Draft UGC Regulations | ಯುಜಿಸಿ ಕರಡು ನಿಯಮಾವಳಿ ವಿರುದ್ಧ ನಿರ್ಣಯ ಅಂಗೀಕಾರ
x

Draft UGC Regulations | ಯುಜಿಸಿ ಕರಡು ನಿಯಮಾವಳಿ ವಿರುದ್ಧ ನಿರ್ಣಯ ಅಂಗೀಕಾರ

ಕರಡು ಯುಜಿಸಿ ನಿಯಮ ಉಲ್ಲಂಘನೆ ಪರಿಣಾಮಗಳಿಗೆ ಸಂಬಂಧಿಸಿದ ನಿಬಂಧನೆಗಳು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಮರುಪರಿಶೀಲಿಸುವ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.


ಕೇಂದ್ರದ ಶಿಕ್ಷಣ ಸಚಿವಾಲಯ ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಅಂತಿಮಗೊಳಿಸಿರುವ ಯುಜಿಸಿ ಕರಡು ನಿಯಮಗಳ ವಿರುದ್ಧ ರಾಜ್ಯ ಸರ್ಕಾರ ಶುಕ್ರವಾರ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

ಕರಡು ಯುಜಿಸಿ ನಿಯಮ ಉಲ್ಲಂಘನೆ ಪರಿಣಾಮಗಳಿಗೆ ಸಂಬಂಧಿಸಿದ ನಿಬಂಧನೆಗಳು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಮರುಪರಿಶೀಲಿಸುವ ಅಗತ್ಯವಿದೆ. ಯುಜಿಸಿ ನಿಯಮ ಪಾಲಿಸದಿದ್ದರೆ ದಂಡನಾತ್ಮಕ ಕ್ರಮ ತೆಗೆದುಕೊಳ್ಳುವ ಧೋರಣೆ ಸರ್ವಾಧಿಕಾರಿ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ.

ಗುತ್ತಿಗೆ ಆಧಾರದ ಮೇಲೆ ನಡೆಯುವ ನೇಮಕಾತಿಯ ಮಾರ್ಗಸೂಚಿ ಅಂತಿಮಗೊಳಿಸುವ ಮೊದಲು ಅತಿಥಿ ಪ್ರಾಧ್ಯಾಪಕರು, ಸಂದರ್ಶಕ ಪ್ರಾಧ್ಯಾಪಕರು, ತರಬೇತಿನಿರತ ಪ್ರಾಧ್ಯಾಪಕರು ಹಾಗೂ ಗೌರವ ಪ್ರಾಧ್ಯಾಪಕರಿಗೆ ಸಂಬಂಧಿಸಿದ ನಿಬಂಧನೆಗಳಿಗೆ ಹೆಚ್ಚಿನ ಸ್ಪಷ್ಟತೆ ಬೇಕಾಗಿದೆ. ಆದ್ದರಿಂದ ಯುಜಿಸಿ ಕರಡು ನಿಯಮಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.

ಪ್ರಸ್ತಾಪಿತ ಯುಜಿಸಿ ಕರಡು ನಿಯಮಗಳು ಕರ್ನಾಟಕದ ಚೈತನ್ಯಶೀಲ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲಿವೆ. ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಪರಿಣಾಮ ಬೀರುತ್ತವೆ. ಹಾಗಾಗಿ ಕರಡು ನಿಯಮಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.. ಸಿಧಾಕರ್‌ ಅವರು ವಿಧಾನಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

ಕರಡು ನಿಯಮ ರೂಪಿಸುವಾಗ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ರಾಜ್ಯಗಳೊಂದಿಗೆ ಸಹಕಾರಾತ್ಮಕ ಮನೋಭಾವ, ಸಹಯೋಗ ಮತ್ತು ಸಮಾಲೋಚನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಪದವಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಕಲಿಕಾ ಫಲಿತಾಂಶಗಳನ್ನು ಅವಲೋಕಿಸಿ ನಿಯಮಗಳನ್ನು ರೂಪಿಸಬೇಕು. ಆದರೆ, ಈಗ ಅಂತಿಮಗೊಳಿಸಿರುವ ಕರಡು ನಿಯಮಗಳು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಈ ನಿಬಂಧನೆಗಳು ಶೈಕ್ಷಣಿಕ ಸಮಗ್ರತೆ, ಸ್ವಾಯತ್ತತೆ ಮತ್ತು ರಾಜ್ಯ ವಿಶ್ವವಿದ್ಯಾಲಯಗಳ ಅಂತರ್ಗತ ಅಭಿವೃದ್ಧಿಗೆ ಗಂಭೀರ ಸವಾಲು ಒಡ್ಡುತ್ತಿವೆ ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ.

Read More
Next Story