
ತಮ್ಮ ಆಪ್ತ ಶಾಸಕರೊಂದಿಗೆ ಭೋಜನ ಸವಿದ ಸಚಿವ ಸತೀಶ್ ಜಾರಕಿಹೊಳಿ
ಗದ್ದುಗೆ ಗುದ್ದಾಟ| ಆಪ್ತ ಶಾಸಕರೊಂದಿಗೆ ಸತೀಶ್ ಜಾರಕಿಹೊಳಿ ಭೋಜನ; ಡಿಕೆಶಿ ಬಣಕ್ಕೆ ತಿರುಗೇಟು
ಸತೀಶ್ ಜಾರಕಿಹೊಳಿ ಅವರು ಹಲವು ಶಾಸಕರೊಂದಿಗೆ ಭೋಜನ ಮಾಡುತ್ತಾ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಿ ತಮ್ಮ ಬಲ ಪ್ರದರ್ಶನ ಮಾಡುವ ಮೂಲಕ ವಿರೋಧಿಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ನಾಯಕತ್ವ ಗೊಂದಲ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮಂಗಳವಾರ ತಡರಾತ್ರಿ (ನ.25) ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರು ಬುಧವಾರ ಭೋಜನಕೂಟದ ಹೆಸರಲ್ಲಿ ತಮ್ಮ ಆಪ್ತ ಶಾಸಕರ ಜೊತೆ ಸಭೆ ನಡೆಸಿರುವುದು ಅಚ್ಚರಿ ಮೂಡಿಸಿದೆ.
ಬುಧವಾರ(ನ.26) ಮಧ್ಯಾಹ್ನ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಪ್ತ ಶಾಸಕರಾದ ಪ್ರಕಾಶ್ ಕೋಳಿವಾಡ, ವಿಶ್ವಾಸ್ ವೈದ್ಯ, ಕಂಪ್ಲಿ ಗಣೇಶ್, ಹಂಪನಗೌಡ ನಾಯಕ್, ಬಾಬಾ ಸಾಹೇಬ್ ಪಾಟೀಲ್, ಆಸೀಫ್ ಪಠಾಣ್, ಪಾವಗಡ ವೆಂಕಟೇಶ್ ಸೇರಿ ಹಲವು ಶಾಸಕರೊಂದಿಗೆ ಭೋಜನ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇದು ಸಿಎಂ ಬಣದ ಶಕ್ತಿ ಪ್ರದರ್ಶನವೇ ಎಂಬ ಪ್ರಶ್ನೆಗಳು ಎದುರಾಗಿವೆ.
ಡಿಕೆಶಿ ಭೇಟಿ ಮಾಡಿದ್ದ ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಮಂಗಳವಾರ ತಡರಾತ್ರಿ ಭೇಟಿ ಮಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರು ರಹಸ್ಯ ಚರ್ಚೆ ನಡೆಸಿದ್ದರು. ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡಲಾಗಿದೆ ಎಂದು ಉಭಯ ನಾಯಕರು ಸ್ಪಷ್ಟನೆ ನೀಡಿದ್ದರೂ ಇದು ಈ ಸಂದರ್ಭಕ್ಕೆ ಬೇರೆ ಅರ್ಥವನ್ನೇ ಕಲ್ಪಿಸಿದೆ.
ಸತೀಶ್ ಜಾರಕಿಹೊಳಿ ಅವರು ನಾವು ಹಿಂದಿನಿಂದಲೂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದೇವೆ. ಮುಂದೆಯೂ ಅವರ ಜೊತೆ ಇರಲಿದ್ದೇವೆ. ಸಂಪುಟ ಪುನಾರಚನೆ, ನಾಯಕತ್ವ ಗೊಂದಲ ಕುರಿತು ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ ಎಂದು ಹೇಳುವ ಮೂಲಕ ಸಿಎಂ ಸ್ಥಾನ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದರು.
ಈ ಹಿಂದೆಯೂ ಸಭೆಗಳು ನಡೆದಿದ್ದವು
ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಬಿಕ್ಕಟ್ಟು ಎದುರಾದಾಗಲೆಲ್ಲಾ ಸಿಎಂ ಸಿದ್ದರಾಮಯ್ಯ ಪರವಾಗಿ ಸಚಿವ ಸತೀಶ್ ಜಾರಕಿಹೊಳಿ ನಿಲ್ಲುತ್ತಿದ್ದರು. ಸಮಾನ ಮನಸ್ಕರ ಹೆಸರಲ್ಲಿ ಹಾಗೂ ದಲಿತ ಸಿಎಂ ಹೆಸರಲ್ಲಿ ಡಾ.ಜಿ. ಪರಮೇಶ್ವರ್ ಹಾಗೂ ಹೆಚ್.ಸಿ. ಮಹದೇವಪ್ಪ ಜೊತೆ ಸಭೆ ನಡೆಸುತ್ತಿದ್ದರು. ಒಬ್ಬರಿಗೆ ಒಂದೇ ಹುದ್ದೆ ಎಂಬ ಪಕ್ಷದ ಸಿದ್ದಾಂತದಂತೆ ಎಲ್ಲರಿಗೂ ಒಂದೇ ಹುದ್ದೆ ನೀಡಬೇಕು ಎಂದು ಹೆಸರನ್ನು ಉಲ್ಲೇಖಿಸದೇ ಡಿ.ಕೆ. ಶಿವಕುಮಾರ್ ವಿರುದ್ಧ ಎಐಸಿಸಿ ಅಧ್ಯಕ್ಷರ ಗಮನಕ್ಕೂ ತಂದಿದ್ದರು. ಇದೀಗ ನಾಯಕತ್ವ ಗೊಂದಲದ ನಡುವೆ ತಮ್ಮ ಆಪ್ತ ಶಾಸಕರ ಜೊತೆ ಭೋಜನಕೂಟದಲ್ಲಿ ಭಾಗವಹಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಹಿಂದೆ ಕೂಡ ಬೆಳಗಾವಿಯಲ್ಲಿ ನೂರಕ್ಕೂ ಹೆಚ್ಚು ಶಾಸಕರ ಜತೆ ಸತೀಶ್ ಜಾರಕಿಹೊಳಿ ಸಭೆ ನಡೆಸಿದ್ದರು.

