Second PUC Exam-2 results declared: 31.27 percent pass
x
ಫಲಿತಾಂಶ ವೀಕ್ಷಿಸುತ್ತಿರುವ ವಿದ್ಯಾರ್ಥಿನಿಯರು.

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: ಶೇ 31.27 ಮಂದಿ ತೇರ್ಗಡೆ

ಪರೀಕ್ಷೆ-2ರಲ್ಲಿ ಅನುತ್ತೀರ್ಣರಾದವರಿಗೆ ಜೂನ್‌ 9ರಿಂದ 20 ರವರೆಗೆ ಪರೀಕ್ಷೆ ನಡೆಯಲಿದೆ. ಯಾವುದೇ ಶುಲ್ಕವಿಲ್ಲದೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು ಎಂದು ಶಾಲಾ ಶಿಕ್ಷಣ ಮಂಡಳಿ ತಿಳಿಸಿದೆ.


ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಈ ಬಾರಿಯ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 1.94 ಲಕ್ಷ ವಿದ್ಯಾರ್ಥಿಗಳ ಪೈಕಿ 60,692 ಮಂದಿ (ಶೇಕಡಾ 31.72) ಉತ್ತೀರ್ಣರಾಗಿದ್ದಾರೆ.

ಪರೀಕ್ಷೆ-1ರಲ್ಲಿ ಉತ್ತೀರ್ಣರಾಗಿದ್ದರೂ ಹೆಚ್ಚಿನ ಅಂಕಗಳನ್ನು ಗಳಿಸುವ ನಿರೀಕ್ಷೆಯಲ್ಲಿ ಪರೀಕ್ಷೆ- 2 ಬರೆದಿದ್ದ 41,719 ವಿದ್ಯಾರ್ಥಿಗಳು ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಫಲಿತಾಂಶದೊಂದಿಗೆ, ಎರಡೂ ಪರೀಕ್ಷೆಗಳ ಒಟ್ಟು ಉತ್ತೀರ್ಣ ಪ್ರಮಾಣ ಶೇಕಡ 77.96ಕ್ಕೆ ಏರಿಕೆಯಾದಂತಾಗಿದೆ.

ಪರೀಕ್ಷೆ-2ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮಂಡಳಿಯು ಮತ್ತೊಂದು ಅವಕಾಶ ಕಲ್ಪಿಸಿದೆ. ಯಾವುದೇ ಶುಲ್ಕವಿಲ್ಲದೆ ಪರೀಕ್ಷೆ-3 ಅನ್ನು ಬರೆಯಲು ಅವಕಾಶ ನೀಡಲಾಗಿದ್ದು, ಈ ಪರೀಕ್ಷೆಗಳು ಜೂನ್‌ 9 ರಿಂದ 20 ರವರೆಗೆ ನಡೆಯಲಿವೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಅಭಿನಂದನೆ ಹಾಗೂ ಭರವಸೆ

ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದ್ವಿತೀಯ ಪಿಯುಸಿ ಪರೀಕ್ಷೆ-2ರಲ್ಲಿ ಉತ್ತೀರ್ಣರಾದ ಎಲ್ಲ 60,692 ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ, ಫಲಿತಾಂಶ ಸುಧಾರಣೆ ಬಯಸಿ ಮರು ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಿದ 41,719 ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ಅವರ ಮುಂದಿನ ಶೈಕ್ಷಣಿಕ ಬದುಕು ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ.

ಹಿಂದಿನ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಮುಖ್ಯಮಂತ್ರಿಗಳು, ಆತಂಕ ಅಥವಾ ಹತಾಶೆಗೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಯಾವುದೇ ಶುಲ್ಕವಿಲ್ಲದೆ ಪರೀಕ್ಷೆ-3 ಬರೆದು ಉತ್ತೀರ್ಣರಾಗುವ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

Read More
Next Story