BJP Infighting | ಉಪ ಚುನಾವಣೆ ಸೋಲಿಗೆ ಯತ್ನಾಳ್ ಕಾರಣ: ರೇಣುಕಾಚಾರ್ಯ ಆಕ್ರೋಶ
ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಅವರು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನಿಮ್ಮ ಹರಕು ಬಾಯಿ, ಹೊಲಸು ಬಾಯಿಯಿಂದಲೇ ಕಳೆದ ಚುನಾವಣೆಯಲ್ಲಿ ಪಕ್ಷ ಸೋಲು ಕಂಡಿದೆ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಬಣ ರಾಜಕಾರಣ ತೀವ್ರಗೊಂಡಿದ್ದು, ಎರಡೂ ಬಣಗಳ ನಡುವೆ ಕಿತ್ತಾಟ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ಯತ್ನಾಳ್ ಬಣ ಹಾಗೂ ವಿಜಯೇಂದ್ರ ಬಣಗಳು ಪರಸ್ಪರ ಟೀಕಾಪ್ರಹಾರ ಮಾಡುತ್ತಲೇ ಇವೆ. ಇವುಗಳ ಮಧ್ಯೆ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಅವರು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನಿಮ್ಮ ಹರಕು ಬಾಯಿ, ಹೊಲಸು ಬಾಯಿಯಿಂದಲೇ ಕಳೆದ ಚುನಾವಣೆಯಲ್ಲಿ ಪಕ್ಷ ಸೋಲು ಕಂಡಿದೆ. ಬಿಜೆಪಿಯ ಸೋಲಿಗೆ ನೀವೇ ಕಾರಣ, ನರೇಂದ್ರ ಮೋದಿಗಿಂತ ನೀವು ದೊಡ್ಡ ಮನುಷ್ಯನಾ? ಶೋಭಾ, ಪ್ರಹ್ಲಾದ್ ಜೋಷಿ ಅವರುಗಳು ವಕ್ಪ್ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ ವಿನಃ ನಿಮಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ ವಿರುದ್ದ ಬಿಜೆಪಿ ಹಿರಿಯ ನಾಯಕ ಡಿ ವಿ ಸದಾನಂದ ಗೌಡ ಮಾತನಾಡಿದ್ದು, ವಕ್ಫ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರ ಒಂದು ತಂಡ ನಡೆಸುತ್ತಿರುವ ಹೋರಾಟಕ್ಕಿಂತ ಪಕ್ಷದ ನಾಯಕರ ನಡುವಿನ ಭಿನ್ನಮತವೇ ಹೆಚ್ಚು ಸದ್ದು ಮಾಡುತ್ತಿದೆ. ಈ ಬಗ್ಗೆ ಹೈಕಮಾಂಡ್ ಗೆ ಎರಡು ಬಾರಿ ಪತ್ರ ಬರೆದರೂ ಅವರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕಿಡಿಕಾರಿದ್ದರು.
ಅದಕ್ಕೆ ಪ್ರತಿಯಾಗಿ ಯತ್ನಾಳ್ ಕೂಡ ಸದಾನಂದ ಗೌಡರಿಗೆ ಎಚ್ಚರಿಕೆ ನೀಡಿದ್ದು, ಸದಾನಂದ ಗೌಡರು ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲದೇ ಹೋದರೆ ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ. ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾನಂದ ಗೌಡರು ಮಾತನಾಡಿರುವುದನ್ನು ಬಿಚ್ಚಿಡುತ್ತೀನಿ. ನನಗಿಂತ ಕೆಟ್ಟದಾಗಿ ಸದಾನಂದ ಗೌಡ ಮಾತನಾಡಿದ್ದಾರೆ. ನಾನು ವಕ್ಸ್ ವಿರುದ್ಧ ಮಾತನಾಡಿದ್ದೇನೆ. ಸದಾನಂದ ಗೌಡ ಯಾಕೆ ಗಾಬರಿಯಾಗಬೇಕು? ಸದಾನಂದ ಗೌಡರೇ, ಗಾಬರಿಯಾಗಬೇಡಿ. ದೀಪ ಆರುವವರ ಬಗ್ಗೆ ನಾನು ಮಾತನಾಡಲ್ಲ, ಸದಾನಂದ ಗೌಡ ದೀಪ ಈಗಾಗಲೇ ಆರಿ ಹೋಗಿದೆ. ನಾನು ಯಾರ ಜೊತೆನೂ ಎಡಸ್ಟ್ ಮೆಂಟ್ ಮಾಡಿಕೊಂಡಿಲ್ಲ. ನಿನಗೂ ನಿನ್ನ ನಾಲಿಗೆಗೂ ಎತ್ತ ಸಂಬಂಧವಯ್ಯ ಸದಾನಂದ... ಎಂದು ವ್ಯಂಗ್ಯ ಮಾಡಿದರು.
ಇದಕ್ಕೆ ಪ್ರತಿಯಾಗಿ ಎಂ ಪಿ ರೇಣುಕಾಚಾರ್ಯ ಯತ್ನಾಳ್ ವಿರುದ್ದ ಸಿಡಿದೆದ್ದಿದ್ದು, ಸದಾನಂದಗೌಡ್ರು ಮಾತಾಡಿದ್ದಕ್ಕೆ ಬಿಚ್ಚೀಡ್ತೀನಿ ಅಂತೀಯಲ್ಲ, ನೀನು ಏನು ಬ್ಲ್ಯಾಕ್ ಮೇಲ್ ಮಾಸ್ಟರಾ? ಅದೇನು ಬಿಚ್ಚಿಡು ನೋಡೋಣ ನಾವು ನಿಂದು ಬಿಚ್ಚಿಡ್ತೀವಿ.. ಬೀದಿಯಲ್ಲಿ ತಮಟೆ ಹೊಡೆಯುತ್ತಾ ಹೋಗ್ತಿರೋರು ನೀವು… ನಾಗರಹಾವುಗಳು ನೀವು .. ಯತ್ನಾಳ್ ನಿನ್ನ ಕೊಡುಗೆ ಏನು..? ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.
ಇವರು ಮನೆಗೆ ಕನ್ನ ಹಾಕೋರು, ಇವರು ಕಾಂಗ್ರೆಸ್ ನ ಏಜೆಂಟ್ ರು… ನೀನು ಏನು ಹಿಟ್ಲರಾ..? ಬಿಜೆಪಿ ಮುಗಿಸು ಅಂತಾ ಯತ್ನಾಳ್‌ಗೆ ಕಾಂಗ್ರೆಸ್ ನವರು ಸುಪಾರಿ ಕೊಟ್ಟಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಯತ್ನಾಳ್ ಗೆ ಸುಫಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ನಾವು ಯಾರೂ ಪರ್ಯಾಯ ಸಭೆಗಳನ್ನು ಮಾಡುತ್ತಿಲ್ಲ. ಪಕ್ಷದ ವೇದಿಕೆಯಲ್ಲಿ ನಾವು ಪ್ರವಾಸ ಮಾಡ್ತಿದ್ದೇವೆ. ದಾವಣಗೆರೆ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಕರೆಸುತ್ತೇವೆ. ವಿಜಯಪುರದ ಹಾಲಿ ಸಚಿವ ಹಾಗೂ ಪ್ರಭಾವಿ ಸಚಿವನ ಜೊತೆ ಹೊಂದಾಣಿಕೆ ಮಾಡಿಕೊಂಡು ನೀನು ಗೆದ್ದು ಇಡೀ ಜಿಲ್ಲೆಯ ಬಿಜೆಪಿ ಶಾಸರನ್ನು ಸೋಲಿಸಿದ್ದಿಯಾ? ಮೊನ್ನೆ ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ಸೋಲಿಗೂ ನೀನೇ ಕಾರಣ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಆರೋಪ ಮಾಡಿದರು.