
Yatnal Expulsion | ಬೆಂಗಳೂರಿನಲ್ಲಿ ಆರಂಭವಾಗಿದೆ ಬಿಜೆಪಿ ಭಿನ್ನಮತೀಯರ ಗೌಪ್ಯ ಸಭೆ
ಉಚ್ಚಾಟನೆ ಆದೇಶ ಹಿಂಪಡೆಯಲು ಏ.10ರವರೆಗೆ ಹೈಕಮಾಂಡ್‌ಗೆ ಗಡುವು ನೀಡಿರುವ ಹಿನ್ನೆಲೆಯಲ್ಲಿ ಭಿನ್ನಮತೀಯರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಭಾರತೀಯ ಜನತಾ ಪಕ್ಷದಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟಿಸಿರುವುದನ್ನು ವಿರೋಧಿಸಿ ಬಿಜೆಪಿ ಭಿನ್ನಮತಿಯರು ಬೆಂಗಳೂರಿನಲ್ಲಿ ಶುಕ್ರವಾರ(ಮಾ.28) ರಹಸ್ಯ ಸಭೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಯುಬಿ ಸಿಟಿಯಲ್ಲಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ನಿವಾಸದಲ್ಲಿ ಭಿನ್ನಮತೀಯ ನಾಯಕರ ಗೌಪ್ಯ ಸಭೆ ನಡೆಯುತ್ತಿದೆ.
ಯತ್ನಾಳ್ ಉಚ್ಚಾಟನೆ ಬಳಿಕ ಭಿನ್ನರ ಮೊದಲ ಸಭೆ ಇದಾಗಿದ್ದು, ಸಭೆಯಲ್ಲಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ ಯತ್ನಾಳ್, ಬಿಜೆಪಿ ನಾಯಕರಾದ ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ್, ಪ್ರತಾಪ್ ಸಿಂಹ, ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ.
ಇದಕ್ಕೂ ಮುನ್ನ ಕುಮಾರ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಕೊನೆ ಕ್ಷಣದಲ್ಲಿ ಮಾಧ್ಯಮದವರ ಕಣ್ಣು ತಪ್ಪಿಸಿ ಜಿ.ಎಂ. ಸಿದ್ದೇಶ್ವರ್ ನಿವಾಸಕ್ಕೆ ಸ್ಥಳಾಂತರವಾಗಿದೆ. ಇನ್ನು ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಮಾಧ್ಯಮದವರ ಕಣ್ಣು ತಪ್ಪಿಸಿ ಸಭೆಗೆ ಹಾಜರಾದರು.
ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಆದೇಶ ಹಿಂಪಡೆಯುವಂತೆ ಭಿನ್ನಮತೀಯ ನಾಯಕರು ಹೈಕಮಾಂಡ್‌ಗೆ ಪತ್ರ ಬರೆದು ಒತ್ತಡ ಹೇರುವ ಕುರಿತು ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಯತ್ನಾಳ್ ಪರವಾಗಿ ಹಲವು ನಾಯಕರು ದನಿಯೆತ್ತಿದ್ದು, ಪಂಚಮಸಾಲಿ ಸಮುದಾಯ ಕೂಡ ಯತ್ನಾಳ್ ಉಚ್ಚಾಟನೆ ವಿರೋಧಿಸಿ ಬೃಹತ್ ಪ್ರತಿಭಟನೆಗೆ ಸಿದ್ಧವಾಗಿದೆ. ಉಚ್ಚಾಟನೆ ಆದೇಶ ಹಿಂಪಡೆಯಲು ಏ.10ರವರೆಗೆ ಹೈಕಮಾಂಡ್‌ಗೆ ಗಡುವು ನೀಡಿರುವ ಹಿನ್ನೆಲೆಯಲ್ಲಿ ಭಿನ್ನಮತೀಯರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.