Request to provide Rs. 550 crore grant for construction of new lake near Babanagar
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಸಚಿವ ಎಂ.ಬಿ. ಪಾಟೀಲ್‌ ಭೇಟಿ ಮಾಡಿ ಮನವಿ ನೀಡಿದರು. 

ತುಬುಚಿ ಏತ ನೀರಾವರಿ ಯೋಜನೆ: 550 ಕೋಟಿ ರೂ. ಅನುದಾನ; ಡಿಕೆಶಿಗೆ ಎಂ.ಬಿ. ಪಾಟೀಲ್ ‌ ಮನವಿ

ತುಬುಚಿ - ಬಬಲೇಶ್ವರ ಏತ ನೀರಾವರಿ ಯೋಜನೆಯಲ್ಲಿ 6.3 ಟಿಎಂಸಿ ನೀರನ್ನು ನಾಲ್ಕು ತಾಲ್ಲೂಕುಗಳ 1.30 ಲಕ್ಷ ಎಕರೆಗೆ ಹರಿಸಲಾಗುತ್ತಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.


ನೀರಾವರಿ ಮತ್ತು ಕುಡಿಯುವ ನೀರು ಪೂರೈಸುವ ತುಬುಚಿ - ಬಬಲೇಶ್ವರ ಏತ ನೀರಾವರಿ ಯೋಜನೆಯಡಿಯಲ್ಲಿ ಬಾಬಾನಗರದ ಬಳಿ ಹೊಸದಾಗಿ ಕೆರೆ ನಿರ್ಮಿಸಲು 550 ಕೋಟಿ ರೂ. ಅನುದಾನ ಒದಗಿಸಬೇಕೆಂದು ಬಬಲೇಶ್ವರ ಶಾಸಕ ಹಾಗೂ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು, ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಗುರುವಾರ(ಜು.3) ಸದಾಶಿವನಗರದ ನಿವಾಸದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತ್ತು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ತುಬುಚಿ - ಬಬಲೇಶ್ವರ ಏತ ನೀರಾವರಿ ಯೋಜನೆಯಲ್ಲಿ 6.3 ಟಿಎಂಸಿ ನೀರನ್ನು ನಾಲ್ಕು ತಾಲ್ಲೂಕುಗಳ 1.30 ಲಕ್ಷ ಎಕರೆಗೆ ಹರಿಸಲಾಗುತ್ತಿದೆ. ಇಲ್ಲಿ ಶೇ.60ರಷ್ಟು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದೆ. ಇದನ್ನು ಬಗೆಹರಿಸಲು ಬಾಬಾನಗರದ ಸಮೀಪ ಕೆರೆ ಕಟ್ಟಿ, 0.775 ಟಿಎಂಸಿ ನೀರನ್ನು ತುಂಬಲು ಅವಕಾಶವಿದೆ. ಇಲ್ಲಿ 679.25 ಎಕರೆ ಸರ್ಕಾರಿ ಜಮೀನಿದ್ದು, ಈ ಪೈಕಿ 434 ಎಕರೆಯಲ್ಲಿ ಕೆರೆ ಕಟ್ಟಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

556.5 ಕೋಟಿ ರೂ. ವೆಚ್ಚದಲ್ಲಿ ಹೊಸ ಕೆರೆಯನ್ನು ನಿರ್ಮಿಸಲು ಚಿಂತಿಸಲಾಗಿದೆ. ಈ ನೀರನ್ನು ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಕುಡಿಯಲು ಮತ್ತು ರೈತರು ಬೆಳೆಗಳಿಗೆ ಉಪಯೋಗಿಸಿಕೊಳ್ಳಬಹುದಾಗಿ. ಇದಕ್ಕೆ ತುಬುಚಿ - ಬಬಲೇಶ್ವರ ಏತ ನೀರಾವರಿ ಯೋಜನೆಯ ಎರಡನೆಯ ವಿತರಣಾ ತೊಟ್ಟಿಯಿಂದ ನೀರು ಹರಿಸಲು ಅವಕಾಶವಿದೆ. ಇದಕ್ಕೆ ಜಪಸಂಪನ್ಮೂಲ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ ಎಂದರು.

ರೈತರಿಗೆ ಸೂಕ್ತ ಪರಿಹಾರ ಸಿಗಬೇಕು

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ 10 ಗ್ರಾಮಗಳ ವ್ಯಾಪ್ತಿಗೆ ಸೇರಿರುವ 1,282 ಎಕರೆ ಭೂಮಿ ಅಗತ್ಯವಿದೆ. ಆದರೆ, ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೋರಾಡುತ್ತಿದ್ದಾರೆ. ಈ ಸಂಬಂಧ ಜುಲೈ 4ರಂದು ಸಿಎಂ ಜತೆ ಸಭೆ ಏರ್ಪಡಿಸಲಾಗಿದೆ. ಕೈಗಾರಿಕೆಗಳಿಗೆ ಜಮೀನು ಬೇಕಾಗುತ್ತದೆ. ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಹೊಸ ಕಾಯ್ದೆಯನ್ವಯ ಸೂಕ್ತ ಪರಿಹಾರ ಕೊಡಲಾಗುವುದು ಎಂದು ತಿಳಿಸಿದರು.

ವಿವಿಧ ರಾಜ್ಯಗಳಿಂದ ತೀವ್ರ ಸ್ಪರ್ಧೆ

ಕೈಗಾರಿಕಾ ರಂಗದಲ್ಲಿ ತಮಿಳುನಾಡು, ಗುಜರಾತ್, ಒಡಿಶಾ, ಅಸ್ಸಾಂ ಮತ್ತಿತರ ರಾಜ್ಯಗಳಿಂದ ನಮಗೆ ತೀವ್ರ ಸ್ಪರ್ಧೆ ಇದೆ. ಅಲ್ಲೆಲ್ಲ ಉದ್ಯಮಿಗಳಿಗೆ ಏನೇನು ಸೌಲಭ್ಯ ಕೊಡಲಾಗುತ್ತಿದೆ, ಕೈಗಾರಿಕಾ ನೀತಿಗಳು ಹೇಗಿವೆ ಎನ್ನುವುದರ ಅರಿವು ನಮಗಿದೆ. ಕೈಗಾರಿಕೆ ಮತ್ತು ಕೃಷಿ ಎರಡೂ ಮುಖ್ಯವಾಗಿದ್ದು, ಸರಿದೂಗಿಸಿಕೊಂಡು ಹೋಗುವ ಕೆಲಸ ಅಗತ್ಯವಾಗಿದೆ ಎಂದರು.

ರೈತರಿಂದ ಆಹೋರಾತ್ರಿ ಧರಣಿ

ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೈಗಾರಿಕಾ ಉದ್ದೇಶಕ್ಕೆ ಗುರುತಿಸಿರುವ ಭೂಮಿಯನ್ನು ಕೈ ಬಿಡಬೇಕು ಎಂದು ರೈತರು ಸತತ ಆರು ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ಮಾಡುತ್ತಿದ್ದು ಮಾಜಿ ಸಚಿವೆ ಬಿ.ಟಿ. ಲಲಿತ ನಾಯಕ್‌, ನಟ ಕಿಶೋರ್‌ ಸೇರಿದಂತೆ ಹಲವು ಸಿನಿಮಾ ನಟರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

Read More
Next Story