Reservation Row| ಮೀಸಲಾತಿಗೆ ಇಲ್ಲವಾದ ʼರಕ್ಷಾಕವಚʼ;  9ನೇ ಶೆಡ್ಯೂಲ್‌ ಗೊಂದಲಕ್ಕೆ ಯಾವಾಗ ಮುಕ್ತಿ?
x

Reservation Row| ಮೀಸಲಾತಿಗೆ ಇಲ್ಲವಾದ ʼರಕ್ಷಾಕವಚʼ; 9ನೇ ಶೆಡ್ಯೂಲ್‌ ಗೊಂದಲಕ್ಕೆ ಯಾವಾಗ ಮುಕ್ತಿ?

ಕರ್ನಾಟಕದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಶೇ. 56ಕ್ಕೆ ಏರಿಸಿದ ಕಾಯ್ದೆಗೆ ಹೈಕೋರ್ಟ್ ತಡೆ ನೀಡಿದ್ದೇಕೆ? ತಮಿಳುನಾಡು ಮಾದರಿಯ 9ನೇ ಶೆಡ್ಯೂಲ್ ಸೇರ್ಪಡೆ ಸಾಧ್ಯವೇ? ಇಲ್ಲಿದೆ ವರದಿ.


Click the Play button to hear this message in audio format

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳ ವಿಚಾರವು ಕಾನೂನು ಹೋರಾಟವಾಗಿ ಉಳಿಯದೇ ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಗಳ ಸತ್ವ ಪರೀಕ್ಷೆಯಾಗಿ ಬದಲಾಗಿದೆ.

ಬಿಜೆಪಿ ಸರ್ಕಾರ 2022ರಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15 ರಿಂದ 17 ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3 ರಿಂದ 7 ಕ್ಕೆ ಏರಿಸುವ ಐತಿಹಾಸಿಕ ತೀರ್ಮಾನ ಕೈಗೊಂಡಿತ್ತು. ಮೀಸಲಾತಿ ಹೆಚ್ಚಳಕ್ಕೆ ಕಾನೂನಿನ ರಕ್ಷಣೆ ನೀಡಲು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆ 2022 ಜಾರಿಗೆ ತಂದಿತ್ತು. ಆದರೆ, ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್‌ ತಡೆ ನೀಡಿದ ಕಾರಣ ಮೀಸಲಾತಿ ಬಿಕ್ಕಟ್ಟು ಸೃಷ್ಟಿಯಾಗಿದೆ.

ಮೀಸಲಾತಿಯನ್ನು ಕಾನೂನು ಸಂಕಷ್ಟಕ್ಕೆ ಸಿಲುಕಿಸಿದ ಸರ್ಕಾರಗಳ ಧೋರಣೆ ವಿರುದ್ಧ ಇದೀಗ ಸಂಘಟನೆಗಳು, ಜಾತಿ ಸಮುದಾಯಗಳು ಸಿಡಿದೆದ್ದಿವೆ. ರಾಜಕೀಯ ಪಕ್ಷಗಳಿಗೆ ಮತ್ತೆ ಸೋಲಿನ ರುಚಿ ತೋರಿಸಲು ಸಜ್ಜಾಗಿವೆ.

ʼ9ನೇ ಶೆಡ್ಯೂಲ್‌ʼ ರಕ್ಷಾ ಕವಚ ಹೇಗೆ?

ದೇಶದಲ್ಲಿ ಮೀಸಲಾತಿ ಪ್ರಮಾಣವು ಶೇ 50 ಕ್ಕೆ 1992ರ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಿತಿ ಹೇರಿ ತೀರ್ಪು ನೀಡಿತ್ತು. ಈಗ ರಾಜ್ಯದಲ್ಲಿ ಮೀಸಲಾತಿ ಶೇ56 ಕ್ಕೆ ತಲುಪಿದ ಹಿನ್ನೆಲೆ ಹೈಕೋರ್ಟ್ ತಡೆ ನೀಡಿದೆ. ಶೇ 50ರ ಮೀಸಲಾತಿಯಲ್ಲೇ ನೇಮಕಾತಿ ನಡೆಸಲು ಸೂಚಿಸಿರುವುದು ಸರ್ಕಾರದ ನಡೆಗೆ ಹಿನ್ನಡೆ ತಂದಿದೆ.

ಜನಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಳ ಅನಿವಾರ್ಯ ಎಂಬ ಸರ್ಕಾರದ ವಾದಕ್ಕೆ ಮನ್ನಣೆ ಸಿಗದಂತಾಗಿದೆ. ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್‌(ಅನುಸೂಚಿ)ಗೆ ಸೇರಿಸಿದ್ದರೆ ಇಂತಹ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಏಕೆಂದರೆ 9ನೇ ಶೆಡ್ಯೂಲ್‌ಗೆ ಸೇರುವ ಕಾಯ್ದೆಗಳು ನ್ಯಾಯಾಂಗದ ಪರಿಶೀಲನೆಯಿಂದ ರಕ್ಷಣೆ ಪಡೆಯಲಿವೆ.

ತಮಿಳುನಾಡಿನಲ್ಲಿ ಶೇ 69 ಮೀಸಲಾತಿಯನ್ನು 9ನೇ ಶೆಡ್ಯೂಲ್‌ಗೆ ಸೇರಿಸಿದ್ದರಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ. ಇದೇ ಮಾದರಿಯಲ್ಲಿ ಕರ್ನಾಟಕದ ಮೀಸಲಾತಿಯನ್ನು ಸಂವಿಧಾನದ ಅನುಚ್ಛೇದ 15 ಮತ್ತು 16ಕ್ಕೆ ತಿದ್ದುಪಡಿ ತರುವ ಮೂಲಕ 9ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂಬುದು ಕರ್ನಾಟಕದ ಆಗ್ರಹವಾಗಿದೆ.

ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು 9ನೇ ಶೆಡ್ಯೂಲ್‌ಗೆ ಸೇರಿಸಬೇಕೆಂದು ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಿದರೂ ಇದುವರೆಗೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಹಾಗಾಗಿ, ಜಾತಿ ಸಂಘಟನೆಗಳು ಹೋರಾಟದ ಹಾದಿ ತುಳಿಯಲು ಸಜ್ಜಾಗಿವೆ.

“ನಾವು 35 ವರ್ಷಗಳಿಂದ ರಾಜಕೀಯ ಬೆದರಿಕೆಯ ಜೊತೆ ಜೊತೆಗೆ ಹೋರಾಟ ಮಾಡಿದೆವು. ಈಗ ಎಲ್ಲವೂ ಸರಿ ಹೋಯಿತು ಎನ್ನುವಷ್ಟರಲ್ಲಿ ತಾಂತ್ರಿಕ ಸಮಸ್ಯೆ ಮುಂದಿಟ್ಟು ಕೋರ್ಟ್ನತ್ತ ಬೊಟ್ಟು ಮಾಡಲಾಗುತ್ತಿದೆ” ಎಂದು ಮಾದಿಗ ಸಮುದಾಯಗಳ ಸ್ವಾಭಿಮಾನಿ ಒಕ್ಕೂಟದ ರಾಜ್ಯ ಸಂಚಾಲಕ ಕೇಶವಮೂರ್ತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

“ರಾಜ್ಯ ಸರ್ಕಾರವು ಒಳ ಮೀಸಲಾತಿ ಮುಂದಿಟ್ಟುಕೊಂಡು ವೋಟು ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಇದು ಮುಂದುವರಿದರೆ ಮತ್ತೆ ರಾಜಕೀಯ ಬೆದರಿಕೆಯ ಅಸ್ತ್ರವನ್ನೇ ಬಳಸಬೇಕಾಗುತ್ತಿದೆ. ಪರಿಶಿಷ್ಟ ಜಾತಿಯ ಕಲ್ಯಾಣಕ್ಕೆ ಶ್ರಮಿಸುವವರಿಗೆ ಬೆಂಬಲ ನೀಡಬೇಕಾಗುತ್ತಿದೆ. ಅನಗತ್ಯವಾಗಿ ಮೀಸಲಾತಿ ವಿಚಾರದಲ್ಲಿ ದಲಿತರಿಗೆ ಅನ್ಯಾಯ ಮಾಡಬಾರದು” ಎಂದು ಎಚ್ಚರಿಸಿದರು.

ರಾಜ್ಯಗಳ ಶಿಫಾರಸಿಗೆ ಸಿಗದ ಕಿಮ್ಮತ್ತು

ಇಡೀ ದೇಶದಲ್ಲಿ ತಮಿಳುನಾಡು ಮಾತ್ರ ಮೀಸಲಾತಿಯನ್ನು 9ನೇ ಶೆಡ್ಯೂಲ್‌ಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.

1990ರ ದಶಕದಲ್ಲಿ ಜಯಲಲಿತಾ ನೇತೃತ್ವದ ಸರ್ಕಾರವು ತಮಿಳುನಾಡು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ-1994'ಅನ್ನು ಜಾರಿಗೆ ತಂದು 76ನೇ ತಿದ್ದುಪಡಿ ಮೂಲಕ ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಸ್ತುತ, ತಮಿಳುನಾಡಿನ ಮೀಸಲಾತಿ ಹೆಚ್ಚಳವು ನ್ಯಾಯಾಂಗದ ಪರಿಶೀಲನೆಯಿಂದ ವಿಶೇಷ ರಕ್ಷಣೆ ಪಡೆದಿದೆ.

ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣ ಶೇ. 56ಕ್ಕೆ ಹೆಚ್ಚಿಸಿ 2022ರಲ್ಲಿ ಬಿಜೆಪಿ ಸರ್ಕಾರ ಕಾಯ್ದೆ ಜಾರಿ ಮಾಡಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿತ್ತು.

ಬಿಹಾರದಲ್ಲಿ ಮೀಸಲಾತಿ ಪ್ರಮಾಣ ಶೇ 65 ಇದ್ದು, 9ನೇ ಅನುಸೂಚಿಗೆ ಸೇರಿಸಲು ಕೇಂದ್ರಕ್ಕೆ ಮನವಿ ಮಾಡಿದೆ. ಆದರೆ, ಪಟ್ನಾ ಹೈಕೋರ್ಟ್ ಹೆಚ್ಚುವರಿ ಮೀಸಲಾತಿಯನ್ನು ರದ್ದುಗೊಳಿಸಿದ್ದು, ಈ ಸಂಬಂಧ ಬಿಹಾರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ಛತ್ತೀಸಗಢದಲ್ಲಿ ಮೀಸಲಾತಿ ಪ್ರಮಾಣ ಶೇ. 76ಕ್ಕೆ ಏರಿಸಿದ್ದು, ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಇಲ್ಲೂ ಕೂಡ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ.

"ದೇಶದಲ್ಲಿ ಜನಸಂಖ್ಯೆ ಆಧಾರಿತ ಮೀಸಲಾತಿ ಇದೆ. ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೂಕ್ತ ಮೀಸಲಾತಿ ಸಿಗದಂತಾಗಿದೆ. 2022 ರಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇ. 17 ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ. 7 ಮೀಸಲಾತಿ ಒದಗಿಸಿದ್ದ ಕಾಯ್ದೆಗೆ ನ್ಯಾಯಾಲಯ ತಡೆ ನೀಡಿದೆ. ಇದರಿಂದ ದಲಿತ ಸಮುದಾಯಗಳು ಹಿಂದಿನಂತೆ ಶೇ. 15 ಮತ್ತು ಶೇ. 3 ಮಾತ್ರ ಮೀಸಲಾತಿ ಮಾತ್ರ ಸಿಗಲಿದೆ. ಈ ಸಮುದಾಯದೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ" ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.

9ನೇ ಅನುಸೂಚಿಗೆ ಮೀಸಲಾತಿ ಸೇರ್ಪಡೆ ಅಗತ್ಯವೇ?

ಮೀಸಲಾತಿ ಹೆಚ್ಚಳವನ್ನು ನ್ಯಾಯಾಂಗದ ಪರಿಶೀಲನೆಯಿಂದ ಹೊರಗಿಡಲು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಬೇಕು ಎಂಬ ಮಾತಿನಲ್ಲಿ ಅರ್ಥವಿಲ್ಲ. ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ಸೂಕ್ತ ಸಮರ್ಥನೆ ನೀಡಿದರೆ ಇದ್ಯಾವುದರ ಪ್ರಮೇಐ ಬರುವುದಿಲ್ಲ. ರಾಜ್ಯ ಸರ್ಕಾರಕ್ಕೆ ಮೀಸಲಾತಿ ಹೆಚ್ಚಳವನ್ನು ಸಮರ್ಥಿಸಿಕೊಳ್ಳುವ ಯೋಗ್ಯತೆ ಇಲ್ಲ ಎಂದು ಹೈಕೋರ್ಟ್ ವಕೀಲ ಹಾಗೂ ಸಂವಿಧಾನ ತಜ್ಞ ಶಿವರುದ್ರಪ್ಪ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಮೀಸಲಾತಿಯು ಶೇ 50 ರ ಮಿತಿ ದಾಟಬಾರದು ಎಂದು ಹೇಳುವುದಾದರೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಶೇ ೧೦ ರಷ್ಟು ಮೀಸಲಾತಿಯನ್ನು ಸುಪ್ರೀಂಕೋರ್ಟ್ ಹೇಗೆ ಕೊಟ್ಟಿತು ಎಂಬುದನ್ನು ಪ್ರಶ್ನಿಸಬೇಕಲ್ಲವೇ ಎಂದರು.

9ನೇ ಅನುಸೂಚಿ ಪ್ರಶ್ನಾರ್ಹವಲ್ಲವೇ?

9ನೇ ಶೆಡ್ಯೂಲ್‌ಗೆ ಸೇರಿದ ಕಾಯ್ದೆಗಳು ನ್ಯಾಯಾಂಗದ ಪರಿಶೀಲನೆಯಿಂದ ಹೊರಗುಳಿದರೂ 2007ರಲ್ಲಿ ಐ.ಆರ್. ಕೊಯಿಲೊ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಸಾಂವಿಧಾನಿಕ ರಕ್ಷಣೆಯನ್ನು ಪ್ರಶ್ನಿಸುವಂತಿದೆ.

ಸಂವಿಧಾನದ ಮೂಲ ರಚನೆಗೆ ಧಕ್ಕೆ ಉಂಟಾದ ಸಂದರ್ಭಗಳಲ್ಲಿ ೯ನೇ ಅನುಸೂಚಿಯಲ್ಲಿರುವ ಯಾವುದೇ ಕಾಯ್ದೆಯನ್ನು ಪರಿಶೀಲಿಸಬಹುದು ಎಂದು ಸುಪ್ರೀಂ ನ್ಯಾಯಪೀಠ ಹೇಳಿದೆ. ಹೀಗಿರುವಾಗ, 9ನೇ ಅನುಸೂಚಿ ಕೂಡ ನ್ಯಾಯಾಂಗದಿಂದ ಪಾರಾಗವಂತಿಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ಕೇಂದ್ರ ಸರ್ಕಾರದ ವಿಳಂಬವೇಕೆ?

ರಾಜ್ಯ ಸರ್ಕಾರವು 2022ರಲ್ಲಿ ಜಾರಿಗೆ ತಂದ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಶಿಫಾರಸು ಮಾಡಿದರೂ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದರ ಹಿಂದೆ ಹಲವು ತಾಂತ್ರಿಕ ಕಾರಣಗಳಿವೆ ಎನ್ನಲಾಗಿದೆ.

ಇಂದಿರಾ ಸಾಹ್ನಿ ತೀರ್ಪಿನಲ್ಲಿ ಮೀಸಲಾತಿ 50ರ ಮಿತಿ ದಾಟಬಾರದು ಎಂಬ ಕಟ್ಟುನಿಟ್ಟಿನ ಆದೇಶ ನೀಡಿದೆ. ಕರ್ನಾಟಕದ ಮೀಸಲು ಪ್ರಮಾಣ ಶೇ 56ಕ್ಕೆ ಏರಿಸಿರುವುದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗಲಿದೆ ಎಂಬ ಆತಂಕ ಕೇಂದ್ರಕ್ಕಿದೆ.

1973ರ ನಂತರ 9ನೇ ಅನುಸೂಚಿಗೆ ಸೇರಿದ ಯಾವುದೇ ಕಾಯ್ದೆಯು ಸಂವಿಧಾನದ ಮೂಲ ರಚನೆಗೆ ಧಕ್ಕೆ ತಂದರೆ ನ್ಯಾಯಾಲಯವು ಅದನ್ನು ರದ್ದುಗೊಳಿಸಬಹುದು. ಮೀಸಲಾತಿ ಹೆಚ್ಚಳವು ಸಂವಿಧಾನದ ಸಮಾನತೆಯ ಹಕ್ಕು ಕಲಂ 14ಕ್ಕೆ ವಿರುದ್ಧವಾದರೆ 9ನೇ ಅನುಸೂಚಿಯಲ್ಲಿದ್ದರೂ ತೆಗೆಯಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಕೇಂದ್ರ ಸರ್ಕಾರವು ಅಸಾಧಾರಣ ಪರಿಸ್ಥಿತಿಗಳಲ್ಲಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಬಹುದು. ಅಸಾಧಾರಣ ಪರಿಸ್ಥಿತಿ ಸಾಬೀತುಪಡಿಸಲು ವೈಜ್ಞಾನಿಕ ದತ್ತಾಂಶ ಅಗತ್ಯವಿರುತ್ತದೆ. ಹೀಗಾಗಿ, 9ನೇ ಶೆಡ್ಯೂಲ್‌ಗೆ ಸೇರಿಸುವುದು ವಿಳಂಬವಾಗುತ್ತಿದೆ ಎನ್ನಲಾಗಿದೆ.

ಇನ್ನು ಕರ್ನಾಟಕದ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಿದರೆ ಬಿಹಾರ, ಛತ್ತೀಸಗಢ ಮತ್ತು ಜಾರ್ಖಂಡ್ ರಾಜ್ಯಗಳು ಕೂಡ ಬೇಡಿಕೆಯನ್ನು ಪ್ರಬಲವಾಗಿ ಮಂಡಿಸಲಿವೆ. ಇದು ಮೀಸಲಾತಿ ನೀತಿಯಲ್ಲಿ ದೊಡ್ಡ ಬದಲಾವಣೆ ಹಾಗೂ ಕಾನೂನು ಹೋರಾಟಗಳಿಗೆ ನಾಂದಿ ಹಾಡಬಹುದು ಎಂಬ ಆತಂಕವೂ ಇದೆ.

ಪರಿಶಿಷ್ಟರಿಗೆ ಕಾನೂನು ಸಂಕಷ್ಟ

ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವುದರಿಂದ ಪರಿಶಿಷ್ಟರ ಮೀಸಲಾತಿಗೆ 'ಕಾನೂನು ಸಂಕಷ್ಟ' ಎದುರಾಗಿದೆ. ರಾಜ್ಯ ಸರ್ಕಾರವು ಶೇ 56ರ ಮೀಸಲಾತಿಯಡಿ ಯಾವುದೇ ಹೊಸ ನಡೆಸುವಂತಿಲ್ಲ. ಹಳೆಯ ಮೀಸಲಾತಿ ಆಧಾರದಲ್ಲೇ ನೇಮಕ ನಡೆಸುವಂತೆ ಸೂಚಿಸಿರುವುದು ಪರಿಶಿಷ್ಟರು ಹಾಗೂ ಹಿಂದುಳಿದವರಿಗೆ ಹಿನ್ನಡೆ ತಂದಿದೆ.

ಇನ್ನೊಂದೆಡೆ, ಪರಿಶಿಷ್ಟ ಜಾತಿಗಳ ಒಳಗೆ ಸರ್ಕಾರ ಜಾರಿಗೆ ತಂದಿದ್ದ 6:6:5 ಅನುಪಾತದ ಒಳ ಮೀಸಲಾತಿ ವರ್ಗೀಕರಣಕ್ಕೂ ತಡೆ ನೀಡಿರುವುದರಿಂದ ನೇಮಕಾತಿ ಪ್ರಕ್ರಿಯೆಗಳು ಮತ್ತಷ್ಟು ಸಂಕೀರ್ಣವಾಗಿವೆ.

Read More
Next Story