Mysore MUDA case | 50:50 ಅನುಪಾತದ ಎಲ್ಲಾ ನಿವೇಶನ ಹಿಂಪಡೆಯಲು ನಿರ್ಣಯ
x

Mysore MUDA case | 50:50 ಅನುಪಾತದ ಎಲ್ಲಾ ನಿವೇಶನ ಹಿಂಪಡೆಯಲು ನಿರ್ಣಯ

ಮುಡಾದಿಂದ 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ ಎಲ್ಲ ನಿವೇಶನಗಳನ್ನು ಹಿಂಪಡೆಯಲು ಗುರುವಾರ ಮೈಸೂರಿನಲ್ಲಿ ನಡೆದ ಮುಡಾ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು.


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯ ಅಕ್ರಮ ಬೆಳಕಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಮುಡಾ ಸಾಮಾನ್ಯ ಸಭೆ ನಡೆಯಿತು.

ಮುಡಾ ಪ್ರಭಾರ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಟ್ಟು 172 ವಿಷಯಗಳನ್ನು ಮಂಡಿಸಿದ್ದು, ಈ ಪೈಕಿ 167 ವಿಷಯಗಳು ಬಡಾವಣೆ ನಕ್ಷೆಗೆ ಸಂಬಂಧಿಸಿದ್ದವು. ಮುಡಾ ಹಗರಣದ ಕುರಿತು ಸಭೆಯಲ್ಲಿ ಗಹನ ಚರ್ಚೆ ನಡೆಯಿತು.

ಪ್ರಸ್ತುತ ಮುಡಾಗೆ ಅಂಟಿಕೊಂಡಿರುವ ಹಗರಣದ ಕಳಂಕ ತೊಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪಕ್ಷಾತೀತವಾಗಿ ಸದಸ್ಯರು ದನಿ ಎತ್ತಿದರು. ಮುಡಾದಿಂದ 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ ಎಲ್ಲ ನಿವೇಶನಗಳನ್ನು ಹಿಂಪಡೆಯಲು ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು.

ಇನ್ನು ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿ ಸರ್ಕಾರ ನೇಮಿಸಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ನೇತೃತ್ವದ ಏಕವ್ಯಕ್ತಿ ಆಯೋಗದ ತನಿಖಾ ವರದಿ ಕುರಿತಂತೆಯೂ ಚರ್ಚೆ ನಡೆಸಲಾಯಿತು.

ಮುಡಾ ಸಾಮಾನ್ಯ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಡಾ ಸದಸ್ಯ ಹಾಗೂ ಶಾಸಕ ಜಿ.ಟಿ.ದೇವೇಗೌಡ, ಮುಡಾದಿಂದ 50:50 ಅನುಪಾತದಲ್ಲಿ ನೀಡಿರುವ ನಿವೇಶನಗಳ ಕುರಿತು ಲೋಕಾಯುಕ್ತ ಪೊಲೀಸರು, ಜಾರಿ ನಿರ್ದೇಶನಾಲಯ, ಪಿ.ಎನ್.ದೇಸಾಯಿ ಆಯೋಗ ತನಿಖೆ ಮಾಡುತ್ತಿದೆ. ಇದರಿಂದ ಮುಡಾಗೆ ಕಳಂಕ ಅಂಟಿದೆ. ಈ ಕಳಂಕ ತೊಳೆಯಲು 50:50 ಅನುಪಾತದಲ್ಲಿ ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನು ವಾಪಸ್ ಪಡೆಯಬೇಕು. ಕಾನೂನಾತ್ಮಕವಾಗಿ ಇರುವವರಿಗೆ ಮಾತ್ರ ನಿವೇಶನ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿದರು.

ಪಿ.ಎನ್‌. ದೇಸಾಯಿ ಆಯೋಗದ ತನಿಖಾ ವರದಿ ಕೈಸೇರಿದ ಬಳಿಕ ಮುಡಾದಿಂದ ಹಂಚಿಕೆ ಮಾಡಲಾಗಿರುವ 50:50 ಅನುಪಾತದ ನಿವೇಶನ ಹಿಂಪಡೆಯಬೇಕು ಎಂಬ ಕುರಿತು ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಪತ್ರ

ಕಾಂಗ್ರೆಸ್ ಶಾಸಕ ಕೆ.ಹರೀಶ್‌ ಗೌಡ ಮಾತನಾಡಿ, 50:50 ಅನುಪಾತದಡಿ ನೀಡಿರುವ ನಿವೇಶನಗಳ ಜಪ್ತಿಗೆ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದ್ದೇವೆ. ದೇಸಾಯಿ ಆಯೋಗದ ವರದಿ ಬಳಿಕ ಕ್ರಮ ತೆಗೆದುಕೊಳ್ಳುವುದಾಗಿ ಅಧ್ಯಕ್ಷರು ಹೇಳಿದ್ದಾರೆ. ಮುಡಾ ಸ್ವಚ್ಛವಾಗಬೇಕು ಎಂಬುವುದೇ ಎಲ್ಲಾ ಸದಸ್ಯರ ಅಭಿಪ್ರಾಯ. 2020ರಿಂದ 50:50 ಅನುಪಾತದಡಿ ನಿವೇಶನ ಹಂಚಿಕೆ ಮಾಡಲಾಗಿದೆ. ಕೆಲವೆಡೆ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಈ ಎಲ್ಲಾ ದಾಖಲೆಗಳೊಂದಿಗೆ ಸಭೆಯಲ್ಲಿ ಮಾತನಾಡಿದ್ದೇನೆ. ಕಳೆದ ಬಾರಿ ನಡೆದ ಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗಿತ್ತು. ಸೂಕ್ತ ದಾಖಲೀಕರಣ ಮಾಡದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ. ಅಲ್ಲದೇ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ಟಿ.ಎಸ್‌. ಶ್ರೀವತ್ಸ, ವಿಧಾನಸ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಮುಡಾ ಆಯುಕ್ತ ಕೆ.ರಘುನಂದನ್‌ ಸೇರಿದಂತೆ ಎಲ್ಲ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

50:50 ಅನುಪಾತದಲ್ಲಿ ನೀಡಿರುವ ನಿವೇಶನ ಹಿಂಪಡೆಯುವಂತೆ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್‌. ಶ್ರೀವತ್ಸ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಇದೇ ಪತ್ರದ ಆಧಾರದ ಮೇಲೆ 50:50 ಅನುಪಾತದ ಎಲ್ಲ ನಿವೇಶನಗಳನ್ನು ವಾಪಸ್‌ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಅವರು ಲಿಖಿತ ಸೂಚನೆ ನೀಡಿದ್ದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 2020 ರಿಂದ 2024ರ ಅವಧಿಯಲ್ಲಿ 50:50 ಅನುಪಾತದಲ್ಲಿ ಸುಮಾರು 1,500ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಿದೆ. ಈಗ ಅಷ್ಟೂ ನಿವೇಶನಗಳನ್ನು ವಾಪಸ್ ಪಡೆಯಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

Read More
Next Story