್ದಾರೆ.