
ಶಕ್ತಿಯೂ ಇಲ್ಲ, ಭಾಗ್ಯಲಕ್ಷ್ಮಿಯೂ ಇಲ್ಲ| ಲಂಚದ ಕಾಟ: ಮುಗ್ಧ ಬುಡಕಟ್ಟು ಬಾಲಕಿಗೆ ಸಿಗಲೇ ಇಲ್ಲ ಆಧಾರ್ ಕಾರ್ಡ್
ಆಧಾರ್ ನೋಂದಣಿಗಾಗಿ ಆಧಾರ್ ಸೇವಾ ಕೇಂದ್ರಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಬಾಲಕಿ ಚೈತ್ರಗೆ ಆಧಾರ್ ಕಾರ್ಡ್ ಭಾಗ್ಯ ಸಿಕ್ಕಿಲ್ಲ, ಇದರಿಂದ ಸರ್ಕಾರಿ ಸೌಲಭ್ಯವೂ ಸಿಗದೇ ಅತಂತ್ರ ಸ್ಥಿತಿಯಲ್ಲಿದ್ದಾಳೆ.
ಸೋಲಿಗ ಸಮುದಾಯದ ಆ ಹೆಣ್ಣು ಮಗಳು ಬುದ್ದಿವಂತೆ. ಬಡತನದ ಮಧ್ಯೆಯೂ ಏಳನೇ ತರಗತಿ ಓದುತ್ತಿರುವ ಬಾಲಕಿ, ನಿತ್ಯ ಶಾಲೆಗೆ ಹೋಗಲು ಹಣ ಪಾವತಿಸಿ ಬಸ್ಸಿನಲ್ಲಿ ಪ್ರಯಾಣಿಸಬೇಕಾಗಿದೆ. ರಾಜ್ಯ ಸರ್ಕಾರ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ್ದರೂ ಆಧಾರ್ ಕಾರ್ಡ್ ಇಲ್ಲದಿರುವ ಕಾರಣ ಈಕೆ ಎಲ್ಲಾ ಸೌಲಭ್ಯದಿಂದ ವಂಚಿತಳಾಗಿದ್ದಾಳೆ. ಆಧಾರ್ ನೋಂದಣಿಗಾಗಿ ಆಧಾರ್ ಸೇವಾ ಕೇಂದ್ರಕ್ಕೆ ಹೋದರೂ ಅಲ್ಲಿನ ಸಿಬ್ಬಂದಿ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಇತ್ತ ಆಧಾರ್ ಕಾರ್ಡೂ ಇಲ್ಲ, ಅತ್ತ ಸರ್ಕಾರಿ ಸೌಲಭ್ಯವೂ ಸಿಗದಂತಹ ಅತಂತ್ರ ಸ್ಥಿತಿಯಲ್ಲಿ ಬಾಲಕಿ ಇದ್ದಾಳೆ.
ಹೌದು, ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕೌಳೆಹಳ್ಳ ಗ್ರಾಮದ ಸೋಲಿಗ ಸಮುದಾಯದ 12 ವರ್ಷದ ವಿದ್ಯಾರ್ಥಿನಿ ಚೈತ್ರಗೆ ಆಧಾರ್ ಕಾರ್ಡ್ ಪಡೆಯುವುದೇ ದೊಡ್ಡ ಸವಾಲಾಗಿದೆ. ಹಾಗಾಗಿ ಇಲ್ಲಿಯವರೆಗೂ ಬಾಲಕಿ ಎಲ್ಲಾ ಸರ್ಕಾರಿ ಯೋಜನೆಗಳಿಂದ ದೂರವೇ ಉಳಿದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಜತೆಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೂ ಆಧಾರ್ ಬೇಕೇ ಬೇಕು. ಆದರೆ, ಬಾಲಕಿ ಚೈತ್ರ ಬಳಿ 15 ಸಾವಿರ ರೂ. ಹಣವಿಲ್ಲದ ಕಾರಣ ಆಧಾರ್ ಕಾರ್ಡ್ ಹೊಂದುವುದು ಸಾಧ್ಯವಾಗಿಲ್ಲ.
ತಂದೆ ತೀರಿಕೊಂಡು ಒಂಭತ್ತು ತಿಂಗಳಾಗಿದೆ. ತಾಯಿ ಮಾದೇವಿ ಕೂಲಿ ಮಾಡಿ ಸಂಸಾರದ ಬಂಡಿ ಎಳೆಯುತ್ತಿದ್ದಾರೆ. ಇರುವುದಕ್ಕೆ ಪುಟ್ಟ ಮನೆ ಬಿಟ್ಟರೆ ಸ್ವಂತದ್ದು ಎಂದು ಹೇಳಿಕೊಳ್ಳಲು ತುಂಡು ಭೂಮಿಯೂ ಇಲ್ಲ. ಕೂಲಿ ಮಾಡಿಕೊಂಡು ಇಬ್ಬರು ಮಕ್ಕಳನ್ನು ಸಾಕಬೇಕಾದ ಪರಿಸ್ಥಿತಿ ಇವರದ್ದು. ದಿನಕ್ಕೆ ಇನ್ನೂರು ರೂಪಾಯಿ ದುಡಿದು ತಂದರೆ ಮಗಳನ್ನು ಶಾಲೆಗೆ ಕಳಿಸಲು ನಿತ್ಯವೂ 30 ರೂ.ಖರ್ಚು ಮಾಡಬೇಕಾದ ಅನಿವಾರ್ಯ ಇದೆ.
ಶಕ್ತಿ ಇಲ್ಲ, ಭಾಗ್ಯ ಲಕ್ಷ್ಮಿಯೂ ಇಲ್ಲ
ಸರ್ಕಾರಗಳು ಹೆಣ್ಣು ಮಕ್ಕಳ ಶಿಕ್ಷಣ, ಲಿಂಗ ತಾರತಮ್ಯ ಹೋಗಲಾಡಿಸುವ ದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಚೈತ್ರಗೆ ಅವುಗಳ ಲಾಭ ಸಿಗುತ್ತಿಲ್ಲ ಎನ್ನುವುದು ವಿಷಾದದ ಸಂಗತಿ. ಆಧಾರ್ ಕಾರ್ಡ್ ಇಲ್ಲದ ಕಾರಣ ಶಕ್ತಿ ಯೋಜನೆಯೂ ಇಲ್ಲ. ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ರೇಷನ್ ಕಾರ್ಡ್ ಇಲ್ಲ. ಹೀಗಾಗಿ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಭಾಗ್ಯ ಲಕ್ಷ್ಮಿ ಬಾಂಡ್ ಮಾಡಿಸಿಕೊಳ್ಳಲೂ ಇವರಿಗೆ ಸಾಧ್ಯವಾಗಿಲ್ಲ. ತಂದೆ, ತಾಯಿ ಇಬ್ಬರೂ ಅನಕ್ಷರಸ್ಥರಾಗಿದ್ದ ಕಾರಣ ಈ ಸ್ಥಿತಿ ನಿರ್ಮಾಣವಾಗಿದೆ.
ಹದಿನೈದು ಸಾವಿರ ಲಂಚಕ್ಕೆ ಬೇಡಿಕೆ..?
ಚೈತ್ರ ಈ ಹಿಂದೆ ಕೊಳ್ಳೇಗಾಲದಲ್ಲಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಿದ್ದರು. ಆದರೆ, ಆಧಾರ್ ಕಾರ್ಡ್ ಮನೆ ವಿಳಾಸಕ್ಕೆ ತಲುಪಲೇ ಇಲ್ಲ. ಮತ್ತೆ ಹೋಗಿ ಆಧಾರ್ ಸೇವಾ ಕೇಂದ್ರದಲ್ಲಿ ವಿಚಾರಿಸಿದಾಗ ಸ್ವೀಕೃತಿ ಪತ್ರ ಕೇಳಿದ್ದಾರೆ. ಅದನ್ನು ಕಳೆದುಕೊಂಡಿದ್ದಾಗಿ ಪೋಷಕರು ಹೇಳಿದ್ದಾರೆ. ಸ್ವೀಕೃತಿ ಪತ್ರ ಇಲ್ಲದ ಕಾರಣ ಆಧಾರ್ ಸಿಗುವುದು ಕಷ್ಟ ಎಂದು ಸಿಬ್ಬಂದಿ ಹೇಳಿದ್ದಾರೆ.
"ಹದಿನೈದು ಸಾವಿರ ರೂ. ಕೊಟ್ಟರೆ ಮಾಡಿಸಿಕೊಡುವುದಾಗಿ ಕೇಳಿದರು. ಕೂಲಿ ಮಾಡಿ ಜೀವನ ಸಾಗಿಸುವ ನನ್ನ ಬಳಿ ಹದಿನೈದು ಸಾವಿರ ಎಲ್ಲಿಂದ ಬರಬೇಕು, ಅದಕ್ಕಾಗಿಯೇ ಸುಮ್ಮನಾದೆ" ಎಂದು ಚೈತ್ರ ತಾಯಿ ಮಾದೇವಿ ʼದ ಫೆಡರಲ್ ಕರ್ನಾಟಕʼದ ಬಳಿ ಅಳಲು ತೋಡಿಕೊಂಡರು.
ಬದುಕು ಕಟ್ಟಿಕೊಳ್ಳಲು ಸಾಹಸ
ಮಾದೇವಿ ಅವರು ಪತಿ ಕಳೆದುಕೊಂಡ ನಂತರ ತವರು ಮನೆ ಸೇರಿದ್ದಾರೆ. 16 ವರ್ಷದ ಮಗ ಮಲ್ಲೇಶ್ ಶಾಲೆ ಬಿಟ್ಟು ಕೂಲಿ ಕೆಲಸ ಮಾಡಿಕೊಂಡು ತಾಯಿಗೆ ನೆರವಾಗಿದ್ದಾನೆ. ಮಗಳು ಚೆನ್ನಾಗಿ ಓದಲಿ ಎನ್ನುವುದು ತಾಯಿಯ ಸದಾಶಯ.
"ನಾವು ಕೂಲಿ ಮಾಡಿ ಬದುಕುವ ಜನ. ಅಂದು ದುಡಿದರೆ ಅಂದಿಗೆ ಸರಿಯಾಗುತ್ತದೆ. ಮಗಳಿಗೆ ದಿನವೂ ಮೂವತ್ತು ರೂಪಾಯಿ ಬಸ್ ಚಾರ್ಜ್ ಕೊಡಬೇಕು. ಆಧಾರ್ ಕಾರ್ಡ್ ಮಾಡಿಸಲು ಹೋದರೆ ದುಡ್ಡು ಕೇಳುತ್ತಾರೆ. ಅದಕ್ಕಾಗಿಯೇ ಅಲೆದಾಡಿದರೆ ಹೊಟ್ಟೆ ತುಂಬುವುದು ಹೇಗೆ..?, ನಮ್ಮ ಕುಟುಂಬದಲ್ಲಿ ಯಾರೂ ವಿದ್ಯಾವಂತರಿಲ್ಲ. ಎಲ್ಲರೂ ಕೂಲಿ ಮಾಡಿಯೇ ಬದುಕಬೇಕು. ಆಧಾರ್ ಕಾರ್ಡ್ ಮಾಡಿ ಕೊಟ್ಟರೆ ಮಗಳಿಗೆ ಅನುಕೂಲ ಆಗುತ್ತದೆ" ಎನ್ನುತ್ತಾರೆ ಮಾದೇವಿ.
ಶಿಕ್ಷಕರ ನೆರವಿನಿಂದ ಸಿಗುತ್ತಿದೆ ಶಿಕ್ಷಣ
ಚೈತ್ರ ಓದು ಆರಂಭಿಸಿದ್ದು ತಂದೆಯ ಊರಾದ ಕೊಳ್ಳೇಗಾಲ ತಾಲ್ಲೂಕಿನ ಅರೇಪಾಳ್ಯ ಸರ್ಕಾರಿ ಶಾಲೆಯಲ್ಲಿ. ಅಲ್ಲಿಂದ ಜೀರಿಗೆಗದ್ದೆಯ ಆಶ್ರಮ ಶಾಲೆಗೆ ಸೇರಿ ಓದುತ್ತಿರುತ್ತಾಳೆ. ತಂದೆ ತೀರಿಕೊಂಡ ಬಳಿಕ ತಾಯಿಯೊಂದಿಗೆ ಕೌಳೆಹಳ್ಳಕ್ಕೆ ಬಂದು ಅಲ್ಲಿಂದ ಏಳು ಕಿ.ಮೀ. ದೂರದಲ್ಲಿ ಇರುವ ಲಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿ ಓದು ಮುಂದುವರಿಸಿದ್ದಾಳೆ. ಶಿಕ್ಷಕರು ಆಧಾರ್ ಕಾರ್ಡ್ ಮಾಡಿಸಲು ಪ್ರಯತ್ನಪಟ್ಟರೂ ಅದು ಸಾಧ್ಯವಾಗಿಲ್ಲ. ಇನ್ನು ಆಧಾರ್ ಕಾರ್ಡ್ ಇಲ್ಲದ ಕಾರಣ ವಿದ್ಯಾರ್ಥಿ ವೇತನ ಸೌಲಭ್ಯವೂ ಸಿಗುತ್ತಿಲ್ಲ.
ನಮ್ಮ ಕೈಲಾದ ಸಹಾಯ ಮಾಡುತ್ತೇವೆ
ಕೌಳೆಹಳ್ಳದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರಂಗ ಅವರು ʼದ ಫೆಡರಲ್ ಕರ್ನಾಟಕʼ ದೊಂದಿಗೆ ಮಾತನಾಡಿ, ನಾವು ಚೈತ್ರಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಡುವ ಸಂಬಂಧ ಸಹಾಯ ಮಾಡುತ್ತೇವೆ. ಅಧಿಕಾರಿಗಳು, ಆಧಾರ್ ಸೇವಾ ಕೇಂದ್ರದವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಏನು ಮಾಡಬೇಕು ಎಂಬುದಾಗಿ ವಿಚಾರಿಸುತ್ತೇವೆʼʼ ಎಂದಿದ್ದಾರೆ.
ನಾನು ಮಾತ್ರ ದುಡ್ಡು ಕೊಡಬೇಕು
ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಬಾಲಕಿ ಚೈತ್ರ, "ಎಲ್ಲರೂ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುವಾಗ ನಾನು ದುಡ್ಡು ಕೊಟ್ಟು ಓಡಾಡಬೇಕಿದೆ. ಈ ಸಂದರ್ಭದಲ್ಲಿ ನನಗೆ ನೋವಾಗುತ್ತದೆ. ನನ್ನ ತಾಯಿ ದಿನವೂ ನನಗೆ ಮೂವತ್ತು ರೂಪಾಯಿ ಕೊಡುತ್ತಾಳೆ. ಪ್ರಯಾಣ ಶುಲ್ಕ ಉಳಿದರೆ ಪುಸ್ತಕ, ಬಟ್ಟೆ ಖರೀದಿಸಲು ಆಗುತ್ತದೆ. ಆಧಾರ್ ಕಾರ್ಡ್ ಬೇಗ ಸಿಕ್ಕರೆ ನನಗೆ ಖುಷಿಯಾಗುತ್ತದೆ" ಎಂದು ಹೇಳಿ ಮೌನವಾದಳು.
ಲ್ಲರೂ ಸೌಲಭ್ಯಗಳನ್ನು ಪಡೆದುಕೊಳ್ಳುವಾಗ ತಾನು ಅದಕ್ಕೆ ಅರ್ಹವಾಗಿದ್ದರೂ ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣದಿಂದ ಸೌಲಭ್ಯ ವಂಚಿತವಾಗುತ್ತಿರುವ ಚೈತ್ರಗಳಿಗೆ ಕೂಡಲೇ ಆಧಾರ್ ಸಿಗಬೇಕಿದೆ. ಈ ನಿಟ್ಟಿನಲ್ಲಿ ಆಧಾರ್ ಸೇವಾ ಕೇಂದ್ರದ ಸಿಬ್ಬಂದಿ, ಅಧಿಕಾರಿಗಳು ಮುತುವರ್ಜಿ ವಹಿಸಬೇಕು, ಬಡ ಕುಟುಂಬಕ್ಕೆ ನೆರವಾಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವೂ ಆಗಿದೆ.