ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಇನ್ನಿಲ್ಲ
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಅವರು ಮಂಗಳವಾರ ತಡರಾತ್ರಿ ಧಾರವಾಡದ ನಿರ್ಮಲಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಗರದ ಸಪ್ತಾಪೂರದ ದುರ್ಗಾ ಕಾಲೊನಿಯ ಅವರ ಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೃತರು ದೇಹ ದಾನ ಮಾಡಿದ್ದು, ಹೀಗಾಗಿ ಅವರ ಪಾರ್ಥಿವ ಶರೀರವನ್ನು ಬೈಲಹೊಂಗಲನ ಡಾ. ಮಹಾಂತೇಶ ರಾಮಣ್ಣವರ ಆಸ್ಪತ್ರೆಗೆ ನೀಡಲು ತಯಾರಿ ಮಾಡಲಾಗಿದೆ.
ನಾಡಿನ ಹೆಸರಾಂತ ಸಾಹಿತಿಯಾಗಿದ್ದ ಗುರುಲಿಂಗ ಕಾಪಸೆ ಅವರ ಮೂಲ ಊರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮ. ಸದ್ಯ ಧಾರವಾಡದ ಸಪ್ತಾಪುರ ದುರ್ಗಾ ಕಾಲೋನಿಯಲ್ಲಿ ನೆಲೆಸಿದ್ದರು. ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾಗಿದ್ದರು.
1928ರ ಎಪ್ರಿಲ್ 2ರಂದು ಜನಿಸಿದ ಗುರುಲಿಂಗ ಕಾಪಸೆ ಅವರು ತಮ್ಮ 96ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಂದು ಮಧ್ಯಾಹ್ನ 2ರವರೆಗೆ ದುರ್ಗಾ ಕಾಲೋನಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗುರುಲಿಂಗ ಕಾಪಸೆ ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಪಾರ ಅಭಿಮಾನಿ ಬಳಗವನ್ನಗಲಿದ್ದಾರೆ.
ಸಾಹಿತ್ಯ ಸೇವೆ:
ಮಕ್ಕಳ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದರು. ಮಧುರ ಚೆನ್ನರ ಜೀವನ ಹಾಗೂ ಕೃತಿಗಳ ಕುರಿತ ಮಹಾಪ್ರಬಂಧ ರಚಿಸಿದ್ದರು. ಮಧುರ ಚೆನ್ನ, 'ಹಲಸಂಗಿ ಗೆಳೆಯರು', 'ಅಕ್ಕಮಹಾದೇವಿ', 'ಅರವಿಂದರು', 'ಬಸವೇಶ್ವರ, ಶಾಲ್ಮಲೆಯಿಂದ ಗೋದಾವರಿಯವರೆಗೆ (ಪ್ರವಾಸ ಕಥನ) ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.. ಮರಾಠಿಯಿಂದ ಅನೇಕ ಕೃತಿಗಳನ್ನು ಕನ್ನಡ ಅನುವಾದ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಮಕ್ಕಳ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕಾಪಸೆಯವರು ದ.ರಾ.ಬೇಂದ್ರೆ, ಮಧುರ ಚೆನ್ನ ಸೇರಿ ಹಲವು ಸಾಹಿತಿಗಳ ಒಡನಾಡಿಯಾಗಿದ್ದರು.
'ವರದರಾಜ ಆದ್ಯ ಪ್ರಶಸ್ತಿ', 'ಆನಂದಕಂದ ಪ್ರಶಸ್ತಿ', 'ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ' ಮೊದಲಾದ ಪುರಸ್ಕಾರಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಕಾಪಸೆಯವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1945ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿಯೇ ತಮ್ಮೂರಿನಲ್ಲಿ ಶಿಕ್ಷಕರಾಗಿ ಸೇವೆ ಆರಂಭ ಮಾಡಿದ ಕಾಪಸೆ ಕಾಲಾಂತರದಲ್ಲಿ ಧಾರವಾಡಕ್ಕೆ ಬಂದು ನೆಲೆಸಿದ್ದರು.