
ಜಿ.ಪರಮೇಶ್ವರ್
ಒಳ ಮೀಸಲಾತಿ ಹಂಚಿಕೆಗೆ ಜಾತಿ ಗಣತಿ ದತ್ತಾಂಶ ಬಳಕೆ; ಜಿ.ಪರಮೇಶ್ವರ್
ನ್ಯಾ. ನಾಗಮೋಹನ್ ದಾಸ್ ಅವರಿಗೆ ಡೇಟಾ ಸಂಗ್ರಹಿಸಲು ಆದೇಶ ಮಾಡಲಾಗಿದೆ. ಆ ಡೇಟಾವನ್ನು ಜಾತಿ ಗಣತಿ ವರದಿಯೊಂದಿಗೆ ಹೋಲಿಕೆ ಮಾಡುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಒಳ ಮೀಸಲಾತಿ ಹಂಚಿಕೆಗೆ ಜಾತಿ ಗಣತಿ ದತ್ತಾಂಶ ಬಳಸುವ ಬಗ್ಗೆ ಪರಿಶೀಲನೆ ನಡಸಲಾಗುವುದು ಎಂದು ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, "ಈಗಾಗಲೇ ನ್ಯಾ. ನಾಗಮೋಹನ್ ದಾಸ್ ಅವರಿಗೆ ಡೇಟಾ ಸಂಗ್ರಹಿಸಲು ಆದೇಶ ನೀಡಲಾಗಿದೆ. ಆ ಡೇಟಾವನ್ನು ಜಾತಿ ಗಣತಿ ವರದಿಯೊಂದಿಗೆ ಹೋಲಿಕೆ ಮಾಡುತ್ತಾರೆ. ಜಾತಿ ಗಣತಿ ವರದಿ ಬಿಡುಗಡೆಯಾಗುವ ಮೊದಲೇ ಡೇಟಾ ಸಂಗ್ರಹಿಸಲು ಆದೇಶ ನೀಡಿದ್ದೇವೆ. ಈಗ ವಾಪಸ್ ಪಡೆಯಲು ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಯೊಬ್ಬರ ತೀರ್ಮಾನವೂ ಆಗುವುದಿಲ್ಲ
"ಜಾತಿ ಗಣತಿ ವರದಿ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಸಚಿವರಿಗೆ ಹೇಳಿದ್ದಾರೆ. ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಿದ್ದರು. ಚರ್ಚೆ ಮುಂದುವರಿದಿದ್ದು, ಅವರವರ ಅಭಿಪ್ರಾಯ ತಿಳಿಸಲಿದ್ದಾರೆ. ಎಲ್ಲರ ಅಭಿಪ್ರಾಯ ಕೇಳಿದ ಬಳಿಕ ಸರ್ಕಾರ ಅಂತಿಮ ತೀರ್ಮಾನ ತಗೆದುಕೊಳ್ಳಲಿದೆ. ಇದು ಒಬ್ಬರ ತೀರ್ಮಾನ ಆಗುವುದಿಲ್ಲ. ಕ್ಯಾಬಿನೆಟ್ ತೀರ್ಮಾನ ಆಗುತ್ತದೆ. ಇದು ಮುಖ್ಯಮಂತ್ರಿಯೊಬ್ಬರ ತೀರ್ಮಾನವೂ ಆಗುವುದಿಲ್ಲ" ಎಂದು ಅವರು ತಿಳಿಸಿದರು.
ಅಂತಿಮವಾಗಿ ಸರ್ಕಾರ ಒಪ್ಪಬೇಕು
"ಪ್ರತಿ ಪಕ್ಷಗಳ ಟೀಕೆಗಳನ್ನು ಗಮನಿಸಿದ್ದೇವೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲ ಉದ್ದೇಶವಿರುವುದು ಯಾವ ಸಮುದಾಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ತಿಳಿಸುವುದು. ಸ್ವಾಭಾವಿಕವಾಗಿ ಯಾವ ಸಮುದಾಯ ಎಷ್ಟೆಷ್ಟು ಜನಸಂಖ್ಯೆ ಇದೆ ಎಂಬ ಅಂಕಿ - ಅಂಶಗಳನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಅದರ ಮೇಲೆ ಚರ್ಚೆಯಾಗುತ್ತಿದೆ. ಅಂತಿಮವಾಗಿ ಸರ್ಕಾರ ಒಪ್ಪಬೇಕು. ಮುಂದೆ ಯೋಜನೆಗಳನ್ನು ಮಾಡಬೇಕು" ಎಂದು ಹೇಳಿದರು.
ಕೆಲ ಸಮುದಾಯದವರು ತಮ್ಮ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ವರದಿಯನ್ನು ನಾನು ಓದಿದ್ದೇನೆ. ವೈಜ್ಞಾನಿಕ ದತ್ತಾಂಶವನ್ನು ಹೊಂದಿರುವ ವರದಿಯಾಗಿದೆ. ಒಂದು ಕುಟುಂಬದಲ್ಲಿ ಬೋರ್‌ವೆಲ್ ಹಾಕಿಸಿದ್ದರೆ, ಅದರಲ್ಲಿ ನೀರು ಬಂದಿದೆಯೇ? ನೀರು ಬಂದಿಲ್ಲವೇ? ನೀರು ಸಿಕ್ಕಿಲ್ಲವೇ? ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಸಮೀಕ್ಷೆ ವೇಳೆ ಮನೆಗೆ ಹೋದಾಗ ಮನೆಯವರಿಂದ ಸಹಿ ಮಾಡಿಸಿಕೊಂಡಿದ್ದಾರೆ. ಇದರ ಮೇಲುಸ್ತುವಾರಿಗಳು ಸಹಿ ಹಾಕಿರುವ ಡೇಟಾ ನಮ್ಮ ಬಳಿ ಇದೆ. ಈ ಎಲ್ಲ ಡೇಟಾ ವರದಿಯಲ್ಲಿದೆ. 1.37 ಲಕ್ಷ ಕುಟುಂಬಗಳ ಮನೆಗೆ ಭೇಟಿ ಕೊಟ್ಟಿದ್ದಾರೆ. ಅಷ್ಟು ಡೇಟಾ ಇದೆ. ಇದನ್ನೆಲ್ಲ ಮರದ ಕೆಳಗೆ ಕುಳಿತು ಬರೆದುಕೊಂಡು ಬರಲು ಆಗುವುದಿಲ್ಲ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.