ರೇಣುಕಾಸ್ವಾಮಿ ಕೊಲೆ ಪ್ರಕರಣ| ನಟ ದರ್ಶನ್ 14 ದಿನ ಪರಪ್ಪನ ಅಗ್ರಹಾರಕ್ಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜುಲೈ 4ರವರೆಗೆ ಅಂದರೆ 14 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ನೀಡಿದೆ.
ಇಂದು ದರ್ಶನ್ ಮತ್ತು ಅವರ ಆಪ್ತರಾದ ವಿನಯ್, ಪ್ರದೋಶ್, ಧನರಾಜ್ ಅವರ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈಗಾಗಲೇ ಪ್ರಕರಣದ ತನಿಖೆಗಾಗಿ ಮೂರು ಬಾರಿ ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು.
ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಿ ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಶೆಡ್ ನಲ್ಲಿ ಬರ್ಬರವಾಗಿ ಕೊಂದು ನಂತರ ಶವ ಬಿಸಾಡಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 28 ಸ್ಥಳಗಳಲ್ಲಿ ಸ್ಥಳ ಮಹಜರು ನಡೆಸಿ ಬಟ್ಟೆ, ಹಲ್ಲೆಗೆ ಬಳಸಿದ್ದ ಲಾಠಿ, ಶವ ಬಿಸಾಡಲು ಬಳಸಿದ್ದ ಕಾರು, ಆರೋಪಿಗಳ ಮೊಬೈಲ್, ಶೂ, ಮರದ ಪೀಸುಗಳು ಸೇರಿ ಸುಮಾರು 139 ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.ಪ್ರಕರಣದಲ್ಲಿ ಇದುವರೆಗೆ 28 ಕಡೆ ಸ್ಥಳ ಮಹಜರು ಮಾಡಲಾಗಿದೆ, ದರ್ಶನ್ ಸೇರಿ ಎಲ್ಲಾ ಆರೋಪಿಗಳ ನಿವಾಸ ಹಾಗೂ ಬೇರೆ ಕಡೆ 11 ಸ್ಥಳಗಳಲ್ಲಿ ಮಹಜರು ಮಾಡಲಾಗಿದೆ . ಪಾರ್ಟಿ ಮಾಡಿದ್ದ ಸ್ಟೋನಿಬ್ರೂಕ್ ರೆಸ್ಟೋರೆಂಟ್ ಸೇರಿ ಹಲವು ಕಡೆ ಮಹಜರು ಮಾಡಲಾಗಿದೆ.
ದರ್ಶನ್ ವಿಚಾರಣೆ ಬಹುತೇಕ ಮುಗಿದಿದೆ ಎಂದು ಹೇಳಲಾಗಿದೆ. ಹೀಗಾಗಿ ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಿಲ್ಲ. ಇದರಿಂದ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರಕ್ಕೆ ರವಾನಿಸಲು ಕೋರ್ಟ್ ಆದೇಶ ನೀಡಿದೆ. ಪೊಲೀಸರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಅವರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
13 ವರ್ಷಗಳ ಬಳಿಕ ಮತ್ತೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯಬೇಕಿದೆ. ಈ ಹಿಂದೆ ಹೆಂಡತಿ ವಿಜಯಲಕ್ಷ್ಮಿ ಮೇಲೆ ಕೈ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಆಗಲೂ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಇದು ಎರಡನೇ ಬಾರಿಗೆ ದರ್ಶನ್ ಜೈಲು ವಾಸ ಅನುಭವಿಸಿದಂತಾಗಿದೆ.