Internal Reservation | ಇಂದಿನಿಂದ ಪರಿಶಿಷ್ಟ ಜಾತಿಗಳ ವೈಜ್ಞಾನಿಕ ದತ್ತಾಂಶ ಸಂಗ್ರಹ ಸಮೀಕ್ಷೆ ಆರಂಭ; ಮೂರು ಹಂತದಲ್ಲಿ ನಡೆಯಲಿದೆ ಸಮೀಕ್ಷೆ
x

Internal Reservation | ಇಂದಿನಿಂದ ಪರಿಶಿಷ್ಟ ಜಾತಿಗಳ ವೈಜ್ಞಾನಿಕ ದತ್ತಾಂಶ ಸಂಗ್ರಹ ಸಮೀಕ್ಷೆ ಆರಂಭ; ಮೂರು ಹಂತದಲ್ಲಿ ನಡೆಯಲಿದೆ ಸಮೀಕ್ಷೆ

ಮೂರೂ ಹಂತದ ಸಮೀಕ್ಷೆಗಳ ಮೂಲಕ ನಿಖರ ಮಾಹಿತಿ ಪಡೆದ ನಂತರ 60ದಿನಗಳಲ್ಲಿ ನಾಗಮೋಹನ ದಾಸ್‌ ನೇತೃತ್ವದ ಆಯೋಗ ವರದಿ ಜೊತೆಗೆ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


ರಾಜ್ಯಾದ್ಯಂತ ಇಂದಿನಿಂದ(ಮೇ 5) ಮೇ 17ರವರೆಗೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿ ಮನೆ ಮನೆ ಸಮೀಕ್ಷೆ ನಡೆಯಲಿದೆ. ಸಮೀಕ್ಷೆಗೆ ಒಟ್ಟು 65ಸಾವಿರ ಶಿಕ್ಷಕರನ್ನು ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದಾರೆ. 10ರಿಂದ 12 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ. ಮೊದಲ ಹಂತದಲ್ಲಿ ಮೇ 5ರಿಂದ 17ರವರೆಗೆ ಗಣತಿದಾರರು ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಲಿದ್ದಾರೆ. ಎರಡನೇ ಹಂತದಲ್ಲಿ ಮೇ 19 ರಿಂದ 21ರವರೆಗೆ ವಿಶೇಷ ಶಿಬಿರಗಳ ಮೂಲಕ ಸಮೀಕ್ಷೆ ನಡೆಯಲಿದೆ. ಇಲ್ಲಿ ಮನೆ ಮನೆ ಗಣತಿಯಿಂದ ವಂಚಿತರಾದವರು ಅಗತ್ಯ ದಾಖಲೆಗಳೊಂದಿಗೆ ಬಂದು ಸೇರ್ಪಡೆ ಮಾಡಬಹುದು. ಮೂರನೇ ಹಂತದಲ್ಲಿ ಮೇ 19 ರಿಂದ 23ರವರೆಗೆ ಆನ್‌ಲೈನ್‌ ಮೂಲಕವೂ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಿದೆ ಎಂದು ವಿವರಿಸಿದ್ದಾರೆ.

ಮೂರೂ ಸಮೀಕ್ಷೆಗಳ ಮೂಲಕ ನಿಖರ ಮಾಹಿತಿ ಪಡೆದ ನಂತರ 60ದಿನಗಳಲ್ಲಿ ವರದಿ ನೀಡಲು ಸೂಚಿಸಲಾಗಿದೆ. ಅದಾದ ಬಳಿಕ ನಾಗಮೋಹನದಾಸ್‌ ನೇತೃತ್ವದ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ತಿಳಿಸಿದ್ದಾರೆ.

ಮೊಬೈಲ್ ಆಪ್ ಮೂಲಕವೂ ಸಮೀಕ್ಷೆ

ಒಳ ಮೀಸಲಾತಿ ಸಂಬಂಧ ಪರಿಶಿಷ್ಟ ಜಾತಿ-ಉಪಜಾತಿಗಳ ಸಮೀಕ್ಷೆಗೆ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಈ ಆಪ್‌ ನಲ್ಲಿ ಬೆಳಿಗ್ಗೆ 6.30ರಿಂದ ಸಂಜೆ 6.30 ರವರೆಗೆ ಸಮೀಕ್ಷೆಯ ವಿವರ ಭರ್ತಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಪರಿಶಿಷ್ಟ ಜಾತಿಯ ಜನರು ಮನೆ ಮನೆಗೆ ಗಣತಿದಾರರು ಬಂದಾಗ ಅಗತ್ಯ ಮಾಹಿತಿ ನೀಡಬೇಕು. ಮೂಲ ಜಾತಿಗಳನ್ನೇ ದಾಖಲಿಸಬೇಕು. ಒಂದು ವೇಳೆ ಮನೆ ಮನೆಗೆ ಹೋದಾಗ ಮಾಹಿತಿ ನೀಡಲು ಸಾಧ್ಯವಾಗದಿದ್ದರೆ ಅಂತವರು ಶಿಬಿರಗಳು ಅಥವಾ ಆನ್‌ಲೈನ್‌ ಮೂಲಕ ಮಾಹಿತಿ ಕೊಡಬಹುದು. ಸಮೀಕ್ಷೆಯಿಂದ ಯಾರೂ ಕೂಡ ವಂಚಿತರಾಗಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಹೇಳಿದ್ದಾರೆ.

ಸಮೀಕ್ಷೆಗೆ 100ಕೋಟಿ ರೂ.ವೆಚ್ಚ

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆಗೆ ೧೦೦ ಕೋಟಿ ರೂ. ವೆಚ್ಚವಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ತಿಳಿಸಿದ್ದಾರೆ. ಸಮೀಕ್ಷೆಯು ಮೇ 23ರವರೆಗೆ ಮೂರು ಹಂತಗಳಲ್ಲಿ ನಡೆಯಲಿದೆ. 65ಸಾವಿರ ಶಿಕ್ಷಕರನ್ನು ಗಣತಿಗೆ ನಿಯೋಜಿಸಲಾಗಿದೆ. ಮೊಬೈಲ್‌ ತಂತ್ರಾಂಶ ಸಿದ್ಧಪಡಿಸಲಾಗಿದೆ. ಗಣತಿದಾರರು, ಮೇಲ್ವಿಚಾರಕರಿಗೆ ಅಗತ್ಯ ತರಬೇತಿ ನೀಡಲಾಗಿದೆ. ಈ ಎಲ್ಲಾ ಪ್ರಕ್ರಿಯೆಗೆ 100ಕೋಟಿ ರೂ. ಖರ್ಚಾಗಲಿದೆ ಎಂದು ಹೇಳಿದ್ದಾರೆ.

ವೈಜ್ಞಾನಿಕ ದತ್ತಾಂಶ ಅಗತ್ಯ

ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ನಿರ್ದಿಷ್ಟ ಮಾಹಿತಿ ಅಗತ್ಯತೆ ಕುರಿತು ಸುಪ್ರೀಂಕೋರ್ಟ್‌, ಪರಿಶಿಷ್ಟ ಜಾತಿಯ ಮುಖಂಡರು ಹಾಗೂ ನ್ಯಾ.ನಾಗಮೋಹನದಾಸ್‌ ನೇತೃತ್ವದ ಆಯೋಗ ಹೇಳಿತ್ತು.

ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲೂ ಒಳ ಮೀಸಲಾತಿ ಜಾರಿಯ ಘೋಷಣೆ ಮಾಡಿತ್ತು. ಈ ಎಲ್ಲಾ ಕಾರಣಗಳಿಗಾಗಿ ಪರಿಶಿಷ್ಟ ಜಾತಿ, ಉಪಜಾತಿಗಳ ಮೂಲ ಜಾತಿಗಳ ಕುರಿತು ಕರಾರುವಕ್‌ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಮೀಕ್ಷೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಪರಿಶಿಷ್ಟ ಜಾತಿಯವರು ಒಳ ಮೀಸಲಾತಿ ಸಮೀಕ್ಷೆಯಲ್ಲಿ ಭಾಗವಹಿಸಿ, ಗಣತಿದಾರರು ಕೇಳುವ 47 ಪ್ರಶ್ನೆಗಳಿಗೆ ಮಾಹಿತಿ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಕೆಲಸದ ಮೇಲೆ ಹೊರ ಜಿಲ್ಲೆ, ಹೊರ ರಾಜ್ಯದಲ್ಲಿ ಇರುವವರು ಕೂಡ ಆನ್‌ಲೈನ್‌ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಿ, ಮಾಹಿತಿ ನೀಡಬಹುದು. ಎಲ್ಲ ದಲಿತ ಸಂಘಟನೆಗಳು ಇದಕ್ಕೆ ಸಹಕಾರ ನೀಡಬೇಕು. ಒಳ ಮೀಸಲಾತಿ ಸಮೀಕ್ಷೆಗೆ ಯಾರೂ ಕೂಡ ಹಿಂಜರಿಬಾರದು ಎಂದು ಕೋರಿದ್ದಾರೆ.

ಸಹಾಯವಾಣಿ ಆರಂಭ

ಒಳ ಮೀಸಲಾತಿ ಸಮೀಕ್ಷೆ ಕುರಿತು ಮಾಹಿತಿ ವಿನಿಮಯಕ್ಕಾಗಿ ರಾಜ್ಯ ಸರ್ಕಾರ ಸಹಾಯವಾಣಿಯನ್ನೂ ಆರಂಭಿಸಿದೆ. ಮೀಸಲಾತಿಗೆ ಸಂಬಂಧಿಸಿದ ಅನುಮಾನಗಳು ಅಥವಾ ಮಾಹಿತಿಗೆ 9481359000 ಸಂಖ್ಯೆ ಸಂಪರ್ಕಿಸಬಹುದು. ಇದು ಸಮೀಕ್ಷೆಯ ಅವಧಿಯಲ್ಲಿ ದಿನ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸದಾಶಿವ ಆಯೋಗದಲ್ಲಿ ವೈಜ್ಞಾನಿಕ ದತ್ತಾಂಶ ಇರಲಿಲ್ಲ

ಸಂವಿಧಾನದ ಕಲಂ 341ರ ಪ್ರಕಾರ ಪರಿಶಿಷ್ಟ ಜಾತಿಗಳಲ್ಲಿ 101ಉಪ ಜಾತಿಗಳನ್ನು ಗುರುತಿಸಲಾಗಿದೆ. ಮಾದಿಗ, ಹೊಲೆಯ, ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿ ಸೇರಿ ಇತರೆ ಉಪಜಾತಿಗಳಿವೆ. ಆದರೆ, 101 ಉಪಜಾತಿಗಳ ವೈಜ್ಞಾನಿಕ (ಎಂಫರಿಕಲ್‌) ದತ್ತಾಂಶ ಇರಲಿಲ್ಲ. 2011ರ ಜನಗಣತಿ ಆಧಾರದ ಮೇಲೆ ನ್ಯಾ.ಸದಾಶಿವ ಆಯೋಗ ನೀಡಿದ್ದ ವರದಿಯಲ್ಲಿ ಕೇವಲ ಜನಸಂಖ್ಯೆ ಗುರುತಿಸಲಾಗಿತ್ತು. ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂಬುದು ಗುಂಪುಗಳು ಮಾತ್ರ ಇದ್ದವು. ಮೂಲ ಜಾತಿಗಳ ಮಾಹಿತಿ ಇರಲಿಲ್ಲ ಎಂದು ಸಿಎಂ ಹೇಳಿದ್ದಾರೆ.

ಸಂವಿಧಾನದಲ್ಲಿ ಒಳ ಮೀಸಲಾತಿಗೆ ಅವಕಾಶ ಮಾಡಿಕೊಡಲು ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು 2024 ಆ.8 ರಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪಂಜಾಬ್ ಹಾಗೂ ಇತರರು ವರ್ಸಸ್‌ ದೇವೇಂದ್ರಸಿಂಗ್ ಹಾಗೂ ಇತರರು ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಆಧಾರದ ಮೇಲೆ ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಒಳ ಮೀಸಲಾತಿ ಜಾರಿ ಕುರಿತ ಅಧ್ಯಯನಕ್ಕೆ ಆಯೋಗ ರಚಿಸಲಾಗಿತ್ತು. ಆಯೋಗ ನೀಡಿದ ಮಧ್ಯಂತರ ವರದಿಯಲ್ಲಿ ಎಂಫರಿಕಲ್ ಡೇಟಾ ಇರಲೇಬೇಕು. ಅದಕ್ಕಾಗಿ ಹೊಸ ಸಮೀಕ್ಷೆ ಅಗತ್ಯವಾಗಿದೆ ಎಂದು ಶಿಫಾರಸು ಮಾಡಿತ್ತು ಎಂದು ವಿವರಿಸಿದ್ದಾರೆ.

ಪರಿಶಿಷ್ಟ ಜಾತಿಯ 101ಜಾತಿಗಳಿಗೆ ಒಳ ಮೀಸಲಾತಿ ಕೊಡಬೇಕಾದರೆ ನಿರ್ದಿಷ್ಟ ಅಂಕಿ ಅಂಶಗಳು ಬೇಕಾಗಿವೆ. ಅದಕ್ಕಾಗಿ ನಾಗಮೋಹನದಾಸ್ ಅವರ ಆಯೋಗ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಇಂದಿನಿಂದ ಸಮೀಕ್ಷೆ ಆರಂಭಿಸಿದೆ ಎಂದು ಹೇಳಿದ್ದಾರೆ.

Read More
Next Story