ಕನ್ನಡಿಗರಿಗೆ ಮೀಸಲಾತಿ | ಸರ್ಕಾರದ ಯೂಟರ್ನ್‌ಗೆ ʼINDIA' ಬಿರುಕಿನ ಆತಂಕ ಕಾರಣ?
ಮಸೂದೆಯ ವಿಷಯದಲ್ಲಿ ಸರ್ಕಾರದ ನಡೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿರುವುದು ಮಾತ್ರವಲ್ಲದೆ, ಸ್ವತಃ ಸರ್ಕಾರಕ್ಕೇ ಮುಜಗರ ತಂದಿದೆ.
ಖಾಸಗಿ ಉದ್ಯಮಗಳಲ್ಲಿ ಕರ್ನಾಟಕ ಸ್ಥಳೀಯ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಮಹತ್ವದ ಮಸೂದೆಯ ವಿಷಯದಲ್ಲಿ ರಾಜ್ಯ ಸರ್ಕಾರ ದಿಢೀರ್ ಯೂ ಟರ್ನ್ ಹೊಡೆದಿದೆ.
ಸೋಮವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಖಾಸಗಿ ಉದ್ಯಮ, ಕೈಗಾರಿಕೆ, ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಅನುಮೋದಿಸಲಾಗಿತ್ತು. ಆ ಬಳಿಕ ರಾಜ್ಯ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಗುರುವಾರ ನೂತನ ಮಸೂದೆಯನ್ನು ವಿಧಾನಸಭೆಯಲ್ಲಿ ಕಾರ್ಮಿಕ ಸಚಿವರು ಮಂಡಿಸಲಿದ್ದಾರೆ ಎಂದು ಹೇಳಲಾಗಿತ್ತು.
ಮಸೂದೆಯನ್ನು ಸಂಪುಟ ಅಂಗೀಕರಿಸಿರುವುದನ್ನು ಸ್ವತಃ ಮುಖ್ಯಮಂತ್ರಿಗಳೇ ತಮ್ಮ ಎಕ್ಸ್ ಖಾತೆಯಲ್ಲಿ ಘೋಷಿಸಿದ್ದರು. ಕನ್ನಡಿಗರಿಗೆ ತಾಯ್ನಾಡಿನಲ್ಲಿ ನೆಮ್ಮದಿಯ ಉದ್ಯೋಗ ಕಂಡುಕೊಳ್ಳಲು ಈ ಮಸೂದೆ ನೆರವಾಗಲಿದೆ. ನಮ್ಮ ಸರ್ಕಾರ ಕನ್ನಡ ನಾಡು ನುಡಿಯ ಜೊತೆಗೆ ಕನ್ನಡಿಗರ ಹಿತರಕ್ಷಣೆಗೆ ಬದ್ಧ ಎಂಬ ಒಕ್ಕಣೆಯನ್ನೂ ಮುಖ್ಯಮಂತ್ರಿಗಳು ಪೋಸ್ಟ್ ಮಾಡಿದ್ದರು.
ಹಾಗೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೇರಿದಂತೆ ಹಲವು ಸಚಿವರು ಈ ಮಸೂದೆಯಿಂದಾಗಿ ಕನ್ನಡಿಗರಿಗೆ ಆಗುವ ಅನುಕೂಲತೆಗಳು ಮತ್ತು ಸರ್ಕಾರದ ಬದ್ಧತೆಯ ಕುರಿತು ಹೇಳಿಕೆ ನೀಡಿದ್ದರು. ಈ ನಡುವೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲವು ಸಚಿವರು ಮಸೂದೆಯ ಕುರಿತು ರಾಜ್ಯದ ಉದ್ಯಮ ವಲಯದ ಆತಂಕದ ಕುರಿತೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಎಲ್ಲರ ಜೊತೆ ಸಮಾಲೋಚನೆ ನಡೆಸಿ ವಿಶ್ವಾಸಕ್ಕೆ ಪಡೆದು ಮಸೂದೆಯನ್ನು ಮಂಡಿಸಲಾಗುವುದು ಎಂದೂ ಹೇಳಿದ್ದರು.
ಆದರೆ, ಇದೀಗ ದಿಢೀರನೇ ಸರ್ಕಾರ ದಿನ ಬೆಳಗಾಗುವುದರಲ್ಲಿ ಯೂ ಟರ್ನ್ ಹೊಡೆದಿದೆ.
ಉದ್ಯಮದ ವಲಯದ ಒತ್ತಡಕ್ಕೆ ಮಣಿದ ಸರ್ಕಾರ?
ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ನೀಡಬೇಕು ಎಂಬುದು ಡಾ ಸರೋಜಿನಿ ಮಹಿಷಿ ವರದಿಯ ಕಾಲದಿಂದಲೂ ಇರುವ ಬೇಡಿಕೆ. ರಾಜ್ಯದಲ್ಲಿ ಐಟಿ ಮತ್ತು ಸೇವಾ ವಲಯದ ಉದ್ಯಮ ಚಟುವಟಿಕೆಗಳು ಗರಿಗೆದರಿದ ಬಳಿಕ ಕಳೆದ 25 ವರ್ಷಗಳಲ್ಲಿ ರಾಜ್ಯದ ಉದ್ಯೋಗ ವಲಯದಲ್ಲಿ ಕನ್ನಡಿಗರ ಪಾಲು ಗಣನೀಯವಾಗಿ ಕುಸಿಯುತ್ತಿದೆ. ಒಂದು ಕಡೆ ಉದ್ಯಮ ಚಟುವಟಿಕೆ ಮತ್ತು ಅದರೊಂದಿಗೆ ಉದ್ಯೋಗಾವಕಾಶಗಳು ದೊಡ್ಡ ಮಟ್ಟದ ಹೆಚ್ಚಳ ಕಂಡಿವೆ. ಆದರೆ, ಅದೇ ಹೊತ್ತಿಗೆ ಅಂತಹ ಉದ್ಯೋಗಾವಕಾಶಗಳಲ್ಲಿ ಸ್ಥಳೀಯರಾದ ಕನ್ನಡಿಗರಿಗೆ ಅವಕಾಶಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿವೆ ಎಂಬುದನ್ನು ಹಲವು ಅಧ್ಯಯನಗಳು ಹೇಳಿದ್ದವು.
ಆ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ದಶಕದಿಂದಲೂ ಡಾ ಸರೋಜಿನಿ ಮಹಿಷಿ ವರದಿ ಜಾರಿ ಮೂಲಕ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಾಯ್ದಿರಿಸಬೇಕು. ಅದಕ್ಕೆ ಸೂಕ್ತ ಕಾನೂನು ಜಾರಿಯ ಮೂಲಕ ಮೀಸಲಾತಿಯ ಖಾತರಿ ನೀಡಬೇಕು ಎಂಬ ಹೋರಾಟಗಳು ನಿರಂತರವಾಗಿ ನಡೆಯುತ್ತಿದ್ದವು. ಕಳೆದ ಎರಡು ವಾರದ ಹಿಂದೆ ಕೂಡ ರಾಜ್ಯದ ಪ್ರಮುಖ ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ(ಕರಾವೇ) ನೇತೃತ್ವದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲಾಗಿತ್ತು.
ಆ ಹಿನ್ನೆಲೆಯಲ್ಲಿ ಕನ್ನಡಿಗರ ಒತ್ತಾಸೆಗೆ ಸ್ಪಂದಿಸಿ ಮಸೂದೆ ರೂಪಿಸಿರುವುದಾಗಿ ಹೇಳಿದ್ದ ಸರ್ಕಾರ, ದಿಢೀರನೆ ಮಸೂದೆಯ ಮಂಡನೆಯನ್ನು ಮುಂದೂಡಿರುವುದು ಸಹಜವಾಗೇ ಕನ್ನಡ ಸಂಘಟನೆಗಳು ಮತ್ತು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಸರ್ಕಾರದ ಈ ಯೂಟರ್ನ್ ನಡೆಯ ಹಿಂದೆ ರಾಜ್ಯದ ಉದ್ಯಮ ವಲಯದ ವಿರೋಧ ಕೆಲಸ ಮಾಡಿದೆ. ರಾಜ್ಯದ ಐಟಿ ಮತ್ತು ಬಿಟಿ ವಲಯದ ಪ್ರಮುಖರು ಸರ್ಕಾರದ ಈ ಮಸೂದೆಯ ವಿರುದ್ಧ ವ್ಯಾಪಕ ಟೀಕೆ ಮಾಡಿದ್ದರು. ಅಲ್ಲದೆ, ಸರ್ಕಾರ ಇಂತಹ ಕಾನೂನು ಜಾರಿಗೊಳಿಸಿದರೆ ಉದ್ಯಮಗಳು ಬೇರೆ ರಾಜ್ಯಗಳ ದಿಕ್ಕು ಹಿಡಿಯುವುದು ಅನಿವಾರ್ಯವಾಗಲಿದೆ ಎಂಬ ಪರೋಕ್ಷ ಬೆದರಿಕೆಯನ್ನೂ ಒಡ್ಡಿದ್ದರು.
ಕೌಶಲ್ಯಯುಕ್ತ ಹುದ್ದೆಗಳಿಗೆ ಮೀಸಲಾತಿ ನೀಡುವುದರಿಂದ ಗುಣಮಟ್ಟ ಕುಸಿಯಲಿದೆ ಮತ್ತು ಅಂತಹ ನಿರ್ಬಂಧಗಳು ಒಟ್ಟಾರೆ ಉದ್ಯಮ ಚಟುವಟಿಕೆಗೇ ಪೆಟ್ಟು ಕೊಡಲಿವೆ. ಸರ್ಕಾರ ಇಂತಹ ನೀತಿಗಳ ಬದಲು ನೇರವಾಗಿ ಉದ್ಯಮ ಸಂಸ್ಥೆಗಳನ್ನು ವಹಿಸಿಕೊಂಡುಬಿಡಲಿ ಎಂಬಂತಹ ಟೀಕೆ ಕೂಡ ವ್ಯಕ್ತವಾಗಿತ್ತು.
ಪ್ರಮುಖವಾಗಿ ಸಿ ಮತ್ತು ಡಿ ದರ್ಜೆಯ ಉದ್ಯೋಗಗಳಿಗೆ ಶೇಕಡಾ75 ಅವಕಾಶ ನೀಡುವ ಸಂಬಂಧ ಖಾಸಗಿ ಸಂಸ್ಥೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಜತೆಗೆ ಬೆಂಗಳೂರು ಐಟಿ, ಬಿಟಿ, ಏರೋಸ್ಪೇಸ್ ಮತ್ತಿತರ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳು ಕರ್ನಾಟಕ ಸರ್ಕಾರದ ನೀತಿಯಿಂದ ಮುಂದಿನ ದಿನಗಳಲ್ಲಿ ಬಂಡವಾಳ ಹೂಡಿಕೆಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ ಎಂಬ ಭಯವೂ ಸರ್ಕಾರದ ಈ ನಿರ್ಧಾರಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ನ ನಾಯಕರಾದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರೂ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಅವಸರದ ನಿರ್ಧಾರ ಕೈಗೊಳ್ಳಬೇಡಿ ಎಂಬ ಕಿವಿಮಾತು ಹೇಳಿದರೆನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರ ವಿವರವಾಗಿ ಚರ್ಚಿಸಿ ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಉದ್ಯಮದ ವಲಯದ ಈ ಪ್ರಬಲ ವಿರೋಧ ಮತ್ತು ಆ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವ ಮಹತ್ವಾಕಾಂಕ್ಷೆಯ ಮಸೂದೆಯಿಂದ ಹಿಂದೆ ಸರಿದಿದೆ.
ಕನ್ನಡ ಸಂಘಟನೆಗಳ ಮೌನ
ಆದರೆ, ಕನ್ನಡಿಗರ ಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆಸಿದ್ದ ಕನ್ನಡ ಸಂಘಟನೆಗಳು ಸರ್ಕಾರದ ಈ ಯೂಟರ್ನ್ ಕುರಿತು ಮೌನಕ್ಕೆ ಜಾರಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಸೂದೆ ಮಂಡನೆಯಾದ ಬಳಿಕ ಉದ್ಯಮಿಗಳ ವಿರೋಧಕ್ಕೆ ಪ್ರತಿಕ್ರಿಯೆಯಾಗಿ ಬಿರುಸಿನ ಹೇಳಿಕೆ ನೀಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕೂಡ, ಸರ್ಕಾರ ಮಸೂದೆಯ ವಿಷಯದಲ್ಲಿ ದಿಢೀರನೇ ಯೂ ಟರ್ನ್ ಹೊಡೆದಿರುವ ಬಗ್ಗೆ ಪ್ರತಿಕ್ರಿಯಿಸಿಲ್ಲ.
"ಕೆಲ ಕಾರ್ಪೊರೇಟ್ ವಲಯದ ಪ್ರಚಾರಪ್ರಿಯ ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅವರು ಎತ್ತುತ್ತಿರುವ ಆಕ್ಷೇಪಗಳನ್ನೂ ಗಮನಿಸಿದ್ದೇನೆ. ಇಂಥ ಕೂಗುಮಾರಿಗಳಿಗೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತೂ ನೀಡಕೂಡದು. ಇವರು ಕನ್ನಡದ್ರೋಹಿಗಳು" ಎಂದು ಹೇಳಿದ್ದ ಕರಾವೇ ನಾರಾಯಣಗೌಡರು, "ವಿಧೇಯಕ ಜಾರಿಗೆ ತಂದರೆ ಕರ್ನಾಟಕದಲ್ಲಿರುವ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿರುವ ಉದ್ಯಮಿಗಳು ಬೇರೆ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ಒಬ್ಬ ಉದ್ಯಮಿ ಹೇಳಿದ್ದಾರೆ. ಇಂಥ ಬ್ಲಾಕ್ ಮೇಲ್ ಹೇಳಿಕೆಗಳನ್ನು ನಾವು ಹಲವಾರು ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ಇಂಥ ಬ್ಲಾಕ್ ಮೇಲರ್ ಗಳು ನಿಜವಾದ ಅರ್ಥದಲ್ಲಿ ದೇಶದ್ರೋಹಿಗಳು" ಎಂದು ವಾಗ್ದಾಳಿ ನಡೆಸಿದ್ದರು.
ಆದರೆ, ಇದೀಗ ಸರ್ಕಾರ ಅಂತಹ ಉದ್ಯಮಿಗಳ ಒತ್ತಡಕ್ಕೆ ಮಣಿದು ಮಸೂದೆಯಿಂದ ಹಿಂದೆ ಸರಿದಿದೆ. ತಾತ್ಕಾಲಿಕವಾಗಿ ಮಸೂದೆ ತಡೆಹಿಡಿದಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಮಾರ್ಪಾಡುಗಳೊಂದಿಗೆ ಮಸೂದೆ ಪರಿಷ್ಕರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರೂ, ಸದ್ಯಕ್ಕಂತೂ ಈ ಬೆಳವಣಿಗೆ ಕನ್ನಡಿಗರಿಗೆ ದೊಡ್ಡ ಹಿನ್ನಡೆಯೇ. ಆದರೂ, ಕನ್ನಡಪರ ಸಂಘಟನೆಗಳು ಸರ್ಕಾರದ ಈ ನಡೆಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಏಕೆ? ಎಂಬ ಪ್ರಶ್ನೆ ಎದ್ದಿದೆ.
ಸರ್ಕಾರದ ನಡೆಗೆ ಪ್ರತಿಪಕ್ಷಗಳ ಟೀಕೆ
ಕನ್ನಡಗಿಗರ ಮೀಸಲಾತಿ ವಿಷಯದಲ್ಲಿ ಸರ್ಕಾರ ಮಸೂದೆಯನ್ನು ವಾಪಸ್ ಪಡೆದು ಯೂಟರ್ನ್ ಹೊಡೆದಿರುವುದನ್ನು ರಾಜ್ಯದ ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿವೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು, “ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದಿದ್ಯಾಕೆ? ತಡೆಹಿಡಿದಿದ್ಯಾಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ? ಅವಮಾನಿಸಲು ಈ ಸರ್ಕಾರಕ್ಕೆ ಕನ್ನಡಿಗರೇ ಬೇಕಿತ್ತೆ?” ಎಂದು ಹರಿಹಾಯ್ದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಕನ್ನಡಿಗರ ಬಹುದಿನಗಳ ಕನಸು ನನಸು ಮಾಡುವ ಮಸೂದೆಯ ಬಗ್ಗೆ ರಾಜ್ಯದ ಜನತೆ ಭರವಸೆ ಹೊಂದಿದ್ದರು. ಆದರೆ, ʼಇಂಡಿʼ ಒಕ್ಕೂಟ (INDIA)ದಲ್ಲಿ ಬಿರುಕು ಮೂಡುವ ಭಯದಲ್ಲಿ ಪಕ್ಷದ ಹೈಕಮಾಂಡ್ ಬಿಸಿಮುಟ್ಟಿಸಿದ ಬೆನ್ನಲ್ಲೇ ಸರ್ಕಾರ ಮಸೂದೆಯನ್ನು ತಡೆ ಹಿಡಿದಿದೆ. ತಾಕತ್ತಿದ್ದರೆ ಈ ಸರ್ಕಾರ, ಕನ್ನಡಿಗರ ಪರವಾಗಿರುವ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಲಿ” ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ಮಸೂದೆ ಹಿಂದೆ ಪಡೆದಿರುವುದು ಸರ್ಕಾರದ ಹೇಡಿ ನಡೆ ಎಂದೂ ಕಟುವಾಗಿ ಟೀಕಿಸಿದ್ದಾರೆ.
ಹಾಗೆಯೇ ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಸರ್ಕಾರದ ಯೂಟರ್ನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಹಿತ ಕಾಯುವ ಕೆಲಸದಲ್ಲಿ ಸರ್ಕಾರ ಒತ್ತಡಕ್ಕೆ ಮಣಿದಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಹಾಗೇ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್ ಅಶೋಕ್ ಕೂಡ ಸರ್ಕಾರದ ನಡೆ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು ಎಂಬಂತಾಗಿದೆ ಎಂದು ಟೀಕಿಸಿದ್ದಾರೆ.
ಒಟ್ಟಾರೆ, ಮಸೂದೆಯ ವಿಷಯದಲ್ಲಿ ಸರ್ಕಾರದ ನಡೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿರುವುದು ಮಾತ್ರವಲ್ಲದೆ, ಸ್ವತಃ ಸರ್ಕಾರಕ್ಕೇ ಮುಜಗರ ತಂದಿದೆ.