ಸಂಪನ್ಮೂಲ ಕ್ರೋಢೀಕರಣ, ಮೇಲ್ವಿಚಾರಣೆಗೆ ಪ್ರತ್ಯೇಕ ಆರ್ಥಿಕ ನೀತಿ ವಿಭಾಗ ರಚನೆಗೆ ಶಿಫಾರಸು
x
ಸಂಪನ್ಮೂಲ ಕ್ರೂಢೀಕರಣ ಸಮಿತಿಯು ಸಿಎಂ ಸಿದ್ದರಾಮಯ್ಯ ಅವರಿಗೆ ತನ್ನ ಅಂತಿಮ ವರದಿ ಸಲ್ಲಿಸಿತು,

ಸಂಪನ್ಮೂಲ ಕ್ರೋಢೀಕರಣ, ಮೇಲ್ವಿಚಾರಣೆಗೆ ಪ್ರತ್ಯೇಕ ಆರ್ಥಿಕ ನೀತಿ ವಿಭಾಗ ರಚನೆಗೆ ಶಿಫಾರಸು

ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬೆಳವಣಿಗೆ ಉತ್ತೇಜಿಸಲು ಅಗತ್ಯ ಅನುದಾನ ಮೀಸಲಿಡಬೇಕು. ಪರಿಣಾಮಕಾರಿಯಾಗಿ ವೆಚ್ಚ ನಿರ್ವಹಿಸುವ ಅಗತ್ಯವೂ ಇದೆ ಎಂದು ವರದಿ ಹೇಳಿದೆ.


ತೆರಿಗೆಯೇತರ ಆದಾಯ ಮತ್ತು ಆಸ್ತಿಯ ಹಣ ಗಳಿಕೆ ಮೇಲ್ವಿಚಾರಣೆಗಾಗಿ ಹಣಕಾಸು ಇಲಾಖೆಯಲ್ಲೇ ಪ್ರತ್ಯೇಕ ಆರ್ಥಿಕ ನೀತಿ ವಿಭಾಗ ರಚಿಸುವಂತೆ ಸಂಪನ್ಮೂಲ ಕ್ರೂಢೀಕರಣ ಸಮಿತಿ (ಆರ್‌ಎಂಸಿ ) ಶಿಫಾರಸು ಮಾಡಿದೆ.

ನಿವೃತ್ತ ಐಎಎಸ್ ಅಧಿಕಾರಿ ಕೃಷ್ಣನ್ ನೇತೃತ್ವದ ಆರ್‌ಎಂಸಿ ಸಮಿತಿ ಗುರುವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ಅಂತಿಮ ವರದಿಯಲ್ಲಿ ಈ ಶಿಫಾರಸು ಮಾಡಿದೆ.

ತೆರಿಗೆ ಸುಧಾರಣೆಯಲ್ಲಿ ಕೆಲ ಪ್ರಮುಖ ರಾಜಸ್ವ ಮೂಲಗಳ ಮೇಲಿನ ಅತಿಯಾದ ಅವಲಂಬನೆ ಕಡಿಮೆ ಮಾಡುವುದು, ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವುದು. ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಲು ಹರಾಜು ಆಧಾರಿತ ಡಿಜಿಟಲ್ ಸನ್ನದು ನೀಡುವುದು. ಸಾರ್ವಜನಿಕ ಸೇವೆಗಳಲ್ಲಿ ಬಳಕೆದಾರ ಶುಲ್ಕಗಳನ್ನು ತರ್ಕಬದ್ಧಗೊಳಿಸುವುದು, ಪ್ರಮಾಣಾತ್ಮಕ ಬಿಲ್ಲಿಂಗ್ ವ್ಯವಸ್ಥೆಗೆ ಹಂತ ಹಂತವಾಗಿ ಸ್ಥಳಾಂತರಗೊಂಡು, ಹಣ ದುಬ್ಬರಕ್ಕೆ ಅನುಗುಣವಾಗಿ ಬಳಕೆದಾರರ ಶುಲ್ಕಗಳನ್ನು ಸ್ವಯಂಚಾಲಿತವಾಗಿ ಪರಿಷ್ಕರಿಸುವ ವ್ಯವಸ್ಥೆ ರೂಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ವೈಜ್ಞಾನಿಕ ಆಸ್ತಿ ಮೌಲ್ಯಮಾಪನ, ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಅಡಿ ಗುತ್ತಿಗೆಯನ್ನು ವಿಸ್ತರಿಸುವುದು, ನಗರ ಭೂ ಸ್ವತ್ತುಗಳನ್ನು ನಗದೀಕರಿಸುವ ಮೂಲಕ ಆದಾಯದ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಹೇಳಿದೆ.

ಸಿಬ್ಬಂದಿ ಕಾರ್ಯಕ್ಷಮತೆ ಹೆಚ್ಚಿಸುವ ಮೂಲಕ ಇಲಾಖಾ ಸಾಮರ್ಥ್ಯವನ್ನು ಹೆಚ್ಚಿಸುವುದು, ಆಸ್ತಿ ಸಮೀಕ್ಷೆಗಳನ್ನು ನಿಯತಕಾಲಿಕವಾಗಿ ಮಾಡಬೇಕು ಎಂದು ಕೃಷ್ಣನ್ ಸಮಿತಿ ಸೂಚಿಸಿದೆ.

ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬೆಳವಣಿಗೆ ಉತ್ತೇಜಿಸಲು ಅಗತ್ಯ ಅನುದಾನ ಮೀಸಲಿಡಬೇಕು. ಪರಿಣಾಮಕಾರಿಯಾಗಿ ವೆಚ್ಚ ನಿರ್ವಹಿಸುವ ಅಗತ್ಯವೂ ಇದೆ ಎಂದು ವರದಿ ಹೇಳಿದೆ.

ರಾಜ್ಯದ ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಉತ್ತೇಜಿಸಲು ರಾಜ್ಯದ ರಾಜಸ್ವ ಸಂಗ್ರಹಣೆಯಲ್ಲಿ ವ್ಯವಸ್ಥಿತ ಮತ್ತು ಕ್ರಮಬದ್ಧ ಸುಧಾರಣೆಗಳು ಅತ್ಯಾವಶ್ಯಕವೆಂದು ತಿಳಿಸಿದೆ.

ಸರ್ಕಾರದ ಮುಂದಿನ ಸವಾಲುಗಳೇನು?

ತೆರಿಗೆಯೇತರ ಆದಾಯ ಕಡಿಮೆಯಿರುವುದು, ವಿಶೇಷವಾಗಿ ಬಳಕೆದಾರರ ಶುಲ್ಕಗಳು ಹಾಗೂ ಸರ್ಕಾರಿ ಸ್ವತ್ತುಗಳಿಂದ, ಗುತ್ತಿಗೆ ಮತ್ತು ನಗದೀಕರಣದಿಂದ ಹೆಚ್ಚಿನ ರಾಜಸ್ವ ಸೃಜಿಸಲು ವಿಫುಲ ಅವಕಾಶಗಳಿವೆ. ಆಸ್ತಿ ದತ್ತಾಂಶಗಳ ಉತ್ತಮ ನಿರ್ವಹಣೆ ಮತ್ತು ಸರ್ಕಾರಿ ಆಸ್ತಿಗಳ ವ್ಯವಸ್ಥಿತ ಸಮೀಕ್ಷೆಯ ಅಗತ್ಯವಿರುತ್ತದೆ. ಮಾರ್ಗಸೂಚಿ ದರಗಳು ಮತ್ತು ಆಸ್ತಿ ತೆರಿಗೆಗಳ ಪರಿಷ್ಕರಣೆಯಿಂದಾಗಿ ಸ್ಥಳೀಯ ಸಂಸ್ಥೆಗಳು ರಾಜಸ್ವ ಸೃಜಿಸಬಹುದಾದ ಅವಕಾಶವಿರುತ್ತದೆ. ಹಾಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಸಮಿತಿಯು ಹೇಳಿದೆ.

ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಸದೃಢಗೊಳಿಸುವ ಸಲುವಾಗಿ ಆಗಸ್ಟ್ 2024ರಲ್ಲಿ ಸಂಪನ್ಮೂಲ ಕ್ರೋಢೀಕರಣ ಸಮಿತಿ ರಚಿಸಲಾಗಿತ್ತು.

ಆರ್ಥಿಕ ಬೆಳವಣಿಗೆ ಹೇಗಿದೆ?

ಕರ್ನಾಟಕ ರಾಜ್ಯವು ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಅತ್ಯುತ್ತಮ ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ. ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಗಳಲ್ಲಿ ಸ್ವಂತ ತೆರಿಗೆ ರಾಜಸ್ವದ ಪಾಲು ಶೇ.60-70 ರಷ್ಟಿದ್ದು, ರಾಜ್ಯದ ಪ್ರಮುಖ ಆದಾಯದ ಮೂಲವಾಗಿದೆ.

ವಾಣಿಜ್ಯ ತೆರಿಗೆ, ರಾಜ್ಯ ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಮೋಟಾರು ವಾಹನ ತೆರಿಗೆಗಳು ರಾಜ್ಯದ ಸ್ವಂತ ತೆರಿಗೆ ರಾಜಸ್ವದ ಪ್ರಮುಖ ಸ್ವೀಕೃತಿಗಳಾಗಿವೆ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

Read More
Next Story