Royal hospitality for prisoners in jail; BJP Yuva Morcha lays siege to CMs house
x

ರಾಜ್ಯ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; ಬಿಜೆಪಿ ಯುವ ಮೋರ್ಚಾದಿಂದ ಸಿಎಂ ಮನೆಗೆ ಮುತ್ತಿಗೆ

ಸರ್ಕಾರದ ಕುಮ್ಮಕ್ಕು ಇಲ್ಲದಿದ್ದರೆ ಈ ರೀತಿಯಾಗಲು ಸಾಧ್ಯವಿಲ್ಲ. ಇಸ್ಲಾಮಿನ ಮೂಲಭೂತವಾದಿಗಳಿಗೆ ಈ ರೀತಿ ಮಾಡಿದ್ದು ದೇಶದ್ರೋಹದ ಕೆಲಸ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು


Click the Play button to hear this message in audio format

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಮಾಹಿತಿ ಹಾಗೂ ವಿಡಿಯೋ ತುಣುಕುಗಳು ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವುದನ್ನು ಖಂಡಿಸಿ ಯುವ ಮೋರ್ಚಾ ವತಿಯಿಂದ ಸೋಮವಾರ (ನ.10) ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಪರಪ್ಪನ ಅಗ್ರಹಾರ ಜೈಲು ಮನರಂಜನಾ ಹಾಗೂ ನೈಟ್ ಕ್ಲಬ್ ಆಗಿ ಪರಿವರ್ತನೆಗೊಂಡಿದೆ. ಭಯೋತ್ಪಾದಕರು, ಐಎಸ್‍ಐ ಏಜೆಂಟರು, ಮುಸ್ಲಿಂ ಮೂಲಭೂತವಾದಿಗಳೆಲ್ಲರಿಗೂ ಕ್ಲಬ್ ಆಗಿದೆ. ಇಂಥ ದೇಶದ್ರೋಹಿಗಳಿಗೆ ಟಿ.ವಿ, ಮೊಬೈಲ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಎಲ್ಲವೂ ಬಹಳ ಸರಾಗವಾಗಿ ನಡೆಯುತ್ತಿದೆ" ಎಂದು ಆಕ್ಷೇಪಿಸಿದರು.

ಇಷ್ಟೇಲ್ಲಾ ನಡೆದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ದೇಶದ್ರೋಹಿಗಳಿಗೆ ಐಷಾರಾಮಿ ವ್ಯವಸ್ಥೆಗಳನ್ನು ಜೈಲಲ್ಲಿ ಮಾಡಲಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಜೈಲಿನ ವ್ಯವಸ್ಥೆಯೂ ಭ್ರಷ್ಟಾಚಾರದಲ್ಲೇ ಮುಳುಗಿಹೋಗಿದೆ. ಸರ್ಕಾರದ ಕುಮ್ಮಕ್ಕು ಇಲ್ಲದಿದ್ದರೆ ಈ ರೀತಿಯಾಗಲು ಸಾಧ್ಯವಿಲ್ಲ. ಇಸ್ಲಾಮಿನ ಮೂಲಭೂತವಾದಿಗಳಿಗೆ ಈ ರೀತಿ ಮಾಡಿದ್ದು ದೇಶದ್ರೋಹದ ಕೆಲಸ ಎಂದು ಆರೋಪಿಸಿದರು.

ಜೈಲಿನಲ್ಲಿ ಆಗಿರುವ ಈ ಅವ್ಯವಸ್ಥೆಗೆ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ನೇರ ಹೊಣೆಗಾರರು. ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕಗ್ಗೊಲೆ ಆಗುತ್ತಿದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿಯವರು ಹೊರದೇಶಕ್ಕೆ ಹೋದಾಗ ಭಾಷಣ ಮಾಡಿ ಅಪಮಾನ ಮಾಡುತ್ತಾರೆ. ಅದರ ಭಾಗವಾಗಿ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಹಾಗೂ ದೇಶದ್ರೋಹಿಗಳಿಗೆ ಐಷಾರಾಮಿ ವ್ಯವಸ್ಥೆಯನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಜೈಲಿನಲ್ಲೇ ಕಲ್ಪಿಸಿದಂತಿದೆ ಎಂದು ತಿಳಿಸಿದರು.

ಪೊಲೀಸ್ ಠಾಣೆ ಕಾಂಗ್ರೆಸ್ ಕಚೇರಿ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹಾಟ್‍ಲೈನ್ ಮೂಲಕ ಈ ಜೈಲಿನಿಂದ ಪಾಕಿಸ್ತಾನ, ಅಪಘಾನಿಸ್ತಾನಕ್ಕೆ ಕರೆಗಳು ಹೋಗುತ್ತಿವೆ. ಸರ್ಕಾರ ಎರಡು ವರ್ಷದಿಂದ ಏನು ಮಾಡುತ್ತಿತ್ತು ? ಗುಪ್ತಚರ ವಿಭಾಗ ಎರಡು ವರ್ಷದಿಂದ ನಿಷ್ಕ್ರಿಯವಾಗಿದೆಯೇ ? ಪೊಲೀಸ್ ಠಾಣೆಗಳನ್ನು ಇವರು ಕಾಂಗ್ರೆಸ್ ಕಚೇರಿ ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಆಕ್ಷೇಪಿಸಿದರು.

ಪ್ರತಿಭಟನಾ ನಿರತ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಜೈಲಿನಲ್ಲೇ ಸೌಲಭ್ಯ ನೀಡುವ ಸರ್ಕಾರ

ಭಯೋತ್ಪಾದಕರಿಗೆ ಪರಪ್ಪನ ಅಗ್ರಹಾರದ ಜೈಲಿನಲ್ಲೇ ಎಲ್ಲ ಅವಶ್ಯ ಸೌಲಭ್ಯ ನೀಡುವ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಂತಿದೆ ಆದ್ದರಿಂದಲೇ ಸರಣಿ ಕೊಲೆಹಂತಕರು ಹಾಗೂ ಭಯೋತ್ಪಾದಕರು ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

Read More
Next Story