
ಪ್ರತಿಭಟನೆ ನಡೆಸುತ್ತಿರುವ ವಸತಿ ಶಾಲೆ ವಿದ್ಯಾರ್ಥಿಗಳು
ಸಿಎಂ ತವರಲ್ಲೇ ಜಾತಿ ತಾರತಮ್ಯ ಆರೋಪ; ವಸತಿ ಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಟನೆ
6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ಇರುವ ವಸತಿ ಶಾಲೆ 580 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್ ನಲ್ಲಿ ಮೂಲ ಸೌಕರ್ಯ ಇಲ್ಲ, ಸ್ವಚ್ಛತೆಯೂ ಇಲ್ಲ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರದ ವ್ಯಾಪ್ತಿಗೆ ಬರುವ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮೂಲ ಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಶಿಕ್ಷಕರು ಜಾತಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸೋಮವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ಇರುವ ವಸತಿ ಶಾಲೆಯಲ್ಲಿ 580 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್ ಮೆನು ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ಸ್ವಚ್ಛತೆ ಇಲ್ಲವೇ ಇಲ್ಲ. ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಹಳಸಿದ ಅನ್ನ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಪ್ರಾಂಶುಪಾಲೆ ವಸಂತಕುಮಾರಿ, ನಿಲಯ ಪಾಲಕ ಮಹದೇವಪ್ಪ ಹಾಗೂ ಅತಿಥಿ ಶಿಕ್ಷಕ ಗುರುಸ್ವಾಮಿ ವಿರುದ್ಧ ವಿದ್ಯಾರ್ಥಿಗಳು ಜಾತಿ ಕಿರುಕುಳ ಆರೋಪ ಮಾಡಿದ್ದು, ಕೂಡಲೇ ಇವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಧಿಕ್ಕಾರ ಕೂಗಿದರು.
ವಿದ್ಯಾರ್ಥಿಗಳ ಪ್ರತಿಭಟನೆಗೆ ಪೋಷಕರು ಕೂಡ ಸಾಥ್ ನೀಡಿದರು. ಪ್ರಾಂಶುಪಾಲೆ ಹಾಗೂ ಶಿಕ್ಷಕರನ್ನು ಅಮಾನತು ಮಾಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಸಿಎಂ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಪ್ರತಿನಿಧಿಸುವ ಮೈಸೂರಿನಲ್ಲೇ ವಸತಿ ನಿಲಯಗಳ ಅವ್ಯವಸ್ಥೆ ಈ ರೀತಿಯಾದರೆ, ಬೇರೆ ವಸತಿ ಶಾಲೆಗಳ ಸ್ಥಿತಿ ಹೇಗಿರಬೇಕು ಎಂದು ಪೋಷಕರು ಪ್ರಶ್ನಿಸಿದ್ದಾರೆ.