
ದೆಹಲಿಯಲ್ಲಿ ಪಟಾಕಿಗೆ ಹೇರಿದ್ದ ನಿರ್ಬಂಧ ಸಡಿಲಿಕೆ; ಹಸಿರು ಪಟಾಕಿ ಬಳಕೆಗೆ ಸುಪ್ರೀಂ ಆದೇಶ
ಅ.18 ರಿಂದ 21 ರವರೆಗೆ ಮಾತ್ರ ಹಸಿರು ಪಟಾಕಿ ಬಳಕೆಗೆ ಅವಕಾಶ ನೀಡಲಾಗಿದೆ. ದೀಪಾವಳಿಯಂದು ಬೆಳಿಗ್ಗೆ 6 ರಿಂದ 7 ಗಂಟೆ, ಸಂಜೆ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪಟಾಕಿ ಬಳಕೆಗೆ ಹೇರಿದ್ದ ಕಠಿಣ ನಿಯಮಗಳನ್ನು ಸುಪ್ರೀಂಕೋರ್ಟ್ ಸರಳೀಕರಣಗೊಳಿಸಿದೆ.
ಅ.18 ರಿಂದ 21 ರವರೆಗೆ ಮಾತ್ರ ಹಸಿರು ಪಟಾಕಿ ಬಳಕೆಗೆ ಅವಕಾಶ ನೀಡಲಾಗಿದೆ. ದೀಪಾವಳಿಯಂದು ಬೆಳಿಗ್ಗೆ 6 ರಿಂದ 7 ಗಂಟೆ, ಸಂಜೆ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಹಸಿರು ಪಟಾಕಿಗಳು ಕಡಿಮೆ ಪ್ರಮಾಣದ ಮಾಲಿನ್ಯ ಉಂಟು ಮಾಡುವಂತೆ ತಯಾರಿಸಲಾಗಿದೆ. ಕಡಿಮೆ ಕಚ್ಚಾ ವಸ್ತುಗಳು ಹಾಗೂ ಧೂಳು ನಿಯಂತ್ರಕ ವಸ್ತುಗಳನ್ನು ಬಳಸಲಾಗಿದೆ. ಮಧ್ಯಮ ಪ್ರಮಾಣದಲ್ಲಿ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡುವುದು ಸಮತೋಲಿತ ದೃಷ್ಟಿಕೋನ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಕಾನೂನುಬದ್ಧವಾಗಿ ಕ್ಯೂಆರ್ ಕೋಡ್ ಹೊಂದಿರುವ ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ನೋಡಿಕೊಳ್ಳಲು ಗಸ್ತು ತಂಡ ನಿಗಾ ವಹಿಸಬೇಕು. ದೆಹಲಿ-ಎನ್ಸಿಆರ್ ಪ್ರದೇಶಕ್ಕೆ ಹೊರಗಿನಿಂದ ಯಾವುದೇ ಪಟಾಕಿ ತರಲು ಅನುಮತಿ ನೀಡಬಾರದು. ನಕಲಿ ಅಥವಾ ಅನುಮತಿಯಿಲ್ಲದ ಪಟಾಕಿಗಳು ಪತ್ತೆಯಾದರೆ ಲೈಸೆನ್ಸ್ ರದ್ದುಪಡಿಸಬೇಕು ಎಂದು ಸೂಚಿಸಿದೆ.
ಹೊರಗಿನಿಂದ ಪಟಾಕಿಗಳನ್ನು ಕಳ್ಳಸಾಗಣೆ ಮೂಲಕ ತಂದು ಬಳಸಿದರೆ ಹೆಚ್ಚಿನ ಹಾನಿ ಉಂಟು ಮಾಡಲಿದೆ. ನಾವು ಪರಿಸರದೊಂದಿಗೆ ರಾಜಿ ಆಗದೆ, ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಸಿರು ಪಟಾಕಿ ಬಳಕೆಗೆ ಒತ್ತು ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಅಭಿಪ್ರಾಯಪಟ್ಟರು.
ದೀಪಾವಳಿ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗಾಳಿಯ ಗುಣಮಟ್ಟ ಲೆಕ್ಕ ಹಾಕಿ, ವಿವರವಾದ ವರದಿ ಸಲ್ಲಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ.