ಹಿರಿಯ ಪತ್ರಕರ್ತ ಎಂ ಕೆ ಭಾಸ್ಕರ್ ರಾವ್ ನಿಧನ
ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಸೇರಿದಂತೆ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದ ಭಾಸ್ಕರ್ ರಾವ್, ಸಿನಿಮಾ, ರಾಜಕೀಯ ವರದಿಗಾರಿಕೆಯಲ್ಲಿ ಪರಿಣತಿ ಹೊಂದಿದ್ದರು.
ಕನ್ನಡದ ಹಿರಿಯ ಪತ್ರಕರ್ತ ಎಂ ಕೆ ಭಾಸ್ಕರ್ ರಾವ್ ಅವರು ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.
75 ವರ್ಷದ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದು, ಪತ್ನಿ, ಪುತ್ರ, ಪುತ್ರಿಯನ್ನು ಅವರು ಅಗಲಿದ್ದಾರೆ.
ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಸೇರಿದಂತೆ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಅವರು ಸುದೀರ್ಘ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರ ಅಂಕಣಕಾರರಾಗಿ, ಟಿವಿ ಡಿಬೇಟುಗಳಲ್ಲಿ ವಿಶ್ಲೇಷಕರಾಗಿ ಅವರು ಗುರುತಿಸಿಕೊಂಡಿದ್ದರು.
ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವರಾದ ಭಾಸ್ಕರ್ ರಾವ್, 1968 ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಕರ್ತರಾಗಿ ವೃತ್ತಿಜೀವನ ಆರಂಭಿಸಿದ್ದರು. ದಶಕಗಳ ಕಾಲ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಖಾದ್ರಿ ಶಾಮಣ್ಣ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿ- ಪುರಸ್ಕಾರಗಳಿಗೂ ಅವರು ಭಾಜನರಾಗಿದ್ದರು. ರಂಗಕರ್ಮಿಯೂ ಆಗಿದ್ದ ಅವರು, ನಟ ಉಪೇಂದ್ರ ಅಭಿನಯದ ʼಬಾಲಿವುಡ್ʼ ಸೇರಿದಂತೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದರು.
ಬುಧವಾರ ಸಂಜೆ ಬೆಂಗಳೂರಿನ ಚಾಮರಾಜಪೇಟೆ ರುಧ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.