RSS should apply for parade, no interference in permission: Minister Kharge clarifies
x

ಸಚಿವ ಪ್ರಿಯಾಂಕ್‌ ಖರ್ಗೆ

ಪಥ ಸಂಚಲನ ವಿವಾದ | ದಲಿತ ಸಂಘಟನೆಗೂ, ಆರ್‌ಎಸ್‌ಎಸ್‌ಗೂ ಒಂದೇ ಮಾನದಂಡ; ಪ್ರಿಯಾಂಕ್‌ ಖರ್ಗೆ

ಆರ್‌ಎಸ್‌ಎಸ್‌ಗೆ ಪರ್ಯಾಯವಾಗಿ ದಲಿತ ಸಂಘಟನೆಗಳು ಸಹ ಪಥ ಸಂಚಲನಕ್ಕೆ ಅನುಮತಿ ಕೋರಿದ್ದು, ಇದರ ಹಿಂದೆ ಸಚಿವ ಪ್ರಿಯಾಂಕ್‌ ಖರ್ಗೆ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.


ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ನ.2 ರಂದು ನಡೆಸಲು ಉದ್ದೇಶಿಸಿರುವ ಆರ್‌ಎಸ್‌ಎಸ್ ಹಾಗೂ ದಲಿತ ಸಂಘಟನೆಗಳ ಪಥಸಂಚಲನ ವಿಚಾರ ತೀವ್ರ ವಿವಾದ ಸೃಷ್ಟಿಸುತ್ತಿದೆ.

ಆರ್‌ಎಸ್‌ಎಸ್‌ಗೆ ಪರ್ಯಾಯವಾಗಿ ದಲಿತ ಸಂಘಟನೆಗಳು ಸಹ ಪಥ ಸಂಚಲನಕ್ಕೆ ಅನುಮತಿ ಕೋರಿದ್ದು, ಇದರ ಹಿಂದೆ ಸಚಿವ ಪ್ರಿಯಾಂಕ್‌ ಖರ್ಗೆ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಆರೋಪಗಳಿಗೆ ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, "ನಾನು ಪ್ರಾಯೋಜಕ ಅಂತಲೇ ತಿಳಿದುಕೊಳ್ಳಿ. ಹಾಗಾದರೆ ಆರ್‌ಎಸ್‌ಎಸ್‌ಗೆ ಹಣ ಎಲ್ಲಿಂದ ಬರುತ್ತದೆ, ನೋಂದಣಿ ಇಲ್ಲದ ಸಂಸ್ಥೆಗಳು ಕಟ್ಟಡ ಕಟ್ಟೋಕೆ, ಬಟ್ಟೆ ಖರೀದಿಸೋಕೆ ಹಣ ಎಲ್ಲಿಂದ ಬರುತ್ತದೆ" ಎಂದು ಪ್ರಶ್ನಿಸಿದರು.

"ರಾಜ್ಯದಲ್ಲಿ ಎಲ್ಲರಿಗೂ ಒಂದೇ ಕಾನೂನು ಅನ್ವಯಿಸಬೇಕು. ಅನುಮತಿ ದೊರೆತರೆ ಯಾರು ಬೇಕಾದರೂ ಪಥ ಸಂಚಲನ ಮಾಡಲಿ, ಅನುಮತಿ ಸಿಗದಿದ್ದರೆ ಸುಮ್ಮನಿರಲಿ. ಇಲ್ಲಿ ದಲಿತ ಸಂಘಟನೆಗಳಿಗೂ, ಆರ್‌ಎಸ್‌ಎಸ್‌ಗೂ ಒಂದೇ ಮಾನದಂಡ ಅನ್ವಯವಾಗಲಿದೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

"ಚಿತ್ತಾಪುರದಲ್ಲಿ ಭೀಮ್ ಆರ್ಮಿ ಹಾಗೂ ದಲಿತ ಪ್ಯಾಂಥರ್ಸ್ ಸೇರಿ ಹಲವು ಸಂಘಟನೆಗಳು ಪಥ ಸಂಚಲನಕ್ಕೆ ಅನುಮತಿ ಕೋರಿವೆ. ಎಲ್ಲರಿಗೂ ಒಂದೇ ಮಾನದಂಡ ಅನ್ವಯಿಸಬೇಕು. ವಾತಾವರಣ ಶಾಂತವಾಗಿದ್ದರೆ ಅನುಮತಿ ಕೊಡಬಹುದು, ಇಲ್ಲದಿದ್ದರೆ ಸಾಧ್ಯವಿಲ್ಲ. ಎಲ್ಲ ಸಂಘಟನೆಗಳು ಪಥ ಸಂಚಲನದಲ್ಲಿ ಭಾಗವಹಿಸುವವರ ಸಂಖ್ಯೆ, ಮಾರ್ಗದ ವಿವರ ನೀಡಿ ಅನುಮತಿ ಪಡೆಯಬೇಕು" ಎಂದರು.

"ಆರ್‌ಎಸ್‌ಎಸ್‌ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ 250 ಕಡೆ ಪಥಸಂಚಲನ ನಡೆಸಿರುವುದಾಗಿ ಹೇಳಿದ್ದಾರೆ. ಹಾಗಾದರೆ 2001ರ ಮಾಲೆಗಾಂವ್‌ ಪ್ರಕರಣ ಏನೂ ಅಲ್ಲವೇ? ಎಂದು ಪ್ರಶ್ನಿಸಿದ ಅವರು, ಹೈಕೋರ್ಟ್ ನೀಡಿದ ನಿರ್ದೇಶನವನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ" ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಆರೋಪ ತಳ್ಳಿ ಹಾಕಿದ ಪ್ರಿಯಾಂಕ್

ಗಲಭೆಕೋರರ ಮೇಲಿನ ಪ್ರಕರಣ ಹಿಂಪಡೆಯಲು ಪ್ರಭಾವ ಬೀರಿದರೆಂಬ ಆರೋಪವನ್ನು ಪ್ರಿಯಾಂಕ್‌ ಖರ್ಗೆ ತಳ್ಳಿ ಹಾಕಿದ್ದಾರೆ. "ನಾನು ಕಾನೂನು ಬಾಹಿರವಾಗಿ ಸಲಹೆ ನೀಡಲು ಸಾಧ್ಯವಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಸಮಯದಲ್ಲಿ ಅಮಾಯಕರನ್ನೇ ಪ್ರಕರಣಗಳಲ್ಲಿ ಸೇರಿಸಲಾಗುತ್ತಿತ್ತು" ಎಂದು ತಿರುಗೇಟು ನೀಡಿದರು.

"ಚಿತ್ತಾಪುರ, ಕಲಬುರಗಿ ಮಾತ್ರವಲ್ಲ, ಇಡೀ ರಾಜ್ಯದಲ್ಲೇ ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಕೇಸ್‌ಗಳನ್ನು ವಾಪಸ್ ಪಡೆಯುವುದಾಗಿ ಹೇಳಿದ್ದರು. ಈಗ ನಾನು ಕಾನೂನಿನ ಅಡಿಯಲ್ಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ನನ್ನ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ವೈಯಕ್ತಿಕ ತೇಜೋವಧೆ ಹಾಗೂ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದೆ" ಎಂದು ಆರೋಪಿಸಿದರು.

ದಿ. ಅನಂತಕುಮಾರ್‌ ಅವರ ಪುತ್ರಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸಚಿವರು, "ಅವರ ಬಗ್ಗೆ ನನಗೆ ಹೆಚ್ಚೇನು ಗೊತ್ತಿಲ್ಲ. ಅವರು ವಕೀಲರು ಅಂತ ಕೇಳಿದ್ದೇನೆ. ರಾಜಕೀಯದಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ವಿಡಿಯೊದಲ್ಲಿ ದಿ. ಅನಂತಕುಮಾರ್ ಇದ್ದದ್ದು ಸತ್ಯ. ಫೋರೆನ್ಸಿಕ್ ವರದಿ ಇದೆ. ತನಿಖೆ ನಂತರ ಎಲ್ಲವೂ ಗೊತ್ತಾಗುತ್ತದೆ. ಅವರ ಕುಟುಂಬವನ್ನು ಬಿಜೆಪಿ ಹೇಗೆ ನಡೆಸಿಕೊಂಡರು ಎಂಬುದು ಅವರಿಗೂ ಚೆನ್ನಾಗಿ ಗೊತ್ತಿದೆ" ಎಂದು ಹೇಳಿದರು.

"ನಾವು ಮೊದಲಿನಿಂದಲೇ ಆರ್‌ಎಸ್‌ಎಸ್‌ನ ಟಾರ್ಗೆಟ್ ಆಗಿದ್ದೇವೆ. ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ಎಲ್ಲರೂ ಟಾರ್ಗೆಟ್ ಆಗಿದ್ದೇವೆ. ಇದು ಪ್ರಿಯಾಂಕ್ ಖರ್ಗೆಯ ಮೇಲೆ ಸ್ವಲ್ಪ ಹೆಚ್ಚಿದೆ" ಎಂದರು.

ಪಿಡಿಒ ಅಮಾನತು ವಿವಾದ

ಆರ್‌ಎಸ್‌ಎಸ್‌ ಪಥ ಸಂಚಲನದಲ್ಲಿ ಭಾಗವಹಿಸಿದ ಕಾರಣ ಪಿಡಿಒ ಅಮಾನತು ಮಾಡಿದ ಪ್ರಕರಣ ಇದೀಗ ವಿವಾದ ಸೃಷ್ಟಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, "ಅಮಾನತು ಮಾಡಲು ಸಕಾರಣ ಇರಬೇಕು. ಕಾನೂನು ಉಲ್ಲಂಘನೆ ಆಗಿದ್ದರೆ ಕ್ರಮ ಕೈಗೊಳ್ಳಬಹುದು. ನಾನು ಮಂತ್ರಿ ಅಂದರೆ ಯಾರನ್ನಾದರೂ ಅಮಾನತು ಮಾಡೋಕೆ ಸಾಧ್ಯವಿಲ್ಲ" ಎಂದು ಖರ್ಗೆ ಹೇಳಿದರು.

Read More
Next Story