ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ | ಚರ್ಚೆ ಬಳಿಕ ತೀರ್ಮಾನ: ಎಂಬಿ ಪಾಟೀಲ್
x

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ | ಚರ್ಚೆ ಬಳಿಕ ತೀರ್ಮಾನ: ಎಂಬಿ ಪಾಟೀಲ್


ʻʻಬೆಂಗಳೂರು ಸಮೀಪದಲ್ಲಿ ಮತ್ತೊಂದು ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ. ಅದನ್ನು ಎಲ್ಲಿ ನಿರ್ಮಿಸಬೇಕು ಎನ್ನುವ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಮತ್ತು ಮುಖ್ಯಮಂತ್ರಿಗಳ ಜತೆ ವಿಚಾರ ವಿನಿಮಯ ನಡೆಸಿ ತೀರ್ಮಾನಿಸಲಾಗುವುದುʼʼ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಎರಡನೇ ಏರ್ಪೋರ್ಟ್ ಅಭಿವೃದ್ಧಿ ಕುರಿತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ ಒಂದು ಸಭೆ ನಡೆದಿದೆ. ಸದ್ಯಕ್ಕೆ ಬಿಐಎಎಲ್ ಜತೆ ಚಾಲ್ತಿಯಲ್ಲಿರುವ ಒಪ್ಪಂದದಲ್ಲಿ 2033ರವರೆಗೂ 150 ಕಿ.ಮೀ. ಅಂತರದಲ್ಲಿ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸಬಾರದು ಎಂಬ ಷರತ್ತಿದೆ. ನಾವು ಈಗಿನಿಂದಲೇ ಕಾರ್ಯ ಪ್ರವೃತ್ತರಾದರೆ ಇನ್ನು ಎಂಟು ವರ್ಷಗಳಲ್ಲಿ ಪ್ರಗತಿ ಸಾಧಿಸಬಹುದು‌ʼʼ ಎಂದು ತಿಳಿಸಿದರು.

ಈಗಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲೇ ನೂತನ ವಿಮಾನ ನಿಲ್ದಾಣ ಬರಬೇಕು ಎಂದಾದರೆ ದಾಬಸಪೇಟೆ, ತುಮಕೂರು ಇತ್ಯಾದಿಗಳು ಬರುತ್ತವೆ. ಇವೆಲ್ಲವನ್ನೂ ಪರಿಗಣಿಸಿ ಸ್ಥಳ ನಿಗದಿ, ಭೂ ಸ್ವಾಧೀನ, ಪರಿಹಾರ ಹಂಚಿಕೆ ಇತ್ಯಾದಿಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಮುಂಬಯಿ ನಗರದಲ್ಲಿ ಎರಡು ವಿಮಾನ ನಿಲ್ದಾಣಗಳ ನಡುವೆ ಕೇವಲ 36 ಕಿ.ಮೀ. ಅಂತರವಿದೆ. ನ್ಯೂಯಾರ್ಕ್ ಮತ್ತು ಲಂಡನ್ ನಗರಗಳಲ್ಲಿ ಕೂಡ ಹೆಚ್ಚು ದೂರವಿಲ್ಲ. ಜೊತೆಗೆ ಬಿಐಎಎಲ್ ಹೊಂದಿರುವ ಷರತ್ತು ತಮಿಳುನಾಡಿಗೂ ಅನ್ವಯಿಸುತ್ತದೋ ಇಲ್ಲವೋ ಪರಿಶೀಲಿಸಬೇಕು ಎಂದರು.

ನಾವು ಎರಡನೇ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ ಮೇಲೆ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಏರ್ಪೋರ್ಟ್‌ ನಿರ್ಮಿಸುವುದಾಗಿ ಹೇಳುತ್ತಿದೆ. ಇದರ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

Read More
Next Story