
ವಸತಿ ನಿಲಯ ಶಾಲೆಗಳಲ್ಲಿ ಕೆಲವು ಕಡೆ 'ಮೊಬೈಲ್ ಕಾಯಿಲೆ', ಕವಾಸಕಿ ರೋಗ, ಡ್ರಗ್ಸ್ ಚಟ!
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ತನ್ನ್ನವರದಿಯಲ್ಲಿ ಈ ವಿವರಗಳನ್ನು ನೀಡಿದೆ. ಇತ್ರೀಚೆಗೆ ವಿಧಾನಮಂಡಲ ಉಭಯ ಸದನದಲ್ಲಿ ಈ ವರದಿಯನ್ನು ಮಂಡಿಸಲಾಗಿದೆ.
ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಇತ್ತೀಚಿನ ದಿನದಲ್ಲಿ ಮೊಬೈಲ್ ನೋಡುವುದು ಹೆಚ್ಚಾಗಿರುವುದರಿಂದ ಕಣ್ಣಿನ ಕಾಯಿಲೆ ಕಾಡುತ್ತಿದೆ.
ಹೀಗಾಗಿ ಕಣ್ಣಿನ ಪರೀಕ್ಷೆ ಸೇರಿದಂತೆ ಆರೋಗ್ಯ ತಪಾಸಣೆಯನ್ನು ಕಾಲಕಾಲಕ್ಕೆ ನಡೆಸಬೇಕು ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಹೇಳಿದೆ.
ಉಭಯ ಸದನದಲ್ಲಿ ವರದಿಯನ್ನು ಮಂಡಿಸಲಾಗಿದ್ದು, ಪ್ರತಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿ ಸುಮಾರು 150-200 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ಅವರಿಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ತಿಂಗಳಿಗೊಮ್ಮೆ ಅಥವಾ 15 ದಿನಗಳಿಗೊಮ್ಮೆ ಆರೋಗ್ಯ ತಪಾಸಣೆ ಸೌಲಭ್ಯ ಒದಗಿಸಬೇಕು. ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಇತ್ತೀಚಿನ ದಿನದಲ್ಲಿ 'ಮೊಬೈಲ್ ನೋಡುವಂತಹ ಕಾಯಿಲೆ' ಬಂದಿದೆ. ಇದರಿಂದ ಮಕ್ಕಳ ಕಣ್ಣಿಗೆ ಬಹಳ ಸಮಸ್ಯೆಯಾಗುತ್ತಿದೆ. ಹೀಗಾಗಿ ಕಡ್ಡಾಯವಾಗಿ ಮಕ್ಕಳ ಕಣ್ಣಿನ ಪರೀಕ್ಷೆ ಮಾಡಿಸುವಂತಹ ಕಾರ್ಯಕ್ರಮ ಮಾಡಿದರೆ ಉಪಯೋಗವಾಗುತ್ತದೆ ಎಂದು ಸಲಹೆ ನೀಡಿದೆ.
ಕವಾಸಕಿ ಕಾಯಿಲೆ
ಏಪ್ರಿಲ್, ಮೇ, ಜೂನ್ ಮತ್ತು ಜುಲೈ ಈ ನಾಲ್ಕು ತಿಂಗಳಲ್ಲಿ ಆಕಸ್ಮಿಕವಾಗಿ ಕಾಯಿಲೆಗಳು ಹೆಚ್ಚು ಕಾಣಿಸಿಕೊಳ್ಳುತ್ತದೆ. ಕವಾಸಕಿ (Kawasaki disease- ಕವಾಸಕಿ ಕಾಯಿಲೆಯು ಮಕ್ಕಳಲ್ಲಿ ಕಂಡುಬರುವ ಒಂದು ಅಪರೂಪದ, ಆದರೆ ಗಂಭೀರವಾದ ರೋಗವಾಗಿದ್ದು, ದೇಹದಾದ್ಯಂತ ರಕ್ತನಾಳಗಳಲ್ಲಿ ಉರಿಯೂತ ಉಂಟುಮಾಡುತ್ತದೆ ) ಕಾಯಿಲೆಯಿಂದ ಉರಿಯೂತ ಸಮಸ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಐವಿಜಿ ಮಾತ್ರೆಗಳನ್ನು ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ. ಮಕ್ಕಳಿಗೆ ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಚರ್ಮರೋಗ ತಜ್ಞರಿಂದ ತಪಾಸಣೆ, ಚರ್ಮದ ಜತೆಗೆ ಔಷಧಿಗಳನ್ನು ಒದಗಿಸುವಂತೆ ಸಮಿತಿಯು ತಿಳಿಸಿದೆ.
ಕ್ರೈಸ್‌ನ ವಸತಿ ಶಾಲೆಗಳ ಮಕ್ಕಳಿಗೆ ನಿಯಮಿತವಾಗಿ ವೈದ್ಯಕೀಯ ತಪಾಸಣೆಗಳನ್ನು ಮೂರು ತಿಂಗಳಿಗೊಮ್ಮೆ ಮಾಡಿಸಬೇಕು. ಆರೋಗ್ಯ ಇಲಾಖೆಯು ಒಂದು ಮೊಬೈಲ್ ತಂಡವನ್ನು ಮಾಡಿಕೊಂಡು ಎಲ್ಲಾ ವಸತಿ ನಿಲಯಗಳಿಗೆ ನಿರ್ದಿಷ್ಟ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಬೇಕು. ಹಾಸ್ಟೆಲ್ ವಾರ್ಡನ್‌ಗಳಿಗೂ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು. ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಒಂದು ಬಾರಿಯಾದರೂ ಅಲ್ಟ್ರಾಸೌಂಡ್ ಸ್ಕಾನಿಂಗ್ ಮಾಡಬೇಕು ಎಂದು ಸಲಹೆ ನೀಡುತ್ತದೆ. ಯಾಕೆಂದರೆ ಹಲವಾರು ಬಾರಿ ಕಿಡ್ನಿಗಳು ಒಂದಕ್ಕೊಂದು ಅಂಟಿಕೊಂಡಿರುವುದು ಕೆಲವು ಕಡೆ ಕಿಡ್ನಿ ಸಮಸ್ಯೆಯಾಗಿರುವುದು ಕಂಡು ಕಂಡಿಬಂದಿದೆ. ಈ ಹಿನ್ನೆಲೆಯಲ್ಲಿ ಸಮಿತಿಯು ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ಒಂದು ಬಾರಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡುವಂತೆ ಶಿಫಾರಸ್ಸು ಮಾಡಿದೆ.
ವಿದ್ಯಾರ್ಥಿಗಳು ಡ್ರಗ್ಸ್ ಆಡಿಕ್ಟ್:
ಅಲ್ಪಸಂಖ್ಯಾತ ಇಲಾಖೆಯ ವಸತಿ ನಿಲಯಗಳ ಕೆಲವು ಭಾಗಗಳಲ್ಲಿ ವಿದ್ಯಾರ್ಥಿಗಳು ಡ್ರಗ್ಸ್ ಆಡಿಕ್ಟ್ ಆಗಿರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಯಾವ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ಡ್ರಗ್ಸ್ ಆಡಿಕ್ಟ್ ಆಗಿದ್ದರೋ ಅಂತಹವರಿಗೆ ಮನೋವೈಜ್ಞಾನಿಕ ಸಮಾಲೋಚನೆ ನಡೆಸಬೇಕಿದೆ. ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿ ಮನೋ ವೈದ್ಯರಿಂದ ಸೂಕ್ತ ತಪಾಸಣೆ ನಡೆಸಿ ಸರಿಪಡಿಸಬೇಕು. ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದೆ.
ಕೆಪಿಎಸ್ ಶಾಲೆ ಅಥವಾ ಬೇರೆ ಶಾಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು:
ರಾಜ್ಯದಲ್ಲಿ 15-20 ಮಕ್ಕಳಿರುವ ಶಾಲೆಗಳನ್ನು ನಿರ್ವಹಣೆ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಇವರಿಗೆ ಸರ್ಕಾರದಿಂದ ವಾಹನ ವ್ಯವಸ್ಥೆ ಮಾಡಿ, ಆ ಮಕ್ಕಳನ್ನು ಕೆಪಿಎಸ್ ಶಾಲೆ ಅಥವಾ ಬೇರೆ ಶಾಲೆಗಳಿಗೆ ಕಳಿಸುವ ವ್ಯವಸ್ಥೆ ಮಾಡಬೇಕು ಅಥವಾ ವಾಹನ ವ್ಯವಸ್ಥೆ ಮಾಡಿದರೆ ಮಕ್ಕಳು ಖಂಡಿತವಾಗಿ ಶಾಲೆ ಬಿಡುವುದಿಲ್ಲ. ಇದರಿಂದ ಸರ್ಕಾರಕ್ಕೆ ಹಣವು ಉಳಿತಾಯವಾಗಲಿದೆ. ಇದರ ಜತೆಗೆ ಸರ್ಕಾರಕ್ಕೂ ಅನುಕೂಲವಾಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಹೀಗಾಗಿ ಒಂದನೇ ತರಗತಿಯಿಂದಲೇ ಆಂಗ್ಲಭಾಷೆಯನ್ನು ಮಕ್ಕಳಿಗೆ ಹೇಳಿಕೊಡಬೇಕು. ಖಾಸಗಿ ಶಾಲೆಗಳಲ್ಲಿರುವ ಕೆಲವೊಂದು ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಶೇ.೧೦೦ರಷ್ಟು ದಾಖಲಾತಿಯಾಗಲಿದೆ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜ್ಯದಲ್ಲಿರುವ ಪ್ರಾಥಮಿಕ ಹಂತದ ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದ ಕೊಠಡಿಗಳ ಕೊರತೆ ಎದ್ದು ಕಾಣುತ್ತದೆ. ಗ್ರಾಮಮಟ್ಟದಲ್ಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಹಲವಾರು ಕೊಠಡಿಗಳು ಬೀಳುವ ಹಂತದಲ್ಲಿದ್ದು, ಶಿಥಿಲಾವಸ್ಥೆಯಲ್ಲಿ ಇರುತ್ತದೆ. ಈ ರೀತಿಯಲ್ಲಿರುವ ಶಾಲೆಗಳ ಪಟ್ಟಿಯನ್ನು ತರಿಸಿಕೊಂಡು ಆದ್ಯತೆಯ ಮೇರೆಗೆ ಪ್ರಾಥಮಿಕ ಶಾಲಾ ಹಂತದ ಕೊಠಡಿಗಳಿಗೆ ದುರಸ್ತಿ ಕಾರ್ಯ ಮಾಡಬೇಕು. ಆದ್ಯತೆಯ ಮೇರೆಗೆ ಸರ್ಕಾರದಿಂದ ವಿಶೇಷ ಅನುದಾನವನ್ನು ಪಡೆದುಕೊಂಡು ಕೊಠಡಿ ದುರಸ್ತಿ ಮತ್ತು ಹೊಸ ಕೊಠಡಿಗಳನ್ನು ನಿರ್ಮಿಸಬೇಕು ಎಂದು ಶಿಫಾರಸ್ಸು ಮಾಡಿದೆ.
ಸರ್ಕಾರಿ ಶಾಲೆಗಳಲ್ಲಿರುವ ಶೌಚಾಲಯಗಳ ಬಗ್ಗೆ ವಿಶೇಷ ಗಮನಹರಿಸಬೇಕು. ಪಟ್ಟಣದಲ್ಲಿ ಪುರಸಭೆಯಿಂದ ಅನುದಾನ ಕೊಡುವುದಕ್ಕೆ ಅವಕಾಶ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಗ್ರಾಮಗಳಲ್ಲಿನ ಶಾಲೆಗಳಿಗೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯಿಂದ ಇಂತಿಷ್ಟು ಹಣವನ್ನು ಕೊಡಲೇಬೇಕೆಂದು ಇದೆ. ಆದ್ದರಿಂದ ನಗರ ಪ್ರದೇಶದಲ್ಲಿರುವ ಶಾಲೆಗಳಿಗೆ ಶೈಕ್ಷಣಿಕ ಸಲುವಾಗಿ ಇಂತಿಷ್ಟು ಹಣವನ್ನು ಮೀಸಲಿಡಬೇಕು. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಹೇಗೆ ಇದೆಯೋ, ಅದೇ ರೀತಿ ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ನಗರಸಭೆಗಳಲ್ಲಿಯೂ ಆಗಬೇಕು. ನಗರಗಳಲ್ಲಿ ಸಿಎಸ್‌ಆರ್ ನಿಧಿ ಕೂಡ ಇರುತ್ತದೆ. ಈ ಒಂದು ಅಂಶವನ್ನು ಗಮನದಲ್ಲಿ ಇರಿಸಿಕೊಂಡು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಮತ್ತು ಶುಚಿತ್ವಕ್ಕಾಗಿ ನಗರ ಪಟ್ಟಣಪ್ರದೇಶದ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಸ್ಥಳೀಯ ನಗರಸಭೆ, ಪುರಸಭೆಗಳಿಂದ ಇಂತಿಷ್ಟು ಹಣವನ್ನು ಶಾಲೆಯ ಅಭಿವೃದ್ಧಿಗೆ ಒದಗಿಸಬೇಕು ಎಂದು ತಿಳಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಹಿಂದುಳಿದ ವರ್ಗಳ ಮೀಸಲಾತಿಯಲ್ಲಿ ಯಾವುದೇ ಹುದ್ದೆಗಳನ್ನು ಖಾಲಿ ಇರದಂತೆ ಭರ್ತಿ ಮಾಡಬೇಕು. ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರಂಥಾಲಯ ಇಲಾಖೆಯನ್ನು ಮಾಹಿತಿ ಕೇಂದ್ರವಾಗಿ ಪರಿವರ್ತಿಸಿ, ರಾಜ್ಯದ ಗ್ರಾಮೀಣ ಭಾಗದಲ್ಲಿ ಇರುವ ಪ್ರತಿಭಾವಂತ ಯುವಕ/ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಪುಸ್ತಕಗಳನ್ನು ಒದಗಿಸಬೇಕು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವಂತಹ ಎಲ್ಲಾ ರೀತಿಯ ಪರಿಕರಗಳನ್ನು ಉಚಿತವಾಗಿ ಒದಗಿಸಬೇಕು ಎಂದು ಹೇಳಿದೆ.