EWS Reservation | ಆರ್ಥಿಕ ದುರ್ಬಲರಿಗೂ ಮೀಸಲಾತಿ; ರಾಜ್ಯ ಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಬ್ರಾಹ್ಮಣ ಮಹಾಸಭಾ ಚಿಂತನೆ
x
ಪ್ರಾತಿನಿಧಿಕ ಚಿತ್ರ

EWS Reservation | ಆರ್ಥಿಕ ದುರ್ಬಲರಿಗೂ ಮೀಸಲಾತಿ; ರಾಜ್ಯ ಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಬ್ರಾಹ್ಮಣ ಮಹಾಸಭಾ ಚಿಂತನೆ

ಆರ್ಥಿಕ ದುರ್ಬಲ ವರ್ಗಗಳಿಗೆ ಶೇ 10 ರಷ್ಟು ಮೀಸಲಾತಿ ಘೋಷಿಸಿ ಆರು ವರ್ಷ ಕಳೆದರೂ ರಾಜ್ಯದಲ್ಲಿ ಮೀಸಲಾತಿ ಜಾರಿಗೊಳಿಸದ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ ಕದ ತಟ್ಟಲು ಬ್ರಾಹ್ಮಣ ಮಹಾಸಭಾ ನಿರ್ಧರಿಸಿದೆ.


ಪರಿಶಿಷ್ಟರ ಒಳಮೀಸಲಾತಿ, ಪಂಚಮಸಾಲಿ ಮೀಸಲಾತಿಗಾಗಿ ಹಗ್ಗಜಗ್ಗಾಟ ನಡೆದಿರುವಾಗಲೇ ʼಆರ್ಥಿಕ ದುರ್ಬಲ ವರ್ಗʼಗಳ (EWS) ಮೀಸಲಾತಿ ಜಾರಿಗೆ ಒತ್ತಾಯಿಸಿ ಬ್ರಾಹ್ಮಣರೂ ಸೇರಿದಂತೆ ಮುಂದುವರಿದ ವರ್ಗಗಳ ಸಮುದಾಯಗಳು ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿವೆ.

ʼಆರ್ಥಿಕ ದುರ್ಬಲ ವರ್ಗʼಗಳಿಗೆ ಕೇಂದ್ರ ಸರ್ಕಾರ ಶೇ 10 ರಷ್ಟು ಮೀಸಲಾತಿ ಘೋಷಿಸಿ ಆರು ವರ್ಷ ಕಳೆದರೂ ರಾಜ್ಯದಲ್ಲಿ ಮೀಸಲಾತಿ ಜಾರಿಗೊಳಿಸದ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ ಕದ ತಟ್ಟಲು ಬ್ರಾಹ್ಮಣ ಮಹಾಸಭಾ ನಿರ್ಧರಿಸಿದೆ.

ಆರ್ಥಿಕವಾಗಿ ದುರ್ಬಲರಾಗಿರುವ ಸಾಮಾನ್ಯ ವರ್ಗದವರಿಗೆ ಸರ್ಕಾರಿ ಉದ್ಯೋಗ, ಶಿಕ್ಷಣ ಸಂಸ್ಥೆಗಳಲ್ಲಿ ಶೇ 10ರಷ್ಟು ಮೀಸಲಾತಿ ಒದಗಿಸಲು ಕೇಂದ್ರ ಸರ್ಕಾರ 2019 ಜನವರಿಯಲ್ಲಿ ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದಿತ್ತು. ಮೀಸಲಾತಿ ಜಾರಿ ಮಾಡುವ ಹೊಣೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಾಗಿತ್ತು.

ಮೀಸಲಾತಿ ಕಹಳೆ ಮೊಳಗಿಸಿದ ಸಮ್ಮೇಳನ

ಜ.18 ಹಾಗೂ 19 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ʼಬ್ರಾಹ್ಮಣ ಮಹಾ ಸಮ್ಮೇಳನʼದಲ್ಲಿ ಬ್ರಾಹ್ಮಣ ಮಹಾಸಭಾ ಮೀಸಲಾತಿಯ ಕಹಳೆ ಮೊಳಗಿಸಿದೆ.

ʼʼ ಕೇಂದ್ರ ಸರ್ಕಾರ ಶೇ 10 ರಷ್ಟು ಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದರಿಂದ ಮೀಸಲಾತಿ ಮಿತಿಯ ಪ್ರಶ್ನೆ ಬರುವುದಿಲ್ಲ. ಮೀಸಲಾತಿ ಜಾರಿಗೆ ಈ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಮೀಸಲಾತಿ ಕುರಿತಂತೆ ಯಾವುದೇ ಸ್ಪಷ್ಟನೆ ನೀಡದ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯ ಮೊರೆ ಹೋಗುವುದು ಅನಿವಾರ್ಯವಾಗಿದೆʼʼ ಎಂದು ಹಿರಿಯ ನ್ಯಾಯವಾದಿ ಹಾಗೂ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಹಾರನಹಳ್ಳಿ ಅಶೋಕ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಮುಂದುವರಿದ ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ 'ಯೂತ್ ಫಾರ್ ಈಕ್ವಾಲಿಟಿ' ಎಂಬ ಸರ್ಕಾರೇತರ ಸಂಸ್ಥೆ ಹಾಗೂ ಇತರರು ಒಟ್ಟು 40 ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದರು. 2022 ನವೆಂಬರ್ ತಿಂಗಳಲ್ಲಿ ಈ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ, ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದಿತ್ತು. ಶೇ 50ರ ಮೀಸಲಾತಿಯು ಹೊಂದಾಣಿಕೆಯಾಗಬಲ್ಲ ಮಾನದಂಡವಾಗಿದ್ದು, ಮೀರಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.

ಮಂಡಲ್ ಆಯೋಗದನ್ವಯ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂಬ ಸುಪ್ರೀಂಕೋರ್ಟ್ ಆದೇಶ ಇರುವಾಗಲೇ ಮೇಲ್ವರ್ಗದವರ ಮೀಸಲಾತಿ ಹೆಚ್ಚಳಕ್ಕೆ ಅಸ್ತು ಎಂದಿದ್ದ ಸುಪ್ರೀಂಕೋರ್ಟ್‌ ತೀರ್ಮಾನದ ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ್ದ ಅಂದಿನ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂದು ನ್ಯಾಯಾಲಯ ಎಲ್ಲಿಯೂ ಹೇಳಿಲ್ಲ. ಹಿಂದುಳಿದ ವರ್ಗಗಳ ನೀಡಿರುವ ಮೀಸಲಾತಿ ಪ್ರಮಾಣ ಶೇ 50 ದಾಟಬಾರದು ಎಂದು ಹೇಳಿದೆ. ಮುಂದುವರಿದ ಸಮುದಾಯಗಳಿಗೆ ಶೇ 10 ಮೀಸಲಾತಿ ನೀಡುವುದರಿಂದ ಯಾವುದೇ ಆದೇಶ ಉಲ್ಲಂಘನೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಹೇಗಿದೆ?

ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ.17, ಪರಿಶಿಷ್ಟ ಪಂಗಡದವರಿಗೆ ಶೇ.7, ಪ್ರವರ್ಗ-1ಕ್ಕೆ 4, ಪ್ರವರ್ಗ-2ಎಗೆ -15, ಪ್ರವರ್ಗ 3ಎಗೆ-7, ಪ್ರವರ್ಗ 3ಬಿ- 9ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಆರ್ಥಿಕ ದುರ್ಬಲ ವರ್ಗಗಳಿಗೆ ಶೇ 10 ರಷ್ಟು ಮೀಸಲಾತಿ ನೀಡಿದರೆ ಒಟ್ಟು ಮೀಸಲಾತಿ ಪ್ರಮಾಣ ಶೇ 69 ರಷ್ಟಾಗುತ್ತದೆ.

ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದ ಕೇಂದ್ರ

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ನೀಡುವುದನ್ನು ಕೇಂದ್ರ ಸರ್ಕಾರ 2019ರ ಜನವರಿ 12ರಂದು ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದು ಪರಿಚ್ಛೇದ 14 ಮತ್ತು 16(6)ನೇ ವಿಧಿಯಲ್ಲಿ ಸೇರಿಸಿತ್ತು. ಕೇಂದ್ರದ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದು, ಮೇಲ್ವರ್ಗದವರ ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು.

ಮೀಸಲಾತಿ ಜಾರಿಗೆ ಮುಂದಾಗಿದ್ದ ಹಿಂದಿನ ಸರ್ಕಾರ

ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ಜಾತಿಗಳ (ಒಬಿಸಿ) ಪಟ್ಟಿಯಲ್ಲಿ ಮೀಸಲಾತಿ ಪಡೆಯದಿರುವ ಉಳಿದ ಜಾತಿಗಳ ಬಡವರಿಗೆ ಮೀಸಲಾತಿ ನೀಡಲು ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಈ ಹಿಂದಿನ ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಪ್ರವರ್ಗ 3 ಬಿಯಲ್ಲಿರುವ ಒಕ್ಕಲಿಗರು ಮತ್ತು ಲಿಂಗಾಯತ ಪಂಚಮಸಾಲಿ ಸಮುದಾಯಗಳನ್ನು ಇಡಬ್ಲ್ಯುಎಸ್ (ಆರ್ಥಿಕವಾಗಿ ದುರ್ಬಲ ವರ್ಗ) ವ್ಯಾಪ್ತಿಗೆ ಸೇರಿಸಲು ಚಿಂತನೆ ನಡೆಸಿತ್ತು.

ಶೇ 10ರಷ್ಟು ಇಡಬ್ಲ್ಯುಎಸ್‌ ಮೀಸಲಾತಿಯನ್ನು ವಿಭಜಿಸಿ ಶೇ 4 ರಷ್ಟನ್ನು ಲಿಂಗಾಯತ ಪಂಚಮಸಾಲಿ ಸಮುದಾಯ, ಶೇ 3ರಷ್ಟು ಒಕ್ಕಲಿಗ ಸಮುದಾಯ ಹಾಗೂ ಉಳಿದ ಶೇ 3 ರಷ್ಟು ಮೀಸಲಾತಿಯನ್ನು ಒಬಿಸಿ ಪಟ್ಟಿಯಲ್ಲಿ ಇಲ್ಲದ ಬ್ರಾಹ್ಮಣ, ಜೈನ, ಆರ್ಯವೈಶ್ಯ, ನಗರ್ತ, ಮೊದಲಿಯಾರ್ ಸಮುದಾಯಗಳಿಗೆ ಮೀಸಲಿಡಲು ಚರ್ಚೆ ನಡೆಸಿತ್ತು. ಅಷ್ಟರಲ್ಲಿ ಬಿಜೆಪಿ ಸರ್ಕಾರ ಪತನವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೇಲ್ವರ್ಗದವರ ಮೀಸಲಾತಿ ಕುರಿತು ಚರ್ಚೆಯನ್ನೇ ನಡೆಸಿಲ್ಲ ಎಂಬುದು ಆ ವರ್ಗದ ಸಮುದಾಯಗಳ ಆರೋಪವಾಗಿದೆ.

ಯಾವೆಲ್ಲಾ ರಾಜ್ಯಗಳಲ್ಲಿ ಅನುಷ್ಠಾನ

ಉತ್ತರಾಖಂಡ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಮಿಜೋರಾಂ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಗೋವಾ, ಅಸ್ಸಾಂ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಆರ್ಥಿಕವಾಗಿ ದರ್ಬಲ ವರ್ಗಗಳ ಮೀಸಲಾತಿ ಜಾರಿಗೊಳಿಸಿವೆ. 2019 ಜನವರಿಯಲ್ಲಿ ಗುಜರಾತ್ ಸರ್ಕಾರ ಇವಿಎಸ್ ಜಾರಿಗೊಳಿಸಿದ ಮೊದಲ ರಾಜ್ಯವಾಗಿದೆ.

Read More
Next Story