Reservation Row| ಕಟಕಟೆಯಲ್ಲಿ ಮೀಸಲಾತಿ ಬಿಕ್ಕಟ್ಟು; ಕನಸಾಗಿ ಉಳಿದ ಒಳ ಮೀಸಲಾತಿ
x

Reservation Row| ಕಟಕಟೆಯಲ್ಲಿ ಮೀಸಲಾತಿ ಬಿಕ್ಕಟ್ಟು; ಕನಸಾಗಿ ಉಳಿದ ಒಳ ಮೀಸಲಾತಿ

ಒಳ ಮೀಸಲಾತಿ ಜಾರಿಯ ಬಳಿಕ ಸರ್ಕಾರದ ವಿವಿಧ ಇಲಾಖೆಗಳು ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದವು. ಈಗ ಒಟ್ಟು ಮೀಸಲಾತಿಗೆ ಹೈಕೋರ್ಟ್‌ ತಡೆ ನೀಡಿದ ಕಾರಣ ಸಾಮಾನ್ಯ ವರ್ಗದವರಿಗೂ ಸಮಸ್ಯೆಯಾಗಿದೆ.


ಮೂವತ್ತೈದು ವರ್ಷಗಳ ಅವಿರತ ಹೋರಾಟದಿಂದ ಒಳ ಮೀಸಲಾತಿ ದಕ್ಕಿಸಿಕೊಂಡ ಪರಿಶಿಷ್ಟ ಜಾತಿಗಳಲ್ಲಿ ಇದೀಗ ಮೀಸಲಾತಿ ಜಾರಿ ಸಂಭ್ರಮ ತೆರೆಗೆ ಸರಿದು, ಅಸಮಾಧಾನ ಮತ್ತು ಆತಂಕ ಒಟ್ಟೊಟ್ಟಿಗೆ ಎದುರಾಗಿದೆ.

ಪರಿಶಿಷ್ಟ ಜಾತಿ, ಪಂಗಡದವರ ಮೀಸಲಾತಿ ಹೆಚ್ಚಳದಿಂದ ಶೇ 56 ಕ್ಕೆ ಜಿಗಿದ ಒಟ್ಟು ಮೀಸಲಾತಿಗೆ ಹೈಕೋರ್ಟ್ ತಡೆ ನೀಡಿರುವುದು ಒಳ ಮೀಸಲಾತಿ ಜಾರಿಗೆ ಗ್ರಹಣ ಹಿಡಿಯುವಂತೆ ಮಾಡಿದೆ. ಇದರಿಂದ ನೇಮಕಾತಿ ಪ್ರಕ್ರಿಯೆಗಳು ನಿಂತು ಹೋಗಿವೆ.

ರಾಜಕೀಯ ಲಾಭಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಕೈಗೊಂಡ ವಿವೇಚನಾರಹಿತ ನಿರ್ಧಾರಗಳು ಸಂವಿಧಾನದ ಆಶಯವನ್ನೇ ಪ್ರಶ್ನಿಸುವಂತಿವೆ ಎಂಬ ಮಾತುಗಳು ದಟ್ಟವಾಗಿವೆ. ಒಳ ಮೀಸಲಾತಿ ಜಾರಿಗೂ ಮೊದಲು ಶೇ 56 ಮೀಸಲಾತಿಯನ್ನುಸಾಂವಿಧಾನಿಕ ತಿದ್ದುಪಡಿ ತಂದು 9ನೇ ಅನುಸೂಚಿಗೆ ಸೇರಿಸಿದ್ದರೆ ನ್ಯಾಯಾಂಗದ ಪರಿಶೀಲನೆಯಿಂದ ರಕ್ಷಣೆ ಪಡೆಯಬಹುದಿತ್ತು ಎಂಬುದು ಹೋರಾಟಗಾರರು ಹಾಗೂ ಕಾನೂನು ತಜ್ಞರ ಅಭಿಪ್ರಾಯ.

ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ಯತ್ನ

“ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಶೇ 56 ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯಂತರ ಆದೇಶಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕು. ಶೇ 56 ಮೀಸಲಾತಿಯನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಯತ್ನಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಹೈಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಶೇ50 ರ ಅಡಿಯಲ್ಲೇ ಮೀಸಲಾತಿ ನೀಡುವುದಾದರೆ ನಾಗಮೋಹನ್ ದಾಸ್ ಆಯೋಗದ ವೈಜ್ಞಾನಿಕ ದತ್ತಾಂಶ ಬಳಸಿಕೊಂಡು ಸದಾಶಿವ ಆಯೋಗದ ಮಾದರಿ ಒಳ ಮೀಸಲಾತಿ ನೀಡಬೇಕು. ಆಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ” ಎಂದು ಮಾದಿಗ ಸಮುದಾಯಗಳ ಸ್ವಾಭಿಮಾನ ಒಕ್ಕೂಟದ ರಾಜ್ಯ ಸಂಚಾಲಕ ಕೇಶವಮೂರ್ತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

“ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಂಬಂಧ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಮನವಿ ಸಲ್ಲಿಸುತ್ತೇವೆ. ನಾವು ನ್ಯಾಯಾಲಯದ ಆದೇಶಕ್ಕಾಗಿ ಕಾಯದೇ ರಾಜಕೀಯ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ. ನಾಗಮೋಹನ್ ದಾಸ್ ಆಯೋಗ ಸೇರಿದಂತೆ ಎಲ್ಲವನ್ನೂ ಸರ್ಕಾರ ಯೋಜಿತವಾಗಿಯೇ ಮಾಡುತ್ತಿದೆ. ಸಂವಿಧಾನದಲ್ಲಿ ಅಲೆಮಾರಿಗಳು ಎಂಬುದಿಲ್ಲ. ಅವರಿಗೆ ಶೇ 1 ಮೀಸಲಾತಿ ನೀಡಿದ್ದೂ ಕೂಡ ಯೋಜಿತವೇ. ಅಲೆಮಾರಿಗಳನ್ನು ಪ್ರತ್ಯೇಕ ಪ್ರವರ್ಗ ಮಾಡಲು ಬರುವುದಿಲ್ಲ, ಅವರನ್ನು ಆರ್ಥಿಕವಾಗಿ ಹಿಂದುಳಿದ ಗುಂಪಿನಲ್ಲೇ ಸೇರಿಸಬೇಕು” ಎಂದು ಹೇಳಿದರು.

“ಮಾದಿಗ ಸಮುದಾಯದ 20ಕ್ಕೂ ಹೆಚ್ಚು ಉಪಜಾತಿಗಳು ಅಲೆಮಾರಿ ಸಮುದಾಯದಲ್ಲಿವೆ. ಅದೇ ರೀತಿ ಹೊಲೆಯ ಸಮುದಾಯದ 16ಉಪ ಜಾತಿಗಳೂ ಕೂಡ ಅಲೆಮಾರಿಗಳಲ್ಲಿದ್ದಾರೆ. ಸರ್ಕಾರ ಉಪಜಾತಿಗಳನ್ನು ಚೆಲ್ಲಾಪಿಲ್ಲಿ ಮಾಡಿದ ಅದರ ಅರ್ಥವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಪ್ರವರ್ಗ ಸೃಷ್ಟಿಸುವಾಗ ಉಪಜಾತಿಗಳ ನಡುವಿನ ಏಕಸಾಮ್ಯತೆ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದರೂ, ಅದ್ಯಾವುದನ್ನೂ ಸರ್ಕಾರ ಪರಿಗಣಿಸಿಲ್ಲ” ಎಂದು ಆರೋಪಿಸಿದರು.

“ಅಲೆಮಾರಿಗಳಲ್ಲಿರುವ ಉಪ ಜಾತಿಗಳನ್ನು ಮಾದಿಗ ಸಮುದಾಯಕ್ಕೆ ಸೇರಿಸಿದರೆ ಯಾರೂ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಅದೇ ರೀತಿ ಹೊಲೆಯ ಜಾತಿಗೆ ಸೇರುವ ಚೆನ್ನದಾಸರು ಕೂಡ ತಮ್ಮನ್ನು ಮೂಲಜಾತಿಗೆ ಸೇರಿಸಲು ಪಟ್ಟು ಹಿಡಿದಿದ್ದಾರೆ. ಹೀಗಿರುವಾಗ, ಆಯಾ ಗುಂಪಿನ ಉಪಜಾತಿಗಳನ್ನು ಒಟ್ಟುಗೂಡಿಸಿ ಮೀಸಲಾತಿ ನೀಡಿದ್ದರೆ ಈ ಕಿತ್ತಾಟವೇ ಇರುತ್ತಿರಲಿಲ್ಲ” ಎಂದು ಕೇಶವಮೂರ್ತಿ ಹೇಳಿದರು.

ನೇಮಕಾತಿ ಪ್ರಕ್ರಿಯೆಗೂ ಗ್ರಹಣ

ಶೇ 56 ಮೀಸಲಾತಿ ಆಧಾರದ ಮೇಲೆ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಸದಂತೆ ಹೈಕೋರ್ಟ್‌ ಆದೇಶ ನೀಡಿದ ಹಿನ್ನೆಲೆಯಲ್ಲಿ ಎಲ್ಲ ವರ್ಗದವರ ನೇಮಕಾತಿ ಪ್ರಕ್ರಿಯೆಗಳಿಗೆ ತಡೆ ಬಿದ್ದಿದೆ. ಒಳ ಮೀಸಲಾತಿ ಜಾರಿಯ ಬಳಿಕ ಸರ್ಕಾರದ ವಿವಿಧ ಇಲಾಖೆಗಳು ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದವು. ಈಗ ಒಟ್ಟು ಮೀಸಲಾತಿಗೆ ಹೈಕೋರ್ಟ್‌ ತಡೆ ನೀಡಿದ ಕಾರಣ ಸಾಮಾನ್ಯ ವರ್ಗದವರಿಗೂ ಸಮಸ್ಯೆಯಾಗಿದೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ 15 ರಿಂದ 17ಕ್ಕೆ, ಪರಿಶಿಷ್ಟ ಪಂಗಡವರ ಮೀಸಲಾತಿಯನ್ನು ಶೇ 3 ರಿಂದ ಶೇ 7ಕ್ಕೆ ಹೆಚ್ಚಿಸಲಾಗಿತ್ತು.ಆಗ ಶೇ 50 ರಷ್ಟಿದ್ದ ಮೀಸಲಾತಿ ಪ್ರಮಾಣ ಶೇ 56ಕ್ಕೆ ಹೆಚ್ಚಿತು. ರಾಜಕೀಯ ಪಕ್ಷಗಳು ಮೀಸಲಾತಿ ಹೆಚ್ಚಳವನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡಿದ್ದವು. ಇದೀಗ ಮೀಸಲಾತಿ ಹೆಚ್ಚಳವೇ ಕಾನೂನು ಸಂಘರ್ಷಕ್ಕೆ ಒಳಗಾಗಿದೆ.

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ ಮೀಸಲಾತಿ ಅಗತ್ಯ. ಆದರೆ ಒಟ್ಟು ಮೀಸಲಾತಿ ಹೆಚ್ಚಳಕ್ಕೆ ಕಾನೂನು ಮಾನ್ಯತೆ ಪಡೆಯದೇ ಜಾರಿಗೊಳಿಸಲು ಹೋರಾಟ ಸರ್ಕಾರದ ನಡೆ ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕಾನೂನಾತ್ಮಕವಾಗಿ ನಡೆದುಕೊಳ್ಳಲಿ

ಎಸ್ಸಿ/ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿ, “ಯಾರೇ ಆಗಲಿ ಮೀಸಲಾತಿ ವಿಚಾರದಲ್ಲಿ ಕಾನೂನಾತ್ಮಕವಾಗಿ ನಡೆದುಕೊಳ್ಳಬೇಕು. ಮೀಸಲಾತಿ ಶೇ 50ರ ಮಿತಿ ದಾಟಬಾರದು ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ತಾನೇ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ 10 ರಷ್ಟು ಮೀಸಲಾತಿ ನೀಡಿದೆ. ಇದರಿಂದ ಶೇ 50ರ ಮಿತಿ ದಾಟಿದಂತಾಗಿದೆ. ಹೀಗಿರುವಾಗ ಶೇ 56 ಮೀಸಲಾತಿಗೆ ಹೈಕೋರ್ಟ್ ತಡೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ” ಎಂದು ಪ್ರಶ್ನಿಸಿದರು.

“ಇಂದ್ರ ಸಾಹ್ನಿ ಪ್ರಕರಣದ ತೀರ್ಪಿನ 86ನೇ ಪುಟದಲ್ಲಿ ಅತ್ಯಂತ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಮೀಸಲಾತಿ ಮಿತಿ ದಾಟಬಹುದು ಎಂದು ಉಲ್ಲೇಖಿಸಲಾಗಿದೆ. 1992ರಲ್ಲಿ ನೀಡಿದ ಈ ತೀರ್ಪು ಅಂದಿನ ಜನಸಂಖ್ಯೆಗೆ ಅನುಗುಣವಾಗಿತ್ತು. ಈಗ ಪ್ರತಿ ಜಾತಿವಾರು ಜನಸಂಖ್ಯೆ ಹೆಚ್ಚಳವಾಗಿದೆ. ಕಾನೂನು ರೂಪಿಸುವ ಶಾಸಕಾಂಗಗಳು ಮೀಸಲಾತಿ ಹೆಚ್ಚಿಸಿರುವಾಗ ನ್ಯಾಯಾಂಗದ ಹಸ್ತಕ್ಷೇಪವೇಕೆ, ಯಾವುದೇ ಕಾನೂನನ್ನು ನ್ಯಾಯಾಂಗ ಪರಿಶೀಲಿಸಬಹುದೇ ವಿನಃ ನಿಯಂತ್ರಿಸುವ ಅಧಿಕಾರ ಹೊಂದಿಲ್ಲ. ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿ ಮಿತಿ ಸಡಿಲಿಸುವುದಾದರೆ ಪರಿಶಿಷ್ಟರಿಗೇಕೆ ಇಲ್ಲ” ಎಂದು ಪ್ರಶ್ನಿಸಿದರು.

“ಸರ್ಕಾರಗಳು ಜನಸಂಖ್ಯೆ, ಜಾತಿವಾರು ಆರ್ಥಿಕ ಪ್ರಗತಿ, ಇನ್ನಿತರ ಅಂಶಗಳನ್ನು ಪರಿಗಣಿಸಿ ಮೀಸಲಾತಿ ಹೆಚ್ಚಿಸುತ್ತವೆ. ಅದೇ ರೀತಿ ಜಾರಿಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಪ್ರಸ್ತುತ, ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರಿಂದ ಹಿಡಿದು ಯಾರೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ” ಎಂದು ಆರೋಪಿಸಿದರು.

ವಿಶೇಷ ಮೇಲ್ಮನವಿ ಸಲ್ಲಿಕೆಗೆ ಹೆಚ್ಚಿದ ಒತ್ತಡ

ಮೀಸಲಾತಿ ಹೆಚ್ಚಳಕ್ಕೆ ತಡೆ ನೀಡಿರುವ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ಗೆ ವಿಶೇಷ ಮೇಲ್ಮನವಿ ಅರ್ಜಿ(ಎಸ್ಎಲ್ಪಿ) ಹಾಕಬೇಕು ಎಂದು ವಿವಿಧ ಸಂಘಟನೆಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.

ಈಗಾಗಲೇ ಹೈಕೋರ್ಟ್ ಆದೇಶದ ವಿರುದ್ಧ ವಿಶೇಷ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದರೂ ಅನಗತ್ಯ ವಿಳಂಬ ಮಾಡುತ್ತಿದೆ. ಇದರಿಂದ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ. 2.94 ಲಕ್ಷ ಉದ್ಯೋಗಗಳು ಖಾಲಿ ಉಳಿದಿವೆ. ಇದರಲ್ಲಿ ಹೈದರಾಬಾದ್-ಕರ್ನಾಟಕದ ಭಾಗಕ್ಕೆ ಹಂಚಿಕೆಯಾಗಿರುವ 32,500 ಹುದ್ದೆಗಳು ಭರ್ತಿಯಾಗಿಲ್ಲ. 1979ರಲ್ಲಿ ಸೃಜಿಸಲಾದ ಹುದ್ದೆಗಳನ್ನೇ ಈವರೆಗೂ ಭರ್ತಿ ಮಾಡಿಲ್ಲ. ಈ ಸಮಸ್ಯೆಯನ್ನು ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಚಂದ್ರಶೇಖರಯ್ಯ ಒತ್ತಾಯಿಸಿದರು.

ದಲಿತರ ವೋಟಿಗಾಗಿ ಸರ್ಕಾರಗಳ ದೊಂಬರಾಟ

“ರಾಜ್ಯ ಸರ್ಕಾರ ಹಾಗೂ ವಕೀಲರ ತಂಡದ ತಪ್ಪುಗಳಿಂದ ಮೀಸಲಾತಿ ಹೆಚ್ಚಳದ ಲಾಭ ದಲಿತರಿಗೆ ಸಿಗದಂತಾಗಿದೆ. ದಲಿತರಿಗೆ ವೋಟಿನ ಹಕ್ಕು ಇಲ್ಲದಿದ್ದರೆ ಮೀಸಲಾತಿಯೇ ಸಿಗುತ್ತಿರಲಿಲ್ಲ. ಸರ್ಕಾರಗಳು ದಲಿತರ ವೋಟಿಗಾಗಿಯೇ ಇಂತಹ ದೊಂಬರಾಟ ಆಡುತ್ತಿವೆ. ಒಂದು ವೇಳೆ ಸಂವಿಧಾನವು ದಲಿತರಿಗೆ ವೋಟಿನ ಹಕ್ಕು ನೀಡದೇ ಹೋಗಿದ್ದರೆ ಪರಿಶಿಷ್ಟರ ಬದುಕು ಮೂರಾಬಟ್ಟೆ ಆಗಿರುತ್ತಿತ್ತು” ಎಂದು ಹೈಕೋರ್ಟ್ ವಕೀಲ ಹಾಗೂ ಸಂವಿಧಾನ ತಜ್ಞ ಶಿವರುದ್ರಪ್ಪ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

“ಇಂದು ಮೀಸಲಾತಿ ಉಳಿಸಿಕೊಳ್ಳಲಿ ಯಾವ ಸಮುದಾಯದ ವೇದಿಕೆಯೂ ಪರಿಣಾಮಕಾರಿ ಹೋರಾಟ ನಡೆಸುತ್ತಿಲ್ಲ. ಇಷ್ಟು ವರ್ಷಗಳ ಕಾಲ ಮೀಸಲಾತಿಯ ಲಾಭ ಉಂಡವರು ಸಮುದಾಯದ ಬಗ್ಗೆಯೇ ಗೌರವ ಹೊಂದಿಲ್ಲ. ಇಂತವರಿಂದ ಏನನ್ನೂ ನಿರೀಕ್ಷಿಸಲಾಗದು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೀಸಲಾತಿ ಉಳಿಸಿಕೊಳ್ಳುವುದು ಕಷ್ಟವಲ್ಲ

ಶೇ 56 ಮೀಸಲಾತಿ ಉಳಿಸಿಕೊಳ್ಳುವುದು ಕಷ್ಟವೇನಲ್ಲ. ಬಿ.ಕೆ.ಪವಿತ್ರ ಪ್ರಕರಣದಲ್ಲಿ ಲಾಭ ಪಡೆದುಕೊಳ್ಳಲು ಶಿವರುದ್ರಪ್ಪ ಅವರ ಸಹಾಯ ಬೇಕಾಗಿತ್ತು. ಈಗ ಮೀಸಲಾತಿ ಪ್ರಕರಣದಲ್ಲಿ ಸರ್ಕಾರಕ್ಕೆ ಶಿವರುದ್ರಪ್ಪ ಬೇಡವಾಗಿದ್ದಾರೆ. ರಾಜಕೀಯ ಮೀಸಲಾತಿಗಾಗಿ ಹೊಡೆದಾಡುವವರಿಗೆ ಜನಾಂಗದ ಬಗ್ಗೆ ಕಾಳಜಿ ಇಲ್ಲ. 40ಸಾವಿರ ನೌಕರರಿಗೆ ಹಿಂಬಡ್ತಿಯಾಗುವುದನ್ನು ಪವಿತ್ರ ಪ್ರಕರಣದ ಮೂಲಕ ತಪ್ಪಿಸಿದ್ದು ನಾವು. ನಮ್ಮ ಹೋರಾಟ, ಕರಾರುವಕ್ ವಾದ ಮಂಡನೆಯಿಂದಲೇ ಹಿಂಬಡ್ತಿ ಹೊಂದುವ ಪರಿಶಿಷ್ಟರ ಸಂಖ್ಯೆ 3380 ಕ್ಕೆ ಇಳಿಯಿತು. ಇದನ್ನು ಈಗ ಯಾರಾದರೂ ನೆಪಿಸಿಕೊಳ್ಳುತ್ತಾರಾ” ಎಂದು ಬೇಸರ ಹೊರಹಾಕಿದರು.

ಸಿಎಂಗೆ ಮುಂದಿನ ಚುನಾವಣೆಯಲ್ಲಿ ಪೆಟ್ಟು

“ಶೇ 56 ರಷ್ಟು ಮೀಸಲಾತಿ ಉಳಿಸಿಕೊಳ್ಳಲು ಆಗದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಪೆಟ್ಟು ಬೀಳುವುದು ನಿಶ್ಚಿತ. ಮೀಸಲಾತಿ ವಿಚಾರದಲ್ಲಿ ಹೊಲೆಯ-ಮಾದಿಗ ಸಮುದಾಯಗಳನ್ನು ಕುಸ್ತಿಗೆ ಬೀಳುವಂತೆ ಮಾಡಲಾಗುತ್ತಿದೆ” ಎಂದು ಶಿವರುದ್ರಪ್ಪ ಆರೋಪಿಸಿದರು.

“ಸುಪ್ರೀಂಕೋರ್ಟ್ ಆರ್ಥಿಕ ದುರ್ಬಲ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ನೀಡಲು ಪಾಲಿಸಿದ ನಿಯಮವನ್ನೇ ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಬಳಸಬೇಕು. ಅಗತ್ಯಬಿದ್ದರೆ ಇಂದ್ರ ಸಾಹ್ನಿ ಪ್ರಕರಣದ ಆದೇಶ ಪರಿಷ್ಕರಣೆಗೂ ಸರ್ಕಾರ ಒತ್ತಡ ಹೇರಲಿ” ಎಂದು ಸಲಹೆ ನೀಡಿದರು.

“ಸಂವಿಧಾನದಲ್ಲಿ ಶೇ 50ಮೀಸಲಾತಿ ಮೀರಬಾರದು ಎಂದು ಎಲ್ಲೂ ಉಲ್ಲೇಖಿಸಿಲ್ಲ. ಕಲಂ 16(4)ರಲ್ಲಿ ಸಮರ್ಪಕ ಪ್ರಾತಿನಿಧ್ಯ ನೀಡಬೇಕೆಂದಿದೆ. ಮೀಸಲಾತಿ ನೀಡುವುದು ಆಯಾ ರಾಜ್ಯಗಳ ತೀರ್ಮಾನ. ಮೀಸಲಾತಿ ಹಾಗೂ ಮೆರಿಟ್ ನಿರ್ಧರಿಸುವ ಅಧಿಕಾರ ಸುಪ್ರೀಂಕೋರ್ಟ್‌ಗೂ ಇಲ್ಲ” ಎಂದು ಅಭಿಪ್ರಾಯಪಟ್ಟರು.

ಒಟ್ಟಾರೆ ಕಾಂಗ್ರೆಸ್ ಸರ್ಕಾರ ವಿವೇಚನಾರಹಿತ ನಿರ್ಧಾರ, ಇಚ್ಛಾಶಕ್ತಿ ಕೊರತೆಯಿಂದ ಪರಿಶಿಷ್ಟರ ಮೀಸಲಾತಿ ಅಡಕತ್ತರಿಗೆ ಸಿಲುಕುವಂತಾಗಿದೆ. ಮೀಸಲಾತಿ ಹೆಚ್ಚಳ ರಾಜಕೀಯ ಲಾಭ ಪಡೆಯುವ ಧಾವಂತದಲ್ಲಿ ಎಲ್ಲ ಸಮುದಾಯಗಳ ಉದ್ಯೋಗ ನೇಮಕಾತಿಗೆ ಸರ್ಕಾರ ಬರೆ ಎಳೆದಿದೆ.

Read More
Next Story