ಬೆಂಗಳೂರಿನಲ್ಲಿ ಅತಿ ದೊಡ್ಡ ಸೈಬರ್ ವಂಚನೆ: ಟೆಕ್ಕಿಯಿಂದ ಬರೋಬ್ಬರಿ 31.83 ಕೋಟಿ ರೂ. ದೋಚಿದ ಖದೀಮರು
x

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಅತಿ ದೊಡ್ಡ ಸೈಬರ್ ವಂಚನೆ: ಟೆಕ್ಕಿಯಿಂದ ಬರೋಬ್ಬರಿ 31.83 ಕೋಟಿ ರೂ. ದೋಚಿದ ಖದೀಮರು

ವಂಚಕರ ಸೂಚನೆಯಂತೆ, ಸಂತ್ರಸ್ತೆ ತನ್ನ ಸ್ಥಿರ ಠೇವಣಿ, ಇತರ ಉಳಿತಾಯ ಸೇರಿದಂತೆ 187 ವಹಿವಾಟುಗಳ ಮೂಲಕ ಒಟ್ಟು 31.83 ಕೋಟಿ ರೂಗಳನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ 'ಡಿಜಿಟಲ್ ಅರೆಸ್ಟ್', 'ಪಾರ್ಸೆಲ್ ವಂಚನೆ' ಪ್ರಕರಣಗಳಲ್ಲಿ ಇದುವರೆಗಿನ ಅತಿ ದೊಡ್ಡ ವಂಚನೆ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಇಂದಿರಾನಗರದ ನಿವಾಸಿ ಮತ್ತು 57 ವರ್ಷದ ಐಟಿ ಮಹಿಳಾ ಉದ್ಯೋಗಿಯೊಬ್ಬರು ಸೈಬರ್ ಪ್ರಕರಣದಲ್ಲಿ ಬರೋಬ್ಬರಿ 31.83 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

ಈ ಬೃಹತ್ ವಂಚನೆಯು ಆರು ತಿಂಗಳಿಗೂ ಹೆಚ್ಚು ಕಾಲ ನಡೆದಿದ್ದು, ಸಂತ್ರಸ್ತೆಯನ್ನು ನಿರಂತರವಾಗಿ ಕಣ್ಗಾವಲಿನಲ್ಲಿ ಇರಿಸಲಾಗಿತ್ತು ಎಂದು ಹಿರಿಯ ಸೈಬರ್ ಅಪರಾಧ ವಿಭಾಗದ ತನಿಖಾಧಿಕಾರಿಯೊಬ್ಬರು ಧೃಢಪಡಿಸಿದ್ದಾರೆ.

ಪ್ರಕರಣ ಏನು?

ಕಳೆದ ವರ್ಷ ಸೆ. 15ರಂದು ಸಂತ್ರಸ್ತೆಗೆ ಮೊದಲ ಬಾರಿಗೆ ಕೊರಿಯರ್ ಸೇವೆ ಡಿಹೆಚ್‌ಎಲ್‌ ನಿಂದ ಕರೆ ಬಂದಿತ್ತು. ಮುಂಬೈನ ಅಂಧೇರಿಯಲ್ಲಿರುವ ಡಿಹೆಚ್‌ಎಲ್‌ ಕೇಂದ್ರಕ್ಕೆ ನಿಮ್ಮ ಹೆಸರಿನಲ್ಲಿ ಬಂದಿರುವ ಪ್ಯಾಕೇಜ್‌ನಲ್ಲಿ ಮೂರು ಕ್ರೆಡಿಟ್ ಕಾರ್ಡ್‌ಗಳು, ನಾಲ್ಕು ಪಾಸ್‌ಪೋರ್ಟ್‌ಗಳು ಮತ್ತು ನಿಷೇಧಿತ MDMA ಡ್ರಗ್ಸ್ ಇದೆ ಎಂದು ಆಕೆಗೆ ತಿಳಿಸಲಾಗಿತ್ತು. ಆದರೆ ಆಕೆ ತಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಕೊರಿಯರ್ ಜೊತೆ ಯಾವುದೇ ಸಂಪರ್ಕವಿಲ್ಲ ಎಂದು ಹೇಳಿದ್ದಾಳೆ. ಆಗ, ಫೋನ್ ಸಂಖ್ಯೆ ಪ್ಯಾಕೇಜ್‌ಗೆ ಲಿಂಕ್ ಆಗಿರುವುದರಿಂದ ಇದು ಸೈಬರ್ ಅಪರಾಧವಾಗಿರಬಹುದು ಎಂದು ಕರೆ ಮಾಡಿದ್ದ ವ್ಯಕ್ತಿ ಹೇಳಿದ್ದಾನೆ. ಈ ವಿಷಯದ ಬಗ್ಗೆ ಸೈಬರ್ ಅಪರಾಧ ಸೆಲ್​ಗೆ ದೂರು ನೀಡುವಂತೆ ಆಕೆಯನ್ನು ಕೇಳಿಕೊಂಡಿದ್ದಾನೆ. ಆಕೆ ಪ್ರತಿಕ್ರಿಯಿಸುವ ಮೊದಲು, ಕರೆಯನ್ನು ಸಿಬಿಐ ಅಧಿಕಾರಿಯ ಸೋಗಿನಲ್ಲಿರುವ ವ್ಯಕ್ತಿಗೆ ವರ್ಗಾಯಿಸಲಾಗಿತ್ತು ಎಂದು ಆಕೆ ಸೈಬರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ವಂಚಕರು ಸ್ಥಳೀಯ ಪೊಲೀಸರನ್ನು ಅಥವಾ ಕಾನೂನು ಸಹಾಯ ಪಡೆಯದಂತೆ ಮಹಿಳೆಯನ್ನು ಹೆದರಿಸಿದ್ದರು. ಮಗನ ಮದುವೆ ಸಮೀಪಿಸುತ್ತಿದ್ದರಿಂದ ಮತ್ತು ಮುಂದಾಗುವ ಪರಿಣಾಮಗಳಿಗೆ ಹೆದರಿ ಸಂತ್ರಸ್ತೆ ಅವರ ಸೂಚನೆಗಳನ್ನು ಪಾಲಿಸುತ್ತಿದ್ದರು. ಬಳಿಕ ಆಕೆಯ ಕ್ಯಾಮೆರಾ ಆನ್ ಆಗಿರುವ ಸ್ಕೈಪ್ ಕರೆಯ ಮೂಲಕ ಆಕೆಯನ್ನು ಗೃಹಬಂಧನದಲ್ಲಿ ಇಟ್ಟು, ಸಿಬಿಐ ಅಧಿಕಾರಿ ಎಂದು ಹೇಳಿಕೊಂಡ ಪ್ರದೀಪ್ ಸಿಂಗ್ ಎಂಬಾತ, ರಾಹುಲ್ ಯಾದವ್ ಎಂಬ ಇನ್ನೊಬ್ಬನನ್ನು ನಿಯೋಜಿಸಿ ಒಂದು ವಾರದವರೆಗೆ ಆಕೆಯನ್ನು ಮೇಲ್ವಿಚಾರಣೆ ಮಾಡಿದ್ದ. ಈ ಸಮಯದಲ್ಲಿ ಸಂತ್ರಸ್ತೆ ವರ್ಕ್ ಫ್ರಂ ಹೋಮ್​ನಲ್ಲಿದ್ದರು.

ಕಳೆದ ವರ್ಷ ಸೆಪ್ಟೆಂಬರ್ 23ರಂದು, ಪ್ರದೀಪ್ ಸಿಂಗ್ ಸ್ಕೈಪ್ ಮೂಲಕ ಮಹಿಳೆಯನ್ನು ಪ್ರಶ್ನಿಸಿ, ಆಕೆಯ ಎಲ್ಲಾ ಆಸ್ತಿಗಳನ್ನು ಆರ್‌ಬಿಐನ ಹಣಕಾಸು ಗುಪ್ತಚರ ಘಟಕಕ್ಕೆ ವರ್ಗಾಯಿಸುವಂತೆ ಹೇಳಿದ್ದಾನೆ. ವಂಚಕರ ಸೂಚನೆಯಂತೆ, ಸಂತ್ರಸ್ತೆ ತನ್ನ ಸ್ಥಿರ ಠೇವಣಿ, ಇತರ ಉಳಿತಾಯ ಸೇರಿದಂತೆ 187 ವಹಿವಾಟುಗಳ ಮೂಲಕ ಒಟ್ಟು 31.83 ಕೋಟಿ ರೂ.ಗಳನ್ನು ಆರೋಪಿ ನೀಡಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರಿಶೀಲನೆ ಪೂರ್ಣಗೊಂಡ ನಂತರ ಫೆಬ್ರವರಿ 2025 ರೊಳಗೆ ಹಣವನ್ನು ಹಿಂತಿರುಗಿಸಲಾಗುವುದು ಎಂದು ಆಕೆಗೆ ಭರವಸೆ ನೀಡಲಾಗಿತ್ತು. ಡಿಸೆಂಬರ್‌ನಲ್ಲಿ ಮಗನ ನಿಶ್ಚಿತಾರ್ಥದ ಮೊದಲು ಅವರಿಗೆ ನಕಲಿ ಕ್ಲಿಯರೆನ್ಸ್ ಪ್ರಮಾಣಪತ್ರವನ್ನೂ ನೀಡಲಾಗಿತ್ತು. ಮಾರ್ಚ್ 26 ರಂದು, ಪ್ರಕರಣವನ್ನು ತೆರವುಗೊಳಿಸುವಲ್ಲಿ ವಿಳಂಬದ ನೆಪ ಹೇಳಿ ಅಪರಾಧಿಗಳು ಹಠಾತ್ತನೆ ಎಲ್ಲಾ ಸಂವಹನವನ್ನು ಕೊನೆಗೊಳಿಸಿದರು. ಇದರಿಂದ ಸಂತ್ರಸ್ತೆ ಆಘಾತಕ್ಕೊಳಗಾಗಿದ್ದು, ಮಗನ ಮದುವೆ ಮತ್ತು ಅನಾರೋಗ್ಯದ ಕಾರಣದಿಂದ ವಿಳಂಬವಾಗಿ ದೂರು ನೀಡಿದ್ದಾರೆ.

ಈ ಬಗ್ಗೆ ಪೂರ್ವ ಸೈಬರ್ ಕ್ರೈಮ್ ಪೊಲೀಸರು ನವೆಂಬರ್ 14 ರಂದು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದು ರಾಜ್ಯದಲ್ಲಿ ಅತಿ ದೊಡ್ಡ ಸೈಬರ್ ವಂಚನೆಯಾಗಿರುವುದರಿಂದ ಮತ್ತು ವಂಚನೆಯ ಮೊತ್ತ 3 ಕೋಟಿ ರೂ.ಗಳನ್ನು ಮೀರಿದ ಕಾರಣ, ಪ್ರಕರಣವನ್ನು ಉನ್ನತ ತನಿಖಾ ಸಂಸ್ಥೆ ಸಿಐಡಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

Read More
Next Story