ಎಂ.ಸ್ಯಾಂಡ್‌ ಬದಲಿಗೆ ಮರಳನ್ನು ನಿಗದಿತ ದರಲ್ಲಿ ಒದಗಿಸಲು ವರದಿ ಶಿಫಾರಸು
x

ಎಂ.ಸ್ಯಾಂಡ್‌ ಬದಲಿಗೆ ಮರಳನ್ನು ನಿಗದಿತ ದರಲ್ಲಿ ಒದಗಿಸಲು ವರದಿ ಶಿಫಾರಸು

ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಎಂ-ಸ್ಯಾಂಡ್‌ನಲ್ಲಿ ಪ್ಲಾಸ್ಟಿಂಗ್‌ ಮಾಡಲಾಗುತ್ತಿದೆ. ಇದರಿಂದ ಬೇಸಿಗೆಕಾಲದಲ್ಲಿ ಮನೆಯೊಳಗಡೆ ವಾತಾವರಣ ಬಿಸಿಯಾಗಿ ಇರುವುದಕ್ಕೂ ಸಾಧ್ಯವಾಗುತ್ತಿಲ್ಲ.


ರಾಜ್ಯದಲ್ಲಿ ಮನೆ ನಿರ್ಮಿಸುತ್ತಿರುವವರಿಗೆ ಎಂ.ಸ್ಯಾಂಡ್‌ ಬದಲಿಗೆ ಮರಳನ್ನು ನಿಗದಿತ ದರಲ್ಲಿ ಒದಗಿಸುವಂತೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ತಿಳಿಸಿದೆ.

ವಿಧಾನಮಂಡಲದ ಉಭಯ ಸದನದಲ್ಲಿ ಸಮಿತಿಯ ವರದಿಯನ್ನು ಮಂಡಿಸಲಾಯಿತು. ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಎಂ-ಸ್ಯಾಂಡ್‌ನಲ್ಲಿ ಪ್ಲಾಸ್ಟಿಂಗ್‌ ಮಾಡಲಾಗುತ್ತಿದೆ. ಇದರಿಂದ ಬೇಸಿಗೆಕಾಲದಲ್ಲಿ ಮನೆಯೊಳಗಡೆ ವಾತಾವರಣ ಬಿಸಿಯಾಗಿ ಇರುವುದಕ್ಕೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಾಜ್ಯದಲ್ಲಿ ಹೊಸದಾಗಿ ಮನೆ ನಿರ್ಮಿಸುತ್ತಿರುವವರು ಮತ್ತು ಮನೆ ದುರಸ್ತಿ ಮಾಡಿಕೊಳ್ಳುತ್ತಿರುವವರಿಗೆ ಮರಳು ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಎಂ-ಸ್ಯಾಂಡ್‌ ಬದಲಾಗಿ ಮರಳನ್ನು ಸುಲಭವಾಗಿ ಒಂದು ನಿಗದಿತ ದರದಲ್ಲಿ ಒದಗಿಸುವಂತೆ ಸಮಿತಿಯು ಶಿಫಾರಸ್ಸು ಮಾಡಿದೆ. ಇದೇ ವೇಳೆ ಮರುಳು ನೀತಿ ಜಾರಿಯಲ್ಲಿದ್ದರೂ ಬಹಳಷ್ಟು ಕಡೆ ಇತ್ತೀಚೆಗಿನ ದಿನದಲ್ಲಿ ಮರಳಿನಲ್ಲಿ ಕಲ್ಲಿನ ಡಸ್ಟನ್ನು ಹಾಕಲಾಗುತ್ತಿದೆ ಎಂದು ಹೇಳಿದೆ.

2026ನೇ ಸಾಲಿನ ಅಂತ್ಯದೊಳಗೆ ಪೂರ್ಣಗೊಳಿಸಿ ಹಂಚಿಕೆಗೆ ಶಿಫಾರಸು:

ವಸತಿ ಇಲಾಖೆಯಿಂದ ವಿವಿಧ ಯೋಜನೆಗಳಡಿ ನಿರ್ಮಿಸಲಾಗುತ್ತಿರುವ ವಸತಿ ಕಾಮಗಾರಿಯನ್ನು ಆದ್ಯತೆಯ ಮೇರೆಗೆ 2026ನೇ ಸಾಲಿನ ಅಂತ್ಯದೊಳಗೆ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಕಡ್ಡಾಯವಾಗಿ ಹಂಚಿಕೆ ಮಾಡಬೇಕು. ಬುಡಕಟ್ಟು ಕಲ್ಯಾಣ ವಸತಿ ಯೋಜನೆಯಡಿ ಕಾಡಿನಲ್ಲಿ ವಾಸ ಮಾಡುವ ಮೂಲ ಗಿರಿಜನರಿಗೆ ಈಗಾಗಲೇ ಭರವಸೆ ನೀಡಿದಂತೆ 2485 ಮನೆಗಳನ್ನು ಕೂಡಲೇ ಹಂಚಿಕೆ ಮಾಡಬೇಕು. ವಸತಿ ಇಲಾಖೆಯ ಮನೆಗಳ ನಿರ್ಮಾಣದ ಯೋಜನೆಗಳಿಗೆ ಕ್ಷೇತ್ರವಾರು ಅನುದಾನ ಹಂಚಿಕೆಯು ತಾರತಮ್ಯದಿಂದ ಕೂಡಿದ್ದು, ಡಾ‌.ನಂಜುಂಡಪ್ಪ ವರದಿಯ ಪ್ರಕಾರ ಚಾಮರಾಜನಗರ ಜಿಲ್ಲೆಯು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ಪ್ರದೇಶದ ವಸತಿರಹಿತರಿಗೆ ಪ್ರಥಮ ಆದ್ಯತೆಯ ಮೇರೆಗೆ ಜಿಲ್ಲೆಯಲ್ಲಿರುವ ಎಲ್ಲಾ ತಾಲ್ಲೂಕುಗಳಿಗೂ ಆರ್ಥಿಕ ಇಲಾಖೆಯಿಂದ ವಿಶೇಷ ಪ್ರಕರಣದಡಿ ಹೆಚ್ಚಿನ ಹಣವನ್ನು ಪಡೆದು, ಅನುದಾನವಾಗಿ ಹಂಚಿಕೆ ಮಾಡಬೇಕೆಂದು ಸಮಿತಿಯು ಶಿಫಾರಸು ಮಾಡಿದೆ.

ಗ್ರಾಮ ಪಂಚಾಯಿತಿಯಿಂದ ಫಲಾನುಭವಿಗಳ ಆಯ್ಕೆ ಮಾಡುವ ಬದಲಾಗಿ ಗ್ರಾಮ ಸಭೆಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಉತ್ತಮವೆಂದು ಸಮಿತಿಯು ಅಭಿಪ್ರಾಯಪಟ್ಟಿದೆ. ವಿವಿಧ ಯೋಜನೆಯಲ್ಲಿ ಹಂಚಿಕೆ ಮಾಡುವ ಮನೆಗಳನ್ನು ಪಡೆಯಲು ಫಲಾನುಭವಿಗಳಿಗೆ ಸಿವಿಲ್ ಸ್ಕೋ‌ರ್ ಇಲ್ಲದೆ ಇರುವುದರಿಂದ ಬ್ಯಾಂಕ್‌ನಲ್ಲಿ ಸಾಲ ಸಿಗುವುದು ಕಷ್ಟವಾಗಿದೆ. ಇಲಾಖೆಯು ರಾಷ್ಟ್ರೀಯ, ರಾಜ್ಯ ಸಹಕಾರ ಬ್ಯಾಂಕ್‌ಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳೊಂದಿಗೆ ಚರ್ಚಿಸಿ ಈ ಹಂಚಿಕೆ ಮಾಡುವ ಮನೆಗಳನ್ನು ಪಡೆಯಲು ಫಲಾನುಭವಿಗಳಿಗೆ ಆದಷ್ಟು ಕಡಿಮೆ ಬಡ್ಡಿ ದರದಲ್ಲಿ ಸರ್ಕಾರದಿಂದಲೇ ಬಡ್ಡಿ ಸಬ್ಸಿಡಿ ಕೊಡುವಂತೆ ಒಂದು ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಹೇಳಿದೆ.


Read More
Next Story