Social Media | ಸಚಿವ ಮಧು ಬಂಗಾರಪ್ಪಗೆ ನಿಂದನೆ: ಕಿಡಿಗೇಡಿ ವಿರುದ್ಧ ದಾಖಲಾಯ್ತು ಕೇಸು
ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್ ಸಂವಾದದ ವೇಳೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿದ್ಯಾರ್ಥಿಯೊಬ್ಬ ʼಶಿಕ್ಷಣ ಸಚಿವರಿಗೇ ಕನ್ನಡ ಬರುವುದಿಲ್ಲʼ ಎಂದು ಹೇಳಿದ್ದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಶಿಕ್ಷಣ ಸಚಿವರು ಆನ್‌ಲೈನ್ ಸಂವಾದದ ವೇಳೆಯೇ ತಮ್ಮ ಬಗ್ಗೆ ವ್ಯಂಗ್ಯವಾಡಿದ ವಿದ್ಯಾರ್ಥಿಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಮತ್ತು ಆ ಬಳಿಕ ಆ ಘಟನೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಸಿಡಿಮಿಡಿಗೊಂಡ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಹಲವರು ಸಚಿವರ ನಡೆಯನ್ನು ಖಂಡಿಸಿದ್ದರು. ಸಚಿವರಾದವರು ಹೀಗೆ ವಿದ್ಯಾರ್ಥಿಗಳ ತುಂಟತನವನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಅಧಿಕಾರಿಗಳಿಗೆ ತಾಕೀತು ಮಾಡುವುದು ಸರಿಯಲ್ಲ. ಅಲ್ಲದೆ, ಆ ಘಟನೆಯ ಬಗ್ಗೆ ಕೇಳಿದ ಮಾಧ್ಯಮದವರ ಮುಂದೆ ಸಚಿವರ ವರಸೆ ಕೂಡ ಅವರ ಸ್ಥಾನಕ್ಕೆ ತಕ್ಕುದಲ್ಲ ಎಂಬ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ಆದರೆ, ಮೋಹಿತ್ ನರಸಿಂಹಮೂರ್ತಿ ಎಂಬ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮತ್ತು ಎಕ್ಸ್ ನಲ್ಲಿ ಶಿಕ್ಷಣ ಸಚಿವರ ವಿರುದ್ಧ ತೀರಾ ಅಸಭ್ಯ ಭಾಷೆಯಲ್ಲಿ ಅವಹೇಳನಕಾರಿಯಾಗಿ ನಿಂದಿಸಿ ವಿಡಿಯೋ ಮಾಡಿದ್ದಲ್ಲದೆ, ಬೆದರಿಕೆಯನ್ನೂ ಹಾಕಿದ್ದ. ಆ ಹಿನ್ನೆಲೆಯಲ್ಲಿ ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಕಿಡಿಗೇಡಿಯ ವಿರುದ್ಧ ಸು-ಮೊಟೋ ದೂರು ದಾಖಲಿಸಿಕೊಂಡಿದ್ದಾರೆ.
ಕಿಡಿಗೇಡಿ ಮೋಹಿತ್ ನರಸಿಂಹ ಮೂರ್ತಿ ಸರ್ಕಾರದ ಭಾಗವಾಗಿರುವ ಸಚಿವರನ್ನು ಅವಾಚ್ಯವಾಗಿ ನಿಂದಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ ಮತ್ತು ʼಎಕ್ಸ್ʼ ಪೋಸ್ಟ್ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ರಾಜ್ಯ ಸರ್ಕಾರದ ಸಂವಿಧಾನಿಕ ಹುದ್ದೆಯಲ್ಲಿರುವ ಸಚಿವರನ್ನು ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ ಸರ್ಕಾರದ ಘನತೆಗೆ ಧಕ್ಕೆ ತಂದಿದ್ದಾನೆ. ಸರ್ಕಾರದ ಯೋಜನೆಯ ವಿರುದ್ಧ ಸುಳ್ಳು ಮಾಹಿತಿ ಪ್ರಸಾರ ಮಾಡಿ, ಸಾರ್ವಜನಿಕರನ್ನು ಸರ್ಕಾರದ ವಿರುದ್ಧ ದಂಗೆ ಏಳಿಸುವ ಹಾಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೋಹಿತ್ ವಿರುದ್ಧ ಗೌರಿಬಿದನೂರಿನಲ್ಲೂ ದೂರು
ಮೋಹಿತ್ ವಿರುದ್ಧ ಗೌರಿ ಬಿದನೂರಿನಲ್ಲಿಯೂ ದೂರು ದಾಖಲಿಸಿರುವುದಾಗಿ ಕೆಪಿಸಿಸಿ ಕಾನೂನು ಘಟಕ ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಚಿವರಾದ ಡಾ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ವಿರುದ್ಧ ಈ ವ್ಯಕ್ತಿ ಅಸಭ್ಯವಾಗಿ ನಿಂದಿಸಿ ಇನ್‌ಸ್ಟಾಗ್ರಾಂ ಮತ್ತು ಎಕ್‌ನಲ್ಲಿ ವಿಡಿಯೋ ಹಾಕಿದ್ದು, ಆ ಹಿನ್ನೆಲೆಯಲ್ಲಿ ಆತನ ವಿರುದ್ಧ ಗೌರಿಬಿದನೂರಿನಲ್ಲಿ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಕಾನೂನು ಘಟಕ ಹೇಳಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮೋಹಿತ್ ನರಸಿಂಹಮೂರ್ತಿ, ಹೀನಾಯ ಬೈಗುಳ ಬಳಸಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಸಚಿವರುಗಳನ್ನು ನಿಂದಿಸಿರುವ ವಿಡಿಯೋಗಳನ್ನು ತನ್ನ ಇನ್‌ಸ್ಟಾಗ್ರಾಂ ಮತ್ತು ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡಿದ್ದಾನೆ.