ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ ನಿಧನ
x

ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ ನಿಧನ


ಕನ್ನಡದ ಖ್ಯಾತ ಸಾಹಿತಿ, ನಾಡೋಜಾ ಡಾ. ಕಮಲಾ ಹಂಪನಾ (89) ಅವರು ಇಂದು(ಜೂನ್ 22) ಬೆಳಗಿನ ಜಾವ ರಾಜರಾಜೇಶ್ವರಿ ನಗರದ ತಮ್ಮ ಮಗಳ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ಖ್ಯಾತ ಸಾಹಿತಿ ಹಂಪ‌ ನಾಗರಾಜಯ್ಯ, ಮಗಳು ದೂರದರ್ಶನ ನಿರ್ದೇಶಕರಾದ ಎಚ್.ಎನ್.ಆರತಿ ಅವರು ಹಾಗೂ ಬಂದು ಮಿತ್ರರು, ಸೇರಿದಂತೆ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.

ಸಂಜೆಯ ತನಕ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.

ನಾಡೋಜ ಪ್ರೊ. ಕಮಲಾ ಹಂಪನಾ

ಬೆಂಗಳೂರಿನ ದೇವನಹಳ್ಳಿಯಲ್ಲಿ ಸಿ. ರಂಗಧಾಮನಾಯಕ್-ಲಕ್ಷಮ್ಮ ದಂಪತಿಗಳ ಪುತ್ರಿಯಾಗಿ ಕಮಲಾ ಹಂಪನಾ ಅವರು 28-10-1935ರಲ್ಲಿ ಜನಿಸಿದರು. ತುಮಕೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ 1956ರಲ್ಲಿ ಕನ್ನಡ ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಗಿ ಕಾರ್ಯ ನಿರ್ವಹಿಸಿದರು.

ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿ ಸೇವೆ ಸಲ್ಲಿಸಿದ್ದರು.

ತಮ್ಮ ಅಧ್ಯಯನ, ಅಧ್ಯಾಪನ, ಲೇಖನ,ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿರುವ ಪ್ರೊ.ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ. 2003 ರಲ್ಲಿ ಮೂಡುಬಿದಿರೆಯಲ್ಲಿ ಜರುಗಿದ 71 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಮಲಾ ಹಂಪನಾ ಅಧ್ಯಕ್ಷರಾಗಿದ್ದರು. ಕಮಲಾ ಹಂಪನಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ,ಬಾಬಾ ಆಮ್ಟೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ,ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ ಡಾಕ್ಟರೇಟ್,ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ಅನುಪಮಾ ನಿರಂಜನ ಪ್ರಶಸ್ತಿ,ಸಿದ್ದಾಂತಕೀರ್ತಿ ವಿದ್ವತ್ ಪ್ರಶಸ್ತಿ,ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.

ಬೇರು ಬೆಂಕಿ ಬಿಳಲು “ ಬೃಹದ್ಗ್ರಂಥ ಕಮಲಾ ಹಂಪನಾ ಅವರ ಜೀವನಯಾನದ ಹೃದಯಸ್ಪರ್ಶಿ ಸಂಕಥನ. ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ, ಸಂಶೋಧನಾ ಕೃತಿಗಳಾದ ತುರಂಗ ಭಾರತ – ಒಂದು ಅಧ್ಯಯನ, ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ಅನೇಕಾಂತವಾದ, ನಾಡು ನುಡಿ ನಾವು, ಜೈನ ಸಾಹಿತ್ಯ ಪರಿಸರ, ಬದ್ದವಣ,ರೋಣದ ಬಸದಿ ಸೇರಿ ಶಿಶು ಸಾಹಿತ್ಯ, ಅನುವಾದಗಳು, ಕಾದಂಬರಿಗಳು ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ.

Read More
Next Story