
ಆತ್ಮಹತ್ಯೆಗೆ ಯತ್ನಿಸಿದ ಮೊಹಮ್ಮದ್ ಸಿದ್ದಿಕಿ ಅಲಿಯಾಸ್ 'ಬರ್ನ್ ಸಿದ್ದಿಕಿ'
ಪತ್ನಿ ದೂರು ನೀಡಲು ಬಂದಿದ್ದಕ್ಕೆ ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡ ರೌಡಿಶೀಟರ್!
ನನ್ನ ಪತ್ನಿ ನನಗೆ ಮೋಸ ಮಾಡಿದ್ದಾಳೆ" ಎಂದು ಆರೋಪಿಸಿ, ತಾನು ತಂದಿದ್ದ ಬಾಟಲಿಯಲ್ಲಿದ್ದ ಪೆಟ್ರೋಲನ್ನು ತನ್ನ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ತನ್ನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದನ್ನು ತಿಳಿದು, ರೌಡಿಶೀಟರ್‌ವೊಬ್ಬ ಠಾಣೆಯ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಪಿಗೆಹಳ್ಳಿಯಲ್ಲಿ ನಡೆದಿದೆ. ಕೆ.ಜಿ. ಹಳ್ಳಿ ಠಾಣೆಯ ರೌಡಿಶೀಟರ್ ಮೊಹಮ್ಮದ್ ಸಿದ್ದಿಕಿ ಅಲಿಯಾಸ್ 'ಬರ್ನ್ ಸಿದ್ದಿಕಿ' ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಗುರುವಾರ ರಾತ್ರಿ, ಸಿದ್ದಿಕಿ ಪತ್ನಿ ಕೌಟುಂಬಿಕ ಕಲಹದ ಬಗ್ಗೆ ದೂರು ನೀಡಲು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಿದ್ದಿಕಿ, "ನನ್ನ ಪತ್ನಿ ನನಗೆ ಮೋಸ ಮಾಡಿದ್ದಾಳೆ" ಎಂದು ಆರೋಪಿಸಿ, ತಾನು ತಂದಿದ್ದ ಬಾಟಲಿಯಲ್ಲಿದ್ದ ಪೆಟ್ರೋಲನ್ನು ತನ್ನ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಠಾಣೆಯಲ್ಲಿದ್ದ ಪೊಲೀಸರು ಬೆಂಕಿಯನ್ನು ನಂದಿಸಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಸಿದ್ದಿಕಿಯ ದೇಹ ಶೇ. 10ರಷ್ಟು ಸುಟ್ಟಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಕರ್ತವ್ಯನಿರತ ಪೊಲೀಸರಿಗೆ ಬೆದರಿಕೆ ಒಡ್ಡಿದ ಮತ್ತು ಆತ್ಮಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಸಂಪಿಗೆಹಳ್ಳಿ ಪೊಲೀಸರು ಮೊಹಮ್ಮದ್ ಸಿದ್ದಿಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದು, ಈತನ ವಿರುದ್ಧ ಈ ಹಿಂದೆ ಕೊಲೆ, ಕೊಲೆ ಯತ್ನ ಹಾಗೂ ದರೋಡೆಯಂತಹ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

