
ಖ್ಯಾತ ವಿಮರ್ಶಕ ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ.
ಖ್ಯಾತ ವಿಮರ್ಶಕ, ಕವಿ ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ ನಿಧನಕ್ಕೆ ಸಿಎಂ ಸಂತಾಪ
ಕನ್ನಡದ ಪ್ರಾಧ್ಯಪಕ, ಪ್ರಾಂಶುಪಾಲರಾಗಿ, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ, ಹಂಪಿ ವಿವಿಯ ಸಂದರ್ಶಕ ಪ್ರಾಧ್ಯಾಪಕರಾಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.
ಕನ್ನಡದ ಖ್ಯಾತ ವಿಮರ್ಶಕ, ಕವಿ ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ (94) ಬುಧವಾರ(ಮೇ7) ವಯೋಸಹಜ ಕಾಯಿಲೆಯಿಂದ ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಸಾಪ ಅಧ್ಯಕ್ಷರಾಗಿದ್ದಾಗ ಅವರು ತೆಗೆದುಕೊಂಡ ಹಣಕಾಸಿನ ನಿರ್ಣಯಗಳು ಯಶಸ್ವಿಯಾಗಿದ್ದವು. ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ 1931 ಫೆಬ್ರವರಿ 21ರಂದು ಜನಿಸಿದ ಇವರು ಕನ್ನಡದ ಪ್ರಾಧ್ಯಾಪಕರಾಗಿ, ಕಾಲೇಜು ಪ್ರಾಂಶುಪಾಲರಾಗಿ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರಾಗಿ, ಹಂಪಿ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಬೆಂಗಳೂರು, ಮೈಸೂರು, ಕರ್ನಾಟಕ, ಕಲಬುರಗಿ ಮತ್ತು ಮಂಗಳೂರು ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್, ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದು 1989ರಿಂದ 1992ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಕೃತಿಗಳು
ರಸಗಂಗೆ, ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಋಷ್ಯಶೃಂಗ, ಹೇಮಕೂಟ, ಬಿಂದು, ಮುಖಾಮುಖಿ, ಮಣ್ಣಿಗಿಳಿದ ಆಕಾಶ ಇವು ಕವನ ಸಂಕಲನಗಳಾಗಿವೆ. ಶ್ರೀ ಕವಿ ಲಕ್ಷ್ಮೀಶ, ರತ್ನಾಕರವರ್ಣಿ, ಹೊಸಗನ್ನಡ ಕಾವ್ಯ, ಪಂಚಮುಖ ಚಾಮರಸ, ವಚನ ಸಾಹಿತ್ಯ-ಒಂದು ಇಣುಕು ನೋಟ, ಹರಿದಾಸ ಸಾಹಿತ್ಯ ಪರಂಪರೆ, ವಚನ ವಾಙ್ಮಯ ಮತ್ತು ಭಾಷೆ, ಶೂನ್ಯ ಸಂಪಾದನೆಗಳು- ಒಂದು ಅವಲೋಕನ, ಶೂನ್ಯ ಸಂಪಾದನೆ-ಒಂದು ಮರುಚಿಂತನೆ, ಗೂಳೂರು ಸಿದ್ದವೀರಣ್ಣ, ನವ್ಯಕಾವ್ಯ-ಒಂದು ಚಿಂತನೆ ಸೇರಿದಂತೆ ಒಟ್ಟು 28 ವಿಮರ್ಶೆ ಕೃತಿಗಳು, ಐದು ಜೀವನ ಚರಿತ್ರೆಗಳು, ಎಂಟು ಅನುವಾದ ಹಾಗೂ 17 ಸಂಪಾದನಾ ಕೃತಿಗಳನ್ನು ರಚಿಸಿದ್ದಾರೆ.
ಪ್ರಶಸ್ತಿಗಳು
2000ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1997ರಲ್ಲಿ ಕಾವ್ಯಾನಂದ ಪ್ರಶಸ್ತಿ, 2010ರಲ್ಲಿ ವಚನ ಸಾಹಿತ್ಯಶ್ರೀ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, 2011ರಲ್ಲಿ ಬಸವಶ್ರೀ ಪ್ರಶಸ್ತಿ, 2012ರಲ್ಲಿ ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ
ಕನ್ನಡದ ಸಾಹಿತಿ, ಕವಿ ಹಾಗೂ ವಿಮರ್ಶಕರಾಗಿದ್ದ ಪ್ರೊ.ಜಿ.ಎಸ್. ಸಿದ್ದಲಿಂಗಯ್ಯನವರ ನಿಧನದಿಂದ ದುಃಖಿತನಾಗಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ಸೊಗಡನ್ನು ವಿಶ್ವವ್ಯಾಪಿಯಾಗಿಸಲು ಅವಿರತರಾಗಿ ದುಡಿದ ಸಿದ್ದಲಿಂಗಯ್ಯ ಅವರ ನಿಧನ ಸಾರಸ್ವತ ಲೋಕಕ್ಕೆ ಮಾತ್ರವಲ್ಲ ನಾಡಿಗೂ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಮ್ಮ ʼಎಕ್ಸ್ʼ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವ ಸೋಮಣ್ಣ ಭೇಟಿ
ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ರಾಜ್ಯಸಚಿವ ವಿ.ಸೋಮಣ್ಣನವರು ಬೆಂಗಳೂರಿನ ವಿಜಯನಗರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪ್ರೊ.ಜಿ.ಎಸ್. ಸಿದ್ದಲಿಂಗಯ್ಯನವರ ಪಾರ್ಥಿವ ಶರೀರದ ದರ್ಶನ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.