ದರ್ಶನ್ ಪ್ರಕರಣ| ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಸುಪ್ರೀಂ ಕೊರ್ಟ್‌ಗೆ ಮೇಲ್ಮನವಿ
ರಾಜ್ಯ ಸರ್ಕಾರದ ಪರವಾಗಿ ನೇಮಕಗೊಂಡಿರುವ ಸುಪ್ರೀಂ ಕೋರ್ಟ್ ಹಿರಿಯ ವಕೀಲರಾದ ಅನಿಲ್ ಸಿ.ನಿಶಾನಿ ಮತ್ತು ಸಿದ್ದಾರ್ಥ್ ಲೂತ್ರಾ ಅವರು ಏಳು ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿ ಏಳು ಮಂದಿ ಆರೋಪಿಗಳ ಜಾಮೀನು ರದ್ದು ಕೋರಿ ಬೆಂಗಳೂರು ನಗರ ಪೊಲೀಸರು ಸೋಮವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ ಪರವಾಗಿ ನೇಮಕಗೊಂಡಿರುವ ಸುಪ್ರೀಂ ಕೋರ್ಟ್ ಹಿರಿಯ ವಕೀಲರಾದ ಅನಿಲ್ ಸಿ.ನಿಶಾನಿ ಮತ್ತು ಸಿದ್ದಾರ್ಥ್ ಲೂತ್ರಾ ಅವರು ಈ ಏಳು ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಏಕೆ ಆರೋಪಿಗಳ ಜಾಮೀನು ರದ್ದು ಮಾಡಬೇಕು ಎಂಬುದಕ್ಕೆ ಕಾರಣ ಸಹಿತ ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್.ನಾಗರಾಜ್, ಅನುಕುಮಾರ್, ಲಕ್ಷ್ಮಣ್, ಜಗದೀಶ್ ಮತ್ತು ಪ್ರದೇಷ್‌ಗೆ ಹೈಕೋರ್ಟ್ ಡಿ.13ರಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು.ಈ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ನಗರ ಪೊಲೀಸರು, ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಮೂರು ದಿನಗಳ ಹಿಂದೆಯಷ್ಟೇ ಗೃಹ ಇಲಾಖೆ ಅನುಮತಿ ನೀಡಿತ್ತು. ದಾಖಲೆ ಹಾಗೂ ಆರೋಪಪಟ್ಟಿಯಲ್ಲಿರುವ ಅಂಶಗಳನ್ನು ಅನುವಾದ ಮಾಡಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಗಳಿಗೆ ಇದೀಗ ಹೈಕೋರ್ಟ್ ಜಾಮೀನು ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವುದರಿಂದ ಆತಂಕ ಎದುರಾಗಿದೆ. ಆದರೆ ಈ ಅರ್ಜಿಯ ವಿಚಾರಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ತಿಳಿದುಬಂದಿದೆ.
ಗಡುವು ಮುಗಿದರೂ ಮೈಸೂರಿನಲ್ಲೇ ಉಳಿದುಕೊಂಡಿರುವ ನಟ
ನಟ ದರ್ಶನ್ ಅವರು ಹೈಕೋರ್ಟ್‌ನಿಂದ ಜಾಮೀನು ನೀಡುವಾಗ ದರ್ಶನ್ ಅವರಿಗೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ದರ್ಶನ್‌ಗೆ ಜಾಮೀನು ಮಂಜೂರು ಬಳಿಕ ಮೈಸೂರಿನಲ್ಲಿ ಕೆಲಕಾಲ ವಿಶ್ರಾಂತಿ ಪಡೆಯಲು ಅನುಮತಿ ನೀಡುವಂತೆ ದರ್ಶನ್ ಕೋರಿದ್ದರು. ಇದಕ್ಕೆ ಕೋರ್ಟ್ ಕೂಡ ಒಪ್ಪಿಗೆ ನೀಡಿತ್ತು.ಅದರಂತೆ ದರ್ಶನ್ ಅವರಿಗೆ ಡಿಸೆಂಬರ್ 5ರವರೆಗೆ ಮೈಸೂರಿನಲ್ಲಿರಲು ಕೋರ್ಟ್ ಸಮ್ಮತಿಸಿತ್ತು. ಸೋಮವಾರ ದರ್ಶನ್ ಅವರಿಗೆ ನೀಡಲಾಗಿದ್ದ ಗಡುವು ಮುಕ್ತಾಯವಾಗಿದೆ. ನಿಯಮದ ಪ್ರಕಾರ ದರ್ಶನ್ ಅವರು ಸೋಮವಾರ ಮೈಸೂರನ್ನು ತೊರೆಯಬೇಕು. ಆದರೆ, ದರ್ಶನ್ ಅವರು ಇನ್ನೂ ಕೆಲದಿನಗಳ ಕಾಲ ಮೈಸೂರಿನಲ್ಲೇ ಇರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕೋರ್ಟ್‌ನಿಂದ ಗಡುವು ವಿಸ್ತರಿಸಲು ಮತ್ತೆ ಅನುಮತಿ ಕೋರಲು ಮುಂದಾಗಿದ್ದಾರೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ
ದರ್ಶನ್ ಗೆಳತಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಪೋಸ್ಟ್‌ಗನ್ನು ಹಾಕುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಜೂ.8ರ ರಾತ್ರಿ ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಜೂನ್.9ರಂದು ಸುಮ್ಮನಹಳ್ಳಿಯ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣದ ಎಲ್ಲಾ ಆರೋಪಿಗಳಿಗೆ ಹೈಕೋರ್ಟ್ ಡಿ.13ರಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್ ಅವರು ಕೆಲ ವಾರಗಳ ಕಾಲ ಅಲ್ಲಿಯೇ ಇದ್ದರು. ಜಾಮೀನು ಸಿಕ್ಕ ಬಳಿಕ ದರ್ಶನ್ ಅವರು ಮೈಸೂರಿಗೆ ತೆರಳಲು ಅನುಮತಿ ಪಡೆದಿದ್ದರು. ಇದೀಗ ಆರೋಪಿಗಳ ಜಾಮೀನು ರದ್ದು ಕೋರಿ ಪೊಲೀಸರು ಸಯಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.