Residential schools to be built in all districts of the state for the education of children of construction workers
x

ಸಾಂದರ್ಭಿಕ ಚಿತ್ರ

ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಸತಿ ಶಾಲೆ ನಿರ್ಮಾಣ

ನಾಗಮಂಗಲ ತಾಲೂಕಿಗೆ ನೂತನ ಶ್ರಮಿಕ ವಸತಿ ಶಾಲೆ ಮಂಜೂರಾಗಿದ್ದು, ಉತ್ತಮ ಗುಣಮಟ್ಟದೊಂದಿಗೆ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಸೂಚಿಸಿದರು.


ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 1,125.25 ಕೋಟಿ ರೂ. ವೆಚ್ಚದಲ್ಲಿ 6 ರಿಂದ 12ನೇ ತರಗತಿವರೆಗೆ ವಸತಿ ಶಾಲೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಸೋಮವಾರ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಗಮಂಗಲ ತಾಲೂಕಿಗೆ ನೂತನ ಶ್ರಮಿಕ ವಸತಿ ಶಾಲೆ ಮಂಜೂರಾಗಿದ್ದು ಉತ್ತಮ ಗುಣಮಟ್ಟದೊಂದಿಗೆ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಾಗಮಂಗಲದ ಬೀರೇಶ್ವರ ಗ್ರಾಮದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು ಇದಕ್ಕಾಗಿ 35.75 ಕೋಟಿ ರೂ. ಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 31 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ, ಒಂದು ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ, ಮೂರು ಕೋಟಿ ರೂ. ವೆಚ್ಚದಲ್ಲಿ ಪೀಠೋಪಕರಣ, 75 ಲಕ್ಷ ರೂ. ವೆಚ್ಚದಲ್ಲಿ ಲ್ಯಾಬ್ ಉಪಕರಣಗಳ ಪೂರೈಕೆ ಮಾಡಲಾಗುವುದು ಎಂದರು.

"ಶಾಲೆಗಳಲ್ಲಿ ಪ್ರತಿ ತರಗತಿಗೆ ಒಂದರಂತೆ ಏಳು ತರಗತಿ ಕೊಠಡಿಗಳು, ಐದು ಪ್ರಯೋಗಾಲಯಗಳು, ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳ ಕೊಠಡಿ, ಕಚೇರಿ ಹಾಗೂ ಸಿಬ್ಬಂದಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳು, ಭೋಜನಾಲಯ ಹಾಗೂ ಅಡುಗೆ ಮನೆ. ಶಿಕ್ಷಕರಿಗೆ ಪ್ರತ್ಯೇಕ ವಸತಿ ಗೃಹ, ಪ್ರಯೋಗಾಲಯಕ್ಕೆ ಉಪಕರಣಗಳು, ಪೀಠೋಪಕರಣಗಳ ಸಮೇತ ಸಂಪೂರ್ಣ ಮೂಲಭೂತ ಸೌಕರ್ಯ ಒದಗಿಸಲಾಗುವುದು" ಎಂದು ತಿಳಿಸಿದರು.

ಪ್ರತಿ ಶಾಲೆಯು 7,720.56 ಚ.ಮೀ ವಿಸ್ತೀರ್ಣ ಹೊಂದಿರಲಿದೆ. ಮಂಡ್ಯ ಹಾಗೂ ನಾಗಮಂಗಲ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದ್ದು ಎಲ್ಲಾ ವಲಯಗಳಲ್ಲೂ ಸರ್ವತೋಮುಖ ಅಭಿವೃದ್ಧಿ ಮಾಡಲಾಗುತ್ತಿದೆ. ನಮ್ಮದು ಅಭಿವೃದ್ಧಿ ಕೆಲಸವಾದರೆ ವಿರೋಧಿಗಳದ್ದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಎಂದು ಪ್ರತಿಪಕ್ಷಗಳ ಕುರಿತು ವ್ಯಂಗ್ಯವಾಡಿದರು.

Read More
Next Story