ಚಿತ್ತಾಪುರದಲ್ಲಿ RSS ಪಥ ಸಂಚಲನ; 350 ಗಣವೇಷಧಾರಿಗಳಿಗೆ 1200 ಪೊಲೀಸರ ಭದ್ರತೆ
x
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಪಥ ಸಂಚಲನ ನಡೆಸಿದರು

ಚಿತ್ತಾಪುರದಲ್ಲಿ RSS ಪಥ ಸಂಚಲನ; 350 ಗಣವೇಷಧಾರಿಗಳಿಗೆ 1200 ಪೊಲೀಸರ ಭದ್ರತೆ

ಆರ್‌ಎಸ್ಎಸ್‌ ಪಥ ಸಂಚಲನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲು ಪೊಲೀಸ್‌ ಇಲಾಖೆ 1200ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿತ್ತು.


ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಕೊನೆಗೂ ಪಥ ಸಂಚಲನ ನಡೆಸುವಲ್ಲಿ ಆರ್‌ಎಸ್‌ಎಸ್‌ ಯಶಸ್ವಿಯಾಗಿದೆ. ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಭಾನುವಾರ ಮಧ್ಯಾಹ್ನ 3.45ಕ್ಕೆ ಗಣವೇಷಧಾರಿಗಳ ಪಥ ಸಂಚಲನ ಆರಂಭವಾಯಿತು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರು ಭಾರತಾಂಬೆ ಭಾವಚಿತ್ರ ಹಾಗೂ ಗಣವೇಷಧಾರಿಗಳ ಮೇಲೆ ಹೂವಿನ ಸುರಿಮಳೆಗೈದರು. ಷರತ್ತಿನಂತೆ 50 ಜನರ ಬ್ಯಾಂಡ್ ಮೇಳದೊಂದಿಗೆ 300 ಗಣವೇಷಧಾರಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡರು.

ಪಥ ಸಂಚಲನದ ಉದ್ದಕ್ಕೂ ಸಾರ್ವಜನಿಕರು 'ಭಾರತ ಮಾತಾಕೀ ಜೈ, ವಂದೇ ಮಾತರಂ ಹಾಗೂ ಜೈ ಶ್ರೀರಾಮ್' ಘೋಷಣೆ ಮೊಳಗಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ 1200ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಪಥ ಸಂಚಲನವು ಬಜಾಜ್ ಕಲ್ಯಾಣ ಮಂಟಪದಿಂದ, ಬಸ್ ನಿಲ್ದಾಣ, ಕನ್ಯಾ ಸರ್ಕಾರಿ ಪ್ರೌಢಶಾಲೆ ಮೂಲಕ ಸಾಗಿ ತಾಲ್ಲೂಕು ಪಂಚಾಯಿತಿ ಎದುರಿನಿಂದ ಮರಳಿ ಕಲ್ಯಾಣ ಮಂಟಪ ಬಳಿ ಪರಿಸಮಾಪ್ತಗೊಂಡಿತು.

ಚಿತ್ತಾಪುರದಲ್ಲಿ ಅ.19ರಂದು ಮಧ್ಯಾಹ್ನ 3 ಗಂಟೆಗೆ ಪಥಸಂಚಲನ ನಡೆಸಲು ಅನುಮತಿ ಕೋರಿ ಚಿತ್ತಾಪುರ ತಹಶೀಲ್ದಾರ್‌ಗೆ ಆರ್‌ಎಸ್‌ಎಸ್‌ ಮುಖಂಡರು ಮನವಿ ಸಲ್ಲಿಸಿದ್ದರು. ಆದರೆ, ಆರ್‌ಎಸ್‌ಎಸ್‌ ಅನುಮತಿ ಕೋರಿದ ಮಾರ್ಗದಲ್ಲೇ ಅದೇ ದಿನ ಭೀಮ್ ಆರ್ಮಿ ಮತ್ತು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಗಳು ಕೂಡ ಪಥಸಂಚಲನಕ್ಕೆ ಅನುಮತಿ ಕೋರಿದ್ದರಿಂದ ಪೊಲೀಸ್ ಇಲಾಖೆ ವರದಿ ಆಧರಿಸಿ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದರು.

ಈ ಮಧ್ಯೆ ರಾಜ್ಯ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಬೈಠಕ್, ಶಿಬಿರಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತು. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಮುಖಂಡರು ಹೈಕೋರ್ಟ್ ಕಲಬುರಗಿ ಪೀಠದ ಮೊರೆ ಹೋಗಿದ್ದರು.

ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. ಆದಾಗ್ಯೂ, ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಹೈಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿತ್ತು.

ಪಥ ಸಂಚಲನದಲ್ಲಿ ಕೇವಲ ಚಿತ್ತಾಪುರ ಕಂದಾಯ ವ್ಯಾಪ್ತಿಯ ಸ್ವಯಂಸೇವಕರು ಮಾತ್ರ ಭಾಗಿಯಾಗಬೇಕು. 300 ಜನ ಗಣವೇಶಧಾರಿ ಸ್ವಯಂ ಸೇವಕರು ಹಾಗೂ 50 ಜನ ಬ್ಯಾಂಡ್ ಬಾರಿಸುವರು ಸೇರಿ ಒಟ್ಟು 350 ಜನ ಭಾಗವಹಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿತ್ತು.

ಬಿಗಿ ಪೊಲೀಸ್‌ ಭದ್ರತೆ

ಆರ್‌ಎಸ್ಎಸ್‌ ಪಥ ಸಂಚಲನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲು ಪೊಲೀಸ್‌ ಇಲಾಖೆ 1200ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿತ್ತು. ಒಬ್ಬ ಎಸ್ಪಿ, 8 ಮಂದಿ ಡಿವೈಎಸ್ಪಿ, 22 ಮಂದಿ ಇನ್‌ಸ್ಪೆಕ್ಟರ್‌ಗಳು, 52 ಮಂದಿ ಪಿಎಸ್ಐಗಳು, 8 ಡಿಎಆರ್ ತುಕಡಿ, 8 ಕೆಎಸ್ಆರ್ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು.

ಪಥಸಂಚಲನ ಸಾಗುವ ಮಾರ್ಗಗಳಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪಥ ಸಂಚಲನಕ್ಕೂ ಮುನ್ನ ಆರ್‌ಎಸ್‌ಎಸ್‌ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಪೊಲೀಸರು ಶಾಂತಿ ಸಭೆ ನಡೆಸಿದ್ದರು. ಹೈಕೋರ್ಟ್ ನಿರ್ದೇಶನ, ಸರ್ಕಾರದ ಷರತ್ತು ಪಾಲಿಸಲು ಕಾರ್ಯಕರ್ತರಿಗೆ ಸೂಚಿಸಿದ್ದರು.

ಕಾನೂನು ಪಾಲನೆ ಮಾಡಿತಲ್ಲ, ಅಷ್ಟುಸಾಕು; ಖರ್ಗೆ

ಆರ್‌ಎಸ್ಎಸ್‌ ವಪಥ ಸಂಚಲನ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, 100 ವರ್ಷಗಳಲ್ಲಿ ಮೊದಲ ಬಾರಿಗೆ ಚಿತ್ತಾಪುರದಲ್ಲಿ ಕಾನೂನು ಮತ್ತು ಸಾಂವಿಧಾನಿಕ ಅನುಮತಿ ಮೇರೆಗೆ ಪಥಸಂಚಲನ ನಡೆಸಿದೆ, ಕಾನೂನು ಪಾಲನೆ ಮಾಡಿತಲ್ಲ ಎಂಬುದೇ ಸಮಾಧಾನ ಎಂದು ವ್ಯಂಗ್ಯವಾಡಿದ್ದಾರೆ.

'ನಾನು ಪಥಸಂಚಲನವನ್ನು ವಿರೋಧಿಸಿಲ್ಲ. ನಾನು ಹೇಳಿದ್ದು ಅನುಮತಿ ಪಡೆಯಬೇಕು ಎಂದಷ್ಟೇ. ಅವರಿಗೆ ಕಾನೂನು ಪಾಲನೆ ಮಾಡದಿರುವ ಅಭ್ಯಾಸವಿತ್ತು. ಈಗ ಮೊದಲ ಬಾರಿಗೆ ನಿಯಮ ಪಾಲಿಸಿದ್ದಾರೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಕಠಿಣ ಷರತ್ತು ವಿಧಿಸಲಾಗಿದೆ. ಅವರು ಷರತ್ತುಗಳನ್ನು ಪಾಲಿಸದಿದ್ದರೆ, ಅವರು ಕಾನೂನಿನ ಪ್ರಕಾರ ಶಿಕ್ಷೆ ಎದುರಿಸಬೇಕಾಗುತ್ತದೆ. ಪಥ ಸಂಚಲನ ಮಾಡುವುದಾಗಿ ಹೇಳಿದ್ದ ದಿನದಂದೇ ಮಾಡಲು ಸಾಧ್ಯವಾಗಿಲ್ಲ, ಅಶೋಕ್‌, ವಿಜಯೇಂದ್ರ ಅವರು ನಾವು ಪಥ ಸಂಚಲನದಲ್ಲಿ ಭಾಗವಹಿಸುತ್ತೇವೆ ಎಂದಿದ್ದರು. ಈಗ ಅವರೆಲ್ಲ ಎಲ್ಲಿ ಹೋದರು ಎಂದು ಛೇಡಿಸಿದ್ದಾರೆ.

Read More
Next Story