
ಸಾಂದರ್ಭಿಕ ಚಿತ್ರ
ಹಾಡಹಗಲೇ ಲೇಡಿಸ್ ಪಿಜಿಗೆ ನುಗ್ಗಿ ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ
ಆರೋಪಿಯು ಬೆಡ್ ಮೇಲಿದ್ದ 2 ಮೊಬೈಲ್ಗಳು ತೆಗೆದುಕೊಂಡು ಪರಾರಿ ಆಗಿದ್ದಾನೆ. ಹಾಡಹಗಲೇ ಇಂತಹ ಕೃತ್ಯ ನಡೆದಿರುವುದು ಪಿಜಿಯಲ್ಲಿ ವಾಸಿಸುವ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ.
ಮಹಿಳಾ ಪಿಜಿ ಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ನ್ಯಾಯಾಂಗ ಬಡಾವಣೆಯಲ್ಲಿ ನಡೆದಿದೆ.
ಬೆಸ್ಕಾಂನಲ್ಲಿಅಧಿಕಾರಿಯಾಗಿರುವ ಸಂತ್ರಸ್ತ ಮಹಿಳೆ, 15 ದಿನಗಳ ಹಿಂದೆ ಶಿವಾಸ್ ಲೇಡಿಸ್ ಪಿಜಿಗೆ ಸೇರಿಕೊಂಡಿದ್ದರು. ಆಗಸ್ಟ್ 11ರಂದು ಮಧ್ಯಾಹ್ನ ಕೆಲಸ ಮುಗಿಸಿ 3ನೇ ಮಹಡಿಯಲ್ಲಿರುವ ತಮ್ಮ ಕೊಠಡಿಗೆ ಬಂದಿದ್ದರು. ಈ ವೇಳೆ ದಿಢೀರ್ ಆಗಂತುಕನೊಬ್ಬ ಆಗಮಿಸಿ ಚಾಕು ತೋರಿಸಿ ಬೆದರಿಸಿದ್ದ. ಖಾಸಗಿ ಭಾಗದ ಅಂಗಾಂಗಗಳನ್ನು ಮುಟ್ಟಿ ದೌರ್ಜನ್ಯವೆಸಗಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಆಕೆ ಕಿರುಚಾಡಿದಾಗ ಬೆಡ್ ಮೇಲಿದ್ದ 2 ಮೊಬೈಲ್ಗಳು ತೆಗೆದುಕೊಂಡು ಪರಾರಿ ಆಗಿದ್ದಾನೆ.
ಹಾಡಹಗಲೇ ಇಂತಹ ಕೃತ್ಯ ನಡೆದಿರುವುದು ಪಿಜಿಯಲ್ಲಿ ವಾಸಿಸುವ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ. ಮಹಿಳೆ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇತ್ತೀಚೆಗೆ ಸೋಲದೇವನಹಳ್ಳಿಯಲ್ಲಿ ಪಿಜಿ ಮಾಲೀಕ ಅಶ್ರಫ್ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೋಯ್ದು, ಅತ್ಯಾಚಾರ ಎಸಗಿದ್ದ. ವಿದ್ಯಾರ್ಥಿನಿ ಕೆಲ ದಿನಗಳ ಹಿಂದಷ್ಟೇ ಪಿಜಿಗೆ ಸೇರಿಕೊಂಡಿದ್ದಳು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.